ವರದಿ :  ಗಿರೀಶ್‌ ಮಾದೇನಹಳ್ಳಿ

  ಬೆಂಗಳೂರು (ಜ.28):  ವಿಧಾನಪರಿಷತ್‌ ಉಪಸಭಾಪತಿ ದಿ.ಎಸ್‌.ಎಲ್‌.ಧರ್ಮೇಗೌಡ ಆತ್ಮಹತ್ಯೆಗೆ ಪರಿಷತ್‌ನಲ್ಲಿ ನಡೆದಿದ್ದ ಗಲಾಟೆ ಕಾರಣ ಎಂಬ ಮರಣ ಪತ್ರದಲ್ಲಿನ ಉಲ್ಲೇಖದ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿಗಳು, ಸಚಿವರು ಹಾಗೂ ವಿಧಾನಪರಿಷತ್‌ ಸದಸ್ಯರನ್ನು ವಿಚಾರಣೆಗೊಳಪಡಿಸಲು ರೈಲ್ವೆ ಪೊಲೀಸರು ಮುಂದಾಗಿದ್ದಾರೆ.

2020ರ ಡಿಸೆಂಬರ್‌ 15ರಂದು ವಿಧಾನಪರಿಷತ್‌ನಲ್ಲಿ ನಡೆದ ಗದ್ದಲದ ಸಮಗ್ರ ಮಾಹಿತಿ ನೀಡುವಂತೆ ಕೋರಿ ವಿಧಾನಪರಿಷತ್‌ನ ಕಾರ್ಯದರ್ಶಿ ಮಹಾಲಕ್ಷ್ಮೇ ಅವರಿಗೆ ರೈಲ್ವೆ ಪೊಲೀಸರು ಪತ್ರ ಬರೆದಿದ್ದಾರೆ. ಪರಿಷತ್‌ ಕಾರ್ಯದರ್ಶಿಗಳ ಮಾಹಿತಿ ಆಧರಿಸಿ ಅಂದು ಪರಿಷತ್‌ ಕಲಾಪದಲ್ಲಿ ಹಾಜರಾಗಿದ್ದ ಉಪ ಮುಖ್ಯಮಂತ್ರಿಗಳು, ಸಚಿವರು ಹಾಗೂ ಪರಿಷತ್‌ ಸದಸ್ಯರ ವಿಚಾರಣೆ ನಡೆಯಲಿದೆ ಎಂದು ಗೃಹ ಇಲಾಖೆ ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ವಿಧಾನ ಪರಿಷತ್‌ ಉಪಸಭಾಪತಿ ಎಸ್. ‌ಎಲ್‌ ಧರ್ಮೇಗೌಡ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ..! .

ತಮ್ಮ ಸಾವಿಗೂ ಮುನ್ನ ಧರ್ಮೇಗೌಡ ಅವರು ಬರೆದಿದ್ದಾರೆ ಎನ್ನಲಾದ ಎರಡು ಪುಟಗಳ ಮರಣ ಪತ್ರದಲ್ಲಿ ಡಿ.15ರಂದು ಪರಿಷತ್‌ ಕಲಾಪದಲ್ಲಿ ನಡೆದಿದ್ದ ಘರ್ಷಣೆ ತಮ್ಮ ಮನಸ್ಸಿಗೆ ತುಂಬಾ ಆಘಾತ ಉಂಟುಮಾಡಿತು. ಈ ನೋವಿನಿಂದ ನಾನು ಹೊರಬರಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ತೀರ್ಮಾನಕ್ಕೆ ಬಂದಿದ್ದೇನೆ ಎಂದು ಎರಡು ಬಾರಿ ಅವರು ಉಲ್ಲೇಖಿಸಿದ್ದಾರೆ. ಮರಣ ಪತ್ರದಲ್ಲಿ ಉಲ್ಲೇಖವಾಗಿರುವ ಕಾರಣಕ್ಕೆ ಆರೋಪವನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಕಲಾಪದಲ್ಲಿ ಹಾಜರಿದ್ದ ಎಲ್ಲರಿಂದಲೂ ವಿವರಣೆ ಅಗತ್ಯವಿದೆ. ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿ ಅಧಿಕೃತವಾಗಿಯೇ ಹೇಳಿಕೆ ಪಡೆಯಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಚಿವರು, ಶಾಸಕರ ವಿಚಾರಣೆ:

ಈಗಾಗಲೇ ಪ್ರಕರಣದ ಸಂಬಂಧ ಧರ್ಮೇಗೌಡ ಅವರ ಪತ್ನಿ, ಮಕ್ಕಳು, ಸ್ನೇಹಿತರು ಹಾಗೂ ಸಿಬ್ಬಂದಿ ವಿಚಾರಣೆ ನಡೆಸಿ ಹೇಳಿಕೆ ಪಡೆಯಲಾಗಿದೆ. ಪರಿಷತ್‌ ಕಲಾಪದ ಬಗ್ಗೆ ವಿಧಾನಪರಿಷತ್‌ ಕಾರ್ಯದರ್ಶಿ ನೀಡುವ ಮಾಹಿತಿ ಆಧರಿಸಿ ಮುಂದಿನ ತನಿಖೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

'ಧರ್ಮೇಗೌಡ್ರು ಬಹಳ ಧೈರ್ಯವಂತರು, ಈ ದುರಂತವನ್ನು ಇನ್ನೂ ಅರಗಿಸಿಕೊಳ್ಳಲಾಗ್ತಿಲ್ಲ' ..

ಅಂದು ಪರಿಷತ್‌ ಕಲಾಪದಲ್ಲಿ ಉಪ ಮುಖ್ಯಮಂತ್ರಿ ಡಾ.ಸಿ.ಎಸ್‌.ಅಶ್ವತ್ಥ್ ನಾರಾಯಣ, ಸಚಿವ ಮಾಧುಸ್ವಾಮಿ, ವಿಪಕ್ಷ ನಾಯಕ ಎಸ್‌.ಆರ್‌.ಪಾಟೀಲ್‌, ಹಿರಿಯ ಸದಸ್ಯರಾದ ಬಸವರಾಜ್‌ ಹೊರಟ್ಟಿ, ಶ್ರೀಕಂಠೇಗೌಡ, ಪುಟ್ಟಣ್ಣ, ಮರಿತಿಬ್ಬೇಗೌಡ, ಸಚೇತಕ ನಾರಾಯಣಸ್ವಾಮಿ ಸೇರಿದಂತೆ ಅನೇಕರು ಹಾಜರಿದ್ದರು.

"

120 ಎಕರೆ ಜಮೀನು ವಿಚಾರ ಪ್ರಸ್ತಾಪ

ಚಿಕ್ಕಮಗಳೂರು ಜಿಲ್ಲೆಯಲ್ಲಿರುವ 120 ಎಕರೆ ಜಮೀನು ಹಾಗೂ ಬೆಂಗಳೂರು ಮನೆ ಸೇರಿದಂತೆ ಇತರೆಡೆಯ ಆಸ್ತಿ ವಿಚಾರವನ್ನು ಆತ್ಮಹತ್ಯೆಗೂ ಮುನ್ನ ಧರ್ಮೇಗೌಡ ಅವರು ಬರೆದಿರುವ ಮರಣಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ. ತಮ್ಮ ಮಕ್ಕಳಿಗೆ ಯಾವ್ಯಾವ ಆಸ್ತಿ ಸಿಗಬೇಕು ಎಂದು ಅವರು ಉಲ್ಲೇಖಿಸಿದ್ದಾರೆ. ಅಲ್ಲದೆ, ತಮ್ಮ ಕುಟುಂಬದ ಕ್ಷೇಮದ ಜವಾಬ್ದಾರಿಯನ್ನು ಸೋದರ, ವಿಧಾನಪರಿಷತ್‌ ಸದಸ್ಯ ಎಸ್‌.ಎಲ್‌.ಭೋಜೇಗೌಡ ಅವರು ನೋಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.