ಭಾರತೀಯ ರೈಲ್ವೆ ಇಲಾಖೆಯು ತನ್ನ ಬಡ್ತಿ ಹುದ್ದೆಗಳ ಪರೀಕ್ಷೆಗಳಿಂದ ಕನ್ನಡ ಭಾಷೆಯನ್ನು ಸಂಪೂರ್ಣವಾಗಿ ಕೈಬಿಟ್ಟಿದೆ. ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಮಾತ್ರ ಪರೀಕ್ಷೆ ಬರೆಯಬೇಕೆಂಬ ನಿಯಮದಿಂದಾಗಿ, ಬಡ್ತಿಯ ನಿರೀಕ್ಷೆಯಲ್ಲಿದ್ದ ಸಾವಿರಾರು ಕನ್ನಡಿಗ ಅಭ್ಯರ್ಥಿಗಳ ಭವಿಷ್ಯ ಅತಂತ್ರವಾಗಿದೆ.

ಬೆಂಗಳೂರು (ಫೆ.3) ಭಾರತೀಯ ರೈಲ್ವೆ ಇಲಾಖೆಯ ಪರೀಕ್ಷೆಗಳಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸುವ ಪ್ರವೃತ್ತಿ ಮತ್ತೆ ಮುಂದುವರಿದಿದೆ. ಪದೇಪದೇ ಕನ್ನಡದ ಮೇಲೆ ಇಂತಹ ಮಲತಾಯಿ ಧೋರಣೆ ತೋರುತ್ತಿರುವುದು ಕನ್ನಡಿಗ ಅಭ್ಯರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ರೈಲ್ವೆ ಬೋರ್ಡ್‌ನ ಈ ನಿರ್ಧಾರದಿಂದಾಗಿ ಸ್ಥಳೀಯ ಭಾಷೆಯಲ್ಲೇ ಪರೀಕ್ಷೆ ಬರೆಯುವ ಕನಸು ಕಂಡಿದ್ದ ಸಾವಿರಾರು ಅಭ್ಯರ್ಥಿಗಳು ಈಗ ಕಂಗಾಲಾಗಿದ್ದಾರೆ.

Add Asianetnews Kannada as a Preferred SourcegooglePreferred

ಬಡ್ತಿ ಹುದ್ದೆಗಳ ಪರೀಕ್ಷೆಯಲ್ಲೂ ಭಾಷಾ ತಾರತಮ್ಯ

ರೈಲ್ವೆ ಇಲಾಖೆಯ ಬಡ್ತಿ ಹುದ್ದೆಗಳ ಪರೀಕ್ಷೆಯ ಅಧಿಸೂಚನೆಯಲ್ಲಿ ಕನ್ನಡಕ್ಕೆ ಸಂಪೂರ್ಣವಾಗಿ ಅವಕಾಶ ನಿರಾಕರಿಸಲಾಗಿದೆ. ಪರೀಕ್ಷಾರ್ಥಿಗಳು ಕಡ್ಡಾಯವಾಗಿ ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲೇ ಪರೀಕ್ಷೆ ಬರೆಯಬೇಕು ಎಂದು ಅಧಿಸೂಚನೆ ಹೊರಡಿಸಲಾಗಿದೆ. ಈ ನಿಯಮದಿಂದಾಗಿ ವರ್ಷಾನುಗಟ್ಟಲೆ ಸೇವೆ ಸಲ್ಲಿಸಿ, ಬಡ್ತಿಯ ನಿರೀಕ್ಷೆಯಲ್ಲಿದ್ದ ಕನ್ನಡಿಗ ಸಿಬ್ಬಂದಿಗೆ ಭಾಷೆಯ ಸಮಸ್ಯೆ ದೊಡ್ಡ ಗೋಡೆಯಾಗಿ ಪರಿಣಮಿಸಿದೆ.

ತಾಂತ್ರಿಕ ಕಾರಣ ನೀಡುತ್ತಿರುವ ಇಲಾಖೆ

ಈ ಬಾರಿ ರೈಲ್ವೆ ಬೋರ್ಡ್ ಮಾರ್ಗಸೂಚಿಯಂತೆ ಪರೀಕ್ಷೆಯನ್ನು CBT (Computer Based Test) ಅಂದರೆ ಗಣಕಯಂತ್ರದ ಮೂಲಕ ನಡೆಸಲಾಗುತ್ತಿದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆಯಾಗಿರುವುದರಿಂದ ಕನ್ನಡದಲ್ಲಿ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಲು ಸಾಧ್ಯವಿಲ್ಲ ಎಂಬ ವಿಚಿತ್ರ ತಾಂತ್ರಿಕ ಕಾರಣವನ್ನು ಇಲಾಖೆ ನೀಡುತ್ತಿದೆ. ತಂತ್ರಜ್ಞಾನ ಇಷ್ಟೊಂದು ಮುಂದುವರಿದಿದ್ದರೂ, ಕನ್ನಡದಲ್ಲಿ ಪರೀಕ್ಷೆ ನಡೆಸಲು ಸಾಧ್ಯವಿಲ್ಲ ಎನ್ನುವ ಇಲಾಖೆಯ ಉತ್ತರ ಹಾಸ್ಯಾಸ್ಪದವಾಗಿದೆ ಎಂದು ಪರೀಕ್ಷಾರ್ಥಿಗಳು ದೂರಿದ್ದಾರೆ.

ಪರೀಕ್ಷಾರ್ಥಿಗಳ ಭವಿಷ್ಯ ಅಯೋಮಯ

ಇಲಾಖೆಯ ಈ ಹಠಮಾರಿ ಧೋರಣೆಯಿಂದಾಗಿ ಕನ್ನಡಿಗ ಪರೀಕ್ಷಾರ್ಥಿಗಳಿಗೆ ದಿಕ್ಕು ತೋಚದಂತಾಗಿದೆ. ಹಿಂದಿ ಮತ್ತು ಇಂಗ್ಲಿಷ್ ಭಾಷೆ ಮೇಲೆ ಹಿಡಿತವಿಲ್ಲದ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಹಿನ್ನಡೆ ಅನುಭವಿಸುವ ಆತಂಕ ಎದುರಾಗಿದೆ. ರಾಜ್ಯ ಸರ್ಕಾರ ಮತ್ತು ಕನ್ನಡ ಸಂಘಟನೆಗಳು ಈ ಕೂಡಲೇ ಮಧ್ಯಪ್ರವೇಶಿಸಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.