ರಾಯಚೂರು ಜಿಲ್ಲೆಯ ಬಾಗಲವಾಡ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಪ್ರಶ್ನಿಸಿದ ಗ್ರಾಮಸ್ಥನ ಮೇಲೆ ಗ್ರಾಮ ಪಂಚಾಯತ್ ಅಧ್ಯಕ್ಷ ಹಲ್ಲೆ ನಡೆಸಿದ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಗ್ರಾಮಸ್ಥರ ಮೌನಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ರಾಯಚೂರು(ಜೂ.26): ಜಿಲ್ಲೆಯ ಮಾನ್ವಿ ತಾಲೂಕಿನ ಬಾಗಲವಾಡ ಗ್ರಾಮದಲ್ಲಿ ಗ್ರಾಮಸಭೆ ವೇಳೆ ಗಂಭೀರ ಘಟನೆಯೊಂದು ನಡೆದಿದ್ದು, ಕುಡಿಯುವ ನೀರಿನ ತೀವ್ರ ಸಮಸ್ಯೆಯನ್ನು ಪ್ರಶ್ನಿಸಿದ ಗ್ರಾಮಸ್ಥ ಬಸಪ್ಪನ ಮೇಲೆ ಗ್ರಾಮ ಪಂಚಾಯತ್ ಅಧ್ಯಕ್ಷ ಪಿ. ತಿಪ್ಪಣ್ಣ ಆಕ್ರೋಶಗೊಂಡು ಹಲ್ಲೆ ನಡೆಸಿದ್ದಾರೆ.
ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಗ್ರಾಮಸ್ಥರ ಮುಂದೆಯೇ ಹೊಡೆದಾಟ ನಡೆದಿದ್ದು, ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕುಡಿಯಲು ನೀರು ಕೇಳಬಾರದಾ?
ಗ್ರಾಮದಲ್ಲಿ ಕುಡಿಯುವ ನೀರಿನ ಹಾಹಾಕಾರ ಸೇರಿದಂತೆ ಹಲವು ಸಮಸ್ಯೆಗಳು ತಾಂಡವಾಡುತ್ತಿದ್ದರೂ, ಗ್ರಾಮ ಪಂಚಾಯತ್ ಅಧಿಕಾರಿಗಳು ಮತ್ತು ಅಧ್ಯಕ್ಷರು ಕೇವಲ ಕಾಟಾಚಾರಕ್ಕೆ ಸಭೆ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಸಮಸ್ಯೆ ಎತ್ತಿದ ಬಸಪ್ಪನ ಮೇಲೆ ತಿಪ್ಪಣ್ಣ ಹಲ್ಲೆ ನಡೆಸಿದ್ದಾರೆ. ದುರಂತ ಎಂದರೆ ಗ್ರಾಮದ ಸಮಸ್ಯೆ ಕೇಳಿದ್ದ ಬಸಪ್ಪನ ಮೇಲೆ ಹಲ್ಲೆ ನಡೆಯುತ್ತಿದ್ದರೂ,ಇತರ ಗ್ರಾಮಸ್ಥರು ಮೌನವಾಗಿ ನೋಡುತ್ತಾ ನಿಂತಿದ್ದಾರೆ. ಈ ನಡವಳಿಕೆಗೆ ನೆಟ್ಟಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಬಸಪ್ಪ ತನ್ನ ಸಮಸ್ಯೆ ಕೇಳಿದ್ದನಾ? ಬಸಪ್ಪನ ಬೆಂಬಲಕ್ಕೆ ನಿಲ್ಲದ ಗ್ರಾಮಸ್ಥರ ವಿರುದ್ಧ ಕಿಡಿಕಾರಿದ್ದಾರೆ.
ಗ್ರಾಮ ಪಂಚಾಯತಿ ನಿರ್ಲಕ್ಷ್ಯ ಮತ್ತು ಅಧಿಕಾರಿಗಳ ದೌರ್ಜನ್ಯದ ವಿರುದ್ಧ ಜನರ ಆಕ್ರೋಶ ಹೆಚ್ಚಾಗುತ್ತಿದೆ. ಈ ಘಟನೆಯ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದೇ ಎಂಬುದನ್ನು ಕಾದು ನೋಡಬೇಕಿದೆ.
