ರಾಜ್ಯದ ಮಾರುಕಟ್ಟೆಗೆ ಅಮುಲ್‌ ಹಾಲು ತಂದಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್ ನಾಯಕರಿಗೆ ಸಾಥ್‌ ನೀಡುವ ನಿಟ್ಟಿನಲ್ಲಿ ರಾಹುಲ್‌ ಗಾಂಧಿ ಬೆಂಗಳೂರಿನ ಜೆ.ಪಿ. ನಗರದಲ್ಲಿ ನಂದಿನಿ ಪೇಡೆ ಮತ್ತು ಐಸ್ ಕ್ರೀಂ ಅನ್ನು ಸವಿದರು.

ಬೆಂಗಳೂರು (ಏ.16): ಹಲವು ದಿನಗಳಿಂದ ಗುಜರಾತ್‌ನ ಅಮುಲ್‌ ಹಾಲನ್ನು ರಾಜ್ಯದ ಮಾರುಕಟ್ಟೆಗೆ ತಂದಿರುವ ಹಿನ್ನೆಲೆಯಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್ ನಾಯಕರಿಗೆ ಸಾಥ್‌ ನೀಡುವ ನಿಟ್ಟಿನಲ್ಲಿ ಕಾಂಗ್ರೆಸ್ ವರಿಷ್ಠ ರಾಹುಲ್‌ ಗಾಂಧಿ ಅವರು ಬೆಂಗಳೂರಿನ ಜೆ.ಪಿ. ನಗರದಲ್ಲಿ ರಸ್ತೆ ಬದಿಯಲ್ಲಿದ್ದ ಕೆಎಂಎಫ್‌ ಬೂತ್‌ಗೆ ತೆರಳಿ ನಂದಿನಿ ಪೇಡೆ ಮತ್ತು ಐಸ್ ಕ್ರೀಂ ಅನ್ನು ಸವಿದರು.

ಜೆಪಿ ನಗರದಲ್ಲಿ ಬೀದಿ ಬದಿ ವ್ಯಾಪಾರಿಗಳು ಹಾಗೂ ಇತರೆ ರ್ಸಾಜನಿಕರೊಂದಿಗೆ ಆಯೋಜಿಸಲಾಗಿದ್ದ ಸಂವಾದ ಸಭೆಯಲ್ಲಿ ಭಾಗಗವಹಿಸಿ ಮಾತನಾಡಿದ ರಾಹುಲ್‌ ಗಾಂಧಿ ಅವರು, ಪಕ್ಕದಲ್ಲಿಯೇ ಇದ್ದ ಕೆಎಂಎಫ್ ಬೂತ್‌ಗೆ ತೆರಳಿ ಅಲ್ಲಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಪರಿಶೀಲನೆ ಮಾಡಿದರು. ನಂತರ ನಂದಿನಿ ಪೇಡೆಗಳನ್ನು ತಿಂದು ಬಾಯಿ ಚಪ್ಪರಿಸಿದರು. ನಂತರ, ನಂದಿನಿ ಐಎಸ್‌ಕ್ರೀಂಗಳನ್ನು ತಿಂದು, ಅಲ್ಲಿ ಜೊತೆಗಿದ್ದ ಹಲವರಿಗೆ ನಂದಿನಿ ಐಸ್‌ಕ್ರೀಂಗಳನ್ನು ಕೊಡಿಸಿದರು.

ರಾಹುಲ್‌ ಗಾಂಧಿ ಮುಂದೆ ಮುಖ್ಯಮಂತ್ರಿ ನಿಲುವು ಪ್ರಕಟಿಸಿದ ಮಲ್ಲಿಕಾರ್ಜುನ ಖರ್ಗೆ!

ಹಾಲಿನ ಉತ್ಪನ್ನಗಳ ಬಗ್ಗೆ ಮಾಹಿತಿ ಸಂಗ್ರಹ: ಬೂತ್‌ ಮಾಲೀಕನೊಂದಿಗೆ ಮಾತುಕತೆ ನಡೆಸಿದ ರಾಹುಲ್‌ ಗಾಂಧಿ ನಂದಿನಿ ಉತ್ಪನ್ನಗಳು ಎಲ್ಲಿಂದ ಬರುತ್ತವೆ. ಎಷ್ಟು ವರ್ಷದಿಂದ ನೀವು ಈ ಕೆಲಸ ಮಾಡುತ್ತಿದ್ದೀರಿ? ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಂಗಡಿ ಮಾಲೀಕ ಬಳ್ಳಾರಿಯಿಂದ ನಂದಿನಿ ಉತ್ಪನ್ನಗಳು ಬರುತ್ತವೆ ಎಂದು ಮಾಹಿತಿ ನೀಡಿದರು. ಕೊನೆಗೆ ರಾಹುಲ್‌ ಗಾಂಧಿ ಅವರೊಂದಿಗೆ ಬೂತ್‌ನ ಮಾಲೀಕ ಫೋಟೋ ತೆಗೆಸಿಕೊಂಡು ಸಂತಸಪಟ್ಟರು. ಇನ್ನು ಅಂಗಡಿಯಿಂದ ಹೊರಡುವಾಗ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಂದಿನಿ ಅಂಗಡಿ ಮಾಲೀಕನಿಗೆ 1 ಸಾವಿರ ರೂ. ಹಣವನ್ನು ನೀಡಿದರು. 

ನಂದಿನಿ ನುಂಗಲು ಪ್ರಯತ್ನ ಎಂದು ಸಿದ್ದರಾಮಯ್ಯ ಆಕ್ರೋಶ: ಇಂದು ಮಧ್ಯಾಹ್ನ ಕೋಲಾರದಲ್ಲಿ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆದ ಕಾಂಗ್ರೆಸ್‌ ಜೈ ಭಾರತ ಸಮಾವೇಶದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಕರ್ನಾಟಕದ ಬ್ಯಾಂಕ್‌ಗಳನ್ನ ನುಂಗಿದ್ದು ಆಯ್ತು. ಈಗ ನಂದಿನಿ‌ ನುಂಗಲು ಹೊರಟಿದ್ದಾರೆ. ಲಕ್ಷಾಂತರ ರೈತರು ಹಾಲು ಉತ್ಪಾದನೆ ಮಾಡಿ ಬದುಕು ಕಟ್ಟಿಕೊಳ್ತಿದ್ದಾರೆ. ಅಮಿತ್ ಶಾ ಅವರು ಸಹಕಾರ ಮಂತ್ರಿ ಆದ ಮೇಲೆ KMF ಅನ್ನ ಅಮೂಲ್ ನಲ್ಲಿ ಸೇರ್ಪಡೆ ಮಾಡೋ ಪ್ರಯತ್ನ ಮಾಡಿದರು. ಈಗ ಅಮೂಲ್ ಉತ್ಪನ್ನಗಳನ್ನ ಕರ್ನಾಟಕದ ಮಾರುಕಟ್ಟೆಗೆ ತಂದು ನಂದಿನಿ ಉತ್ಪನ್ನಗಳನ್ನ ಮಾರಾಟ ಮಾಡದಂತೆ ಪ್ರಯತ್ನ ಮಾಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ನಂದಿನಿ ಉತ್ಪನ್ನಗಳನ್ನು ರಾಹುಲ್‌ ಗಾಂಧಿ ಸವಿದರು. 

ಬಿಜೆಪಿ ಅದಾನಿಗೆ ಹಣ ಕೊಟ್ಟರೆ, ಕಾಂಗ್ರೆಸ್ ಜನರಿಗೆ ಕೊಡುತ್ತೆ; ಕೋಲಾರದಲ್ಲಿ ರಾಹುಲ್ ಗಾಂಧಿ ಭಾಷಣ

ನಂದಿನಿ ಉತ್ಪನ್ನ ಖರೀದಿಸುವಂತೆ ಮನವಿ: ಕರ್ನಾಟಕದಲ್ಲಿ ನಂದಿನಿ ಉತ್ಪನ್ನಗಳು ದೊರೆಯುತ್ತಿಲ್ಲ. ಕೃತಕ ಅಭಾವ‌ ನಿರ್ಮಾಣ ಮಾಡಿ ಅಮೂಲ್ ಕರ್ನಾಟಕಕ್ಕೆ ತರೋ ಪ್ರಯತ್ನ ಮಾಡ್ತಿದ್ದಾರೆ. ಇವತ್ತು ಹಾಲು ಉತ್ಪಾದನೆ 81 ಲಕ್ಷ ಲೀಟರ್ ಗೆ ಇಳಿದಿದೆ. ಕನ್ನಡಿಗರಲ್ಲಿ ಮನವಿ ಮಾಡುತ್ತೇನೆ. ಕೇಂದ್ರ ಸರ್ಕಾರದ ಈ ದುಷ್ಟ ಪ್ರಯತ್ನವನ್ನ ನಾವು ತಡೆಯಬೇಕು. ಇದು ಕನ್ನಡಿಗರ ಮರ್ಯಾದೆ ಪ್ರಶ್ನೆ. ನಾವೆಲ್ಲರೂ ಕನ್ನಡಿಗರು. ಅಮೂಲ್ ಪದಾರ್ಥಗಳನ್ನ ಕೊಂಡುಕೊಳ್ಳಬಾರದು. ನಂದಿನಿ ಪ್ರಾಡಕ್ಟ್ ಮಾತ್ರ ಖರೀದಿ ಮಾಡ್ತೀವಿ ಅಂತ ಶಪಥ ಮಾಡಬೇಕು. ಅ ಮೂಲಕ ಕೇಂದ್ರದ ಹುನ್ನಾರ, ಶಾ ಹುನ್ನಾರ ತಡೆಗಟ್ಟಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದರು.