’ಜೈಲಿಗೆ ಹೋಗಿಬಂದ ಮೇಲೆ ರಾಜಕೀಯ ಬಿಟ್ಟು ಕುಳಿತಿದ್ದಾಗ ಮತ್ತೆ ನನ್ನನ್ನು ಕರೆದೊಯ್ದವರು ಅನಂತ್‌’- ಆರ್‌.ಅಶೋಕ್‌, ಮಾಜಿ ಉಪಮುಖ್ಯಮಂತ್ರಿ

ರಾಜ್ಯದಲ್ಲಿ ಬಿಜೆಪಿಯನ್ನು ಸಂಘಟಿಸಲು ಮತ್ತು ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಕೇಂದ್ರ ಸಚಿವರಾಗಿದ್ದ ಅನಂತಕುಮಾರ್‌ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಜೋಡಿಯಾಗಿ ಕೆಲಸ ಮಾಡಿದ್ದಾರೆ. ಪಕ್ಷದ ಪಾಲಿಗೆ ಅನಂತಕುಮಾರ್‌ ಮೆದುಳಾದರೆ ಯಡಿಯೂರಪ್ಪ ದೇಹ ಎಂಬಂತಿದ್ದರು.

ಅನಂತಕುಮಾರ್‌ ಮತ್ತು ಯಡಿಯೂರಪ್ಪ ಅವರಿಬ್ಬರ ಸಂಘಟನಾತ್ಮಕ ಕಾರ್ಯ ತಂತ್ರದಿಂದಾಗಿ ಬಿಜೆಪಿ ರಾಜ್ಯದಲ್ಲಿ ಈ ಮಟ್ಟಕ್ಕೆ ಬೆಳೆದಿದೆ. ಸಂಘಟನಾತ್ಮಕ ಶಕ್ತಿಯಿಂದಾಗಿ ಅತ್ಯುನ್ನತ ಸ್ಥಾನ ತಲುಪಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಕರ್ನಾಟಕ ಹೊರತಪಡಿಸಿ ಬೇರೆ ಕಡೆ ನೋಡಲು ಸಾಧ್ಯವಿಲ್ಲ. ಕೇರಳ, ಆಂಧ್ರ, ತಮಿಳುನಾಡಿನಲ್ಲಿ ಬಿಜೆಪಿ ಹೇಳಿಕೊಳ್ಳುವಷ್ಟರ ಮಟ್ಟಿಗೆ ಬೆಳೆದಿಲ್ಲ. ರಾಜ್ಯದಲ್ಲಿ ಬಿಜೆಪಿ ಪ್ರಬಲ ಪಕ್ಷವಾಗಿ ಹೊರಹೊಮ್ಮಲು ಅನಂತಕುಮಾರ್‌ ಅವರ ಜಾಣ್ಮೆ ಮತ್ತು ಯಡಿಯೂರಪ್ಪ ಅವರ ಹೋರಾಟವೇ ಕಾರಣ.

ಪಕ್ಷವನ್ನು ಸಂಘಟಿಸಲು ಯಾರಿಗೆ ಯಾವ ಜವಾಬ್ದಾರಿಯನ್ನು ನೀಡಬೇಕು ಎಂಬ ಕಲೆ ಅನಂತಕುಮಾರ್‌ ಅವರಲ್ಲಿತ್ತು. ಪಕ್ಷದ ಬಲ ಹೆಚ್ಚಿಸಲು ರಾಜಕೀಯವಾಗಿ ಯಾವ ರೀತಿಯಲ್ಲಿ ರಣತಂತ್ರಗಳನ್ನು ರೂಪಿಸಬೇಕು ಎಂಬುದನ್ನು ಕರಗತ ಮಾಡಿಕೊಂಡಿದ್ದರು. ಅನಂತಕುಮಾರ್‌ ಅವರೊಂದಿಗೆ 30 ವರ್ಷಗಳಿಂದ ಒಡನಾಟ ಇತ್ತು. ಪಕ್ಷಕ್ಕಾಗಿ ಅವರ ಶ್ರಮವನ್ನು ಬಹಳ ಹತ್ತಿರದಿಂದ ನೋಡಿದ್ದೇನೆ.

ತುರ್ತು ಪರಿಸ್ಥಿತಿಯಲ್ಲಿ ಮಾಜಿ ಪ್ರಧಾನಿ ದಿವಂಗತರಾದ ಇಂದಿರಾಗಾಂಧಿ ಕೈಗೊಳ್ಳುತ್ತಿದ್ದ ನಿರ್ಧಾರಗಳನ್ನು ವಿರೋಧಿಸಿ ದೇಶದೆಲ್ಲೆಡೆ ಪ್ರತಿಭಟನೆ ನಡೆಸಲಾಗುತ್ತಿತ್ತು. ಈ ಪ್ರತಿಭಟನೆಯಲ್ಲಿ ಭಾಗಿಯಾಗಿ ಜೈಲು ವಾಸ ಅನುಭವಿಸಿದ್ದೆ. ನನ್ನೊಂದಿಗೆ ನನ್ನ ಸಹೋದರ ಸಹ ಸೆರೆವಾಸ ಅನುಭವಿಸಿದ್ದ. ಇದನ್ನು ಕಂಡ ನಮ್ಮ ಪೋಷಕರು ರಾಜಕೀಯದಿಂದ ದೂರ ಉಳಿಯುವಂತೆ ತಿಳಿಸಿದರು. ಅಂತೆಯೇ ಸುಮಾರು ಒಂದು ವರ್ಷ ಕಾಲ ರಾಜಕೀಯವಾಗಿ ದೂರ ಉಳಿದಿದ್ದೆ. ಹುಬ್ಬಳ್ಳಿಯಿಂದ ಬೆಂಗಳೂರಿಗೆ ಆಗಮಿಸಿದ್ದ ಅನಂತಕುಮಾರ್‌ ಯಶವಂತಪುರದಲ್ಲಿ ಮನೆ ಮಾಡಿಕೊಂಡು ನೆಲೆಸಿದ್ದರು. ನನಗೆ ಯಾರೂ ಬೆಂಬಲಕ್ಕೆ ಬರಲಿಲ್ಲ ಎಂಬ ಕಾರಣಕ್ಕಾಗಿ ಬೇಜಾರಾಗಿ ಮನೆಯಲ್ಲಿದ್ದೆ. ಆಗ ಒಮ್ಮೆ ನಮ್ಮ ಮನೆಗೆ ಬಂದ ಅನಂತಕುಮಾರ್‌ ಅವರು ಮತ್ತೊಮ್ಮೆ ರಾಜಕೀಯ ಬರುವಂತೆ ಪ್ರೇರೇಪಿಸಿದರು. ಒಟ್ಟಿಗೆ ಕೆಲಸ ಮಾಡೋಣ ಎಂದು ಕರೆದುಕೊಂಡು ಹೋಗಿ ನನ್ನ ಕೈ ಹಿಡಿದು ನಡೆಸಿದರು.

ರಾಜ್ಯದಲ್ಲಿ ಬಿಜೆಪಿ ಮೊದಲ ಬಾರಿಗೆ ಜೆಡಿಎಸ್‌ ಜೊತೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸಿದ ವೇಳೆ ನಾನು ಆರೋಗ್ಯ ಸಚಿವನಾಗಲು ಅವರೇ ಕಾರಣ. ಮೊದಲು ಆಹಾರ ಸಚಿವ ಸ್ಥಾನ ನೀಡಲಾಗಿತ್ತು. ಆದರೆ, ಅದನ್ನು ಬದಲಿಸಿ ಆರೋಗ್ಯ ಖಾತೆಯನ್ನು ನೀಡುವಂತೆ ವರಿಷ್ಠರಲ್ಲಿ ಮನವಿ ಮಾಡಿದರು. ಪಕ್ಷ ಸೇರಿದಂತೆ ನಾಯಕರನ್ನು ಬೆಳೆಸಲು ಅಪಾರವಾದ ಕೆಲಸ ಮಾಡಿದ್ದಾರೆ. ಹಲವು ತೀರ್ಮಾನಗಳನ್ನು ಒಟ್ಟೊಟ್ಟಿಗೆ ಕುಳಿತು ಚರ್ಚಿಸಿ ಕೈಗೊಳ್ಳಲಾಗುತ್ತಿತ್ತು. ರಾಜ್ಯದಲ್ಲಿ ರಾಜಕೀಯ ಬೆಳವಣಿಗೆಗಳು ನಡೆದರೆ ಹಲವು ಸಲಹೆಗಳನ್ನು ನೀಡುತ್ತಿದ್ದರು. ಕಷ್ಟದ ಪರಿಸ್ಥಿತಿಯಲ್ಲಿ ಸಮಾಧಾನ, ಸಾಂತ್ವನ ಹೇಳಿ ಧೈರ್ಯ ತುಂಬುತ್ತಿದ್ದರು.

ಬಿಜೆಪಿಯಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹಲವು ಹುದ್ದೆಗಳನ್ನು ನಿರ್ವಹಣೆ ಮಾಡಿದ್ದಾರೆ. ಕೇಂದ್ರದ ಸಚಿವರಾಗಿ ರಾಜ್ಯಕ್ಕೆ ಸಿಗಬೇಕಾದ ನ್ಯಾಯವನ್ನು ಒದಗಿಸಿಕೊಡುವಲ್ಲಿ ಕೇಂದ್ರದ ನಾಯಕರೊಂದಿಗೆ ಚರ್ಚಿಸಿ ಕೊಡಿಸಿದ್ದಾರೆ. ಮಾಜಿ ಪ್ರಧಾನಿ ದಿವಂಗತ ಎ.ಬಿ.ವಾಜಪೇಯಿ ಮತ್ತು ಪಕ್ಷದ ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ ಅವರನ್ನು ಅನಂತಕುಮಾರ್‌ ಬಹಳ ಹಚ್ಚಿಕೊಂಡಿದ್ದರು. ಅವರಿಬ್ಬರೂ ಕೈಗೊಳ್ಳುವ ಬಹಳಷ್ಟುನಿರ್ಣಯಗಳಲ್ಲಿ ಅನಂತಕುಮಾರ್‌ ಪಾತ್ರ ಇರುತ್ತಿತ್ತು. ಪಕ್ಷವು ಕೈಗೊಳ್ಳುವ ಹೋರಾಟಗಳಲ್ಲಿ ನುಡಿಗಳನ್ನು ರೂಪಿಸುವಲ್ಲಿ ಸಲಹೆಗಳನ್ನು, ಮಾರ್ಗದರ್ಶನಗಳನ್ನು ನೀಡುತ್ತಿದ್ದರು.

ಶ್ವಾಸಕೋಶ ಕ್ಯಾನ್ಸರ್‌ ಪತ್ತೆಯಾದ ಬಳಿಕ ಅದರಿಂದ ಹೊರಬರುವ ಧೈರ್ಯ ಅವರಲ್ಲಿತ್ತು. ಬಹಳ ಸಲ ಈ ಬಗ್ಗೆ ನನ್ನೊಂದಿಗೆ ಮಾತನಾಡಿದ್ದಾರೆ. ನಾಲ್ಕು ದಿನಗಳ ಹಿಂದೆ ಅನಂತಕುಮಾರ್‌ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದೆ. ವೈದ್ಯರು ಸಹ ಆರೋಗ್ಯದಲ್ಲಿ ಸುಧಾರಣೆಯಾಗುತ್ತಿದೆ ಎಂದಿದ್ದರು. ಆದರೆ, ಬೆಳಗಿನಜಾವ ಅವರ ನಿಧನ ಸುದ್ದಿ ಕೇಳಿ ಆಘಾತವಾಯಿತು. ಕೇಂದ್ರ ಮತ್ತು ರಾಜ್ಯಕ್ಕೆ ಕೊಂಡಿಯಾಗಿದ್ದ ಅವರ ನಿಧನದಿಂದ ಈಗ ಕೊಂಡಿ ಕಳಚಿದಂತಾಗಿದೆ. ನನಗೆ ಇದು ಎರಡನೇ ಆಘಾತ. ಮಾಜಿ ಶಾಸಕ ವಿಜಯಕುಮಾರ್‌ ನಿಧನ ಮೊದಲನೇ ಆಘಾತವಾಗಿತ್ತು. ನನಗೆ ಒಂಟಿತನ ಕಾಡುತ್ತಿದೆ.

- ಆರ್‌.ಅಶೋಕ್‌, ಮಾಜಿ ಉಪಮುಖ್ಯಮಂತ್ರಿ