ಬೆಂಗಳೂರು (ಡಿ.20):  ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ಕುಳಿತು ಸರ್ಕಾರ ನಡೆಸುತ್ತಿದ್ದಾಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಣ್ಣು ಕಾಣಿಸಲಿಲ್ಲವೇ? ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದರೂ ಮೌನವಾಗಿದ್ದದ್ದು ಏಕೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಪ್ರಶ್ನಿಸಿದ್ದಾರೆ. 

ನಗರದಲ್ಲಿ ಶನಿವಾರ ನಡೆದ ರಾಜ್ಯ ಬಿಜೆಪಿ ರೈತ ಮೋರ್ಚಾ ಕಾರ್ಯಕಾರಿಣಿ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಕುಮಾರಸ್ವಾಮಿ ಆಡಳಿತದ ಬಗ್ಗೆ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದಾಗಲೇ ಪ್ರಶ್ನಿಸಬೇಕಿತ್ತು. ಮೈತ್ರಿ ಸರ್ಕಾರ ಉರುಳಿದ ಮೇಲೆ ಕೇಳಿದರೇನು ಪ್ರಯೋಜನ. ನಾವು ಜೆಡಿಎಸ್‌ ಜತೆ ಒಳ ಒಪ್ಪಂದ ಮಾಡಿಕೊಂಡಿಲ್ಲ. ಈ ಒಳ ಒಪ್ಪಂದವೆಲ್ಲಾ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕೆಲಸ. ಯಾಕೆಂದರೆ ಅವರಿಗೆ ಉದ್ಯೋಗ ಇಲ್ಲ. ನಮಗೆ ಸರ್ಕಾರದ ಉದ್ಯೋಗ ಇದ್ದು, ಒಳ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಟಾಂಗ್‌ ಕೊಟ್ಟರು.

ಬಿಬಿಎಂಪಿ ಚುನಾವಣೆ ಮುಂದೂಡುವುದು ನಮ್ಮ ಉದ್ದೇಶವಲ್ಲ: ಸಚಿವ ಅಶೋಕ್‌ ..

ತಮ್ಮ ಸೋಲಿನ ಕುರಿತು ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಹುಶಃ ಸಿದ್ದರಾಮಯ್ಯ ಅವರನ್ನು ಸೋಲಿಸಿದ್ದು ಡಿ.ಕೆ. ಶಿವಕುಮಾರ್‌ ಅವರೇ ಆಗಿರಬೇಕು. ಏಕೆಂದರೆ, ಸಿದ್ದರಾಮಯ್ಯ ಹೇಳಿಕೆಗೆ ಮೊದಲು ಪ್ರತಿಕ್ರಿಯೆ ಕೊಟ್ಟವರೇ ಡಿ.ಕೆ.ಶಿವಕುಮಾರ್‌. ಇದು ಕಾಂಗ್ರೆಸ್‌ನ ಆಂತರಿಕ ಕಚ್ಚಾಟ ಅಷ್ಟೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಅವರ ಜಗಳ ಈಗ ಬೀದಿಗೆ ಬಂದಿದೆ ಎಂದರು.

ಸಿದ್ದರಾಮಯ್ಯ ಅವರು ಸರಿಯಾದ ಮುಖ್ಯಮಂತ್ರಿಯಾಗಿದ್ದರೆ ಏಕೆ ಸೋಲುತ್ತಿದ್ದರು? ಅವರ ಆಡಳಿತ ಕೆಟ್ಟದ್ದಾಗಿತ್ತು. ಹೀಗಾಗಿಯೇ ಅವರ ಕ್ಷೇತ್ರದಲ್ಲಿಯೇ ಜನ ಅವರಿಗೆ ಮುಕ್ತಿ ಕೊಟ್ಟರು ಎಂದು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಸ್ಪಷ್ಟಪಡಿಸಿದ್ದಾರೆ. ಅವರ ಹೇಳಿಕೆಗೆ ನಮ್ಮೆಲ್ಲರ ಸಹಮತ ಇದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನಾಯಕತ್ವಕ್ಕೆ ಎಲ್ಲಾ ಸಭೆಗಳಲ್ಲಿಯೂ ಒಮ್ಮತ ಸೂಚಿಸಲಾಗಿದೆ. ಯಡಿಯೂರಪ್ಪ ನಾಯಕತ್ವದಲ್ಲಿಯೇ ಮುಂದುವರಿಯುತ್ತೇವೆ ಎಂದರು.

- ಸಮನ್ವಯ ಸಮಿತಿ ಅಧ್ಯಕ್ಷರಾಗಿ ಮೌನವಾಗಿದ್ದಿದ್ದು ಏಕೆ: ಅಶೋಕ್‌ ಪ್ರಶ್ನೆ