ವಿಪಕ್ಷ ನಾಯಕ ಆರ್.ಅಶೋಕ್ ಅವರು ರಾಹುಲ್ ಗಾಂಧಿಯವರನ್ನು 'ಪಾರ್ಟ್ ಟೈಂ ರಾಜಕಾರಣಿ' ಎಂದು ಟೀಕಿಸಿದ್ದಾರೆ. ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ನಡುವಿನ ತಿಕ್ಕಾಟದಿಂದ ಸರ್ಕಾರ ಪತನಗೊಂಡು ಮಧ್ಯಂತರ ಚುನಾವಣೆ ಎದುರಾಗಲಿದೆ.
ಚಾಮರಾಜನಗರ (ನ.16): ರಾಹುಲ್ ಗಾಂಧಿ ಓರ್ವ ಪಾರ್ಟ್ ಟೈಂ ರಾಜಕಾರಣಿ, ಚುನಾವಣೆ ವೇಳೆ, ಚುನಾವಣೆ ನಂತರ ವಿದೇಶಕ್ಕೆ ಹೋಗುತ್ತಾರೆ. ಬರಿ ದೇಶ, ವಿದೇಶ ಸುತ್ತುವುದೇ ಇವರ ಕೆಲಸವಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದರು.
ಕಾಂಗ್ರೆಸ್ ಗೆದ್ದರೆ ಮಾತ್ರ ಇವಿಎಂ ಸರಿ ಇರುತ್ತೆ:
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಗಾಂಧಿ ಕುಟುಂಬದ ವಿರುದ್ಧ ಕಿಡಿ ಕಾರಿದರು. ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಮಾತ್ರ ಇವಿಎಂ ಸರಿಯಾಗಿರುತ್ತೆ. ಬಿಜೆಪಿ ಅಥವಾ ಬೇರೆ ಪಕ್ಷ ಗೆದ್ರೆ ಕಾಂಗ್ರೆಸ್‌ನವರಿಗೆ ಇವಿಎಂನಲ್ಲಿ ಮೋಸ ಆಗಿರುತ್ತೆ ಎಂದು ತಿರುಗೇಟು ನೀಡಿದರು.
ಮತ ಚೋರಿ ಒಂದು ಸುಳ್ಳಿನ ಸಂತೆ:
ಇವರ ಮತ ಚೋರಿ ಸುಳ್ಳಿನ ಕಂತೆಯನ್ನು ದೇಶದ ಜನ ಒಪ್ಪಿಲ್ಲ. ಗಾಂಧಿ ಕುಟುಂಬದ ಆಟ ಇನ್ನು ಯಾವುದೇ ಕಾರಣಕ್ಕೂ ನಡೆಯುವುದಿಲ್ಲ. ಬಿಹಾರ ಚುನಾವಣೆ ಬಳಿಕ ರಾಹುಲ್ ಗಾಂಧಿ ಡಮ್ಮಿ ಆಗಿದ್ದಾರೆ. ಇನ್ಮೇಲೆ ರಾಜ್ಯದಲ್ಲಿ ಏನಿದ್ರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದೆ ಪ್ರಾಬಲ್ಯ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಸ್ತ್ರ ಬಿಹಾರ ಚುನಾವಣೆಯಲ್ಲಿ ವರ್ಕೌಟ್ ಆಗಿಲ್ಲ ಎಂದರು.
ಸಿದ್ದರಾಮಯ್ಯ-ಡಿಕೆಶಿ ನಡುವೆ ತಿಕ್ಕಾಟಕ್ಕೆ ಸರ್ಕಾರ ಬಿದ್ದೋಗುತ್ತೆ:
ಬಿಹಾರ ಚುನಾವಣೆಯ ಫಲಿತಾಂಶದ ಬಳಿಕ ಸಿದ್ದರಾಮಯ್ಯ ಪ್ರಾಬಲ್ಯರಾಗಿದ್ದಾರೆ. ಸಿಎಂ ಕುರ್ಚಿಯನ್ನು ಸಿದ್ದರಾಮಯ್ಯ ಬಿಟ್ಟು ಕೊಡಲ್ಲ. ಡಿ.ಕೆ .ಶಿವಕುಮಾರ್ ಸುಮ್ನೆ ಇರೋಲ್ಲ, ಇವರಿಬ್ಬರ ತಿಕ್ಕಾಟದ ಮಧ್ಯೆ ಸರ್ಕಾರ ಬಿದ್ದು ಹೋಗುತ್ತೆ. ಆಗ, ಮಧ್ಯಂತರ ಚುನಾವಣೆ ಬರಲಿದೆ. ಚುನಾವಣೆಯನ್ನು ಎದುರಿಸಲು ಬಿಜೆಪಿ-ಜೆಡಿಎಸ್ ಸಿದ್ಧವಿದೆ ಎಂದರು.
