ಹಿಂದೂಗಳನ್ನು ಹತ್ತಿಕ್ಕಲು ರಾಷ್ಟ್ರ ಧ್ವಜಾರೋಹಣದ ನಿಯಮ ಉಲ್ಲಂಘಿಸಿದ ಜಿಲ್ಲಾಡಳಿತ: ಆರ್. ಅಶೋಕ್ ಕಿಡಿ
ಮಂಡ್ಯದಲ್ಲಿ ಹುನುಮಾನ್ ಧ್ವಜವನ್ನು ಕೆಳಗಿಳಿಸಿ ಹಿಂದೂಗಳನ್ನು ಹತ್ತಿಕ್ಕಲು ಮಂಡ್ಯ ಜಿಲ್ಲಾಡಳಿತ ರಾಷ್ಟ್ರಧ್ವಜದ ನಿಯಮಗಳನ್ನು ಉಲ್ಲಂಘಿಸಿ ಮಧ್ಯಾಹ್ನ ತ್ರಿವರ್ಣ ಧ್ವಜವನ್ನು ಹಾರಿಸಿದೆ.
ಮಂಡ್ಯ (ಜ.28): ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದ ರಾಮಮಂದಿರ ಮುಂಭಾಗ ಕೇಸರಿ ಬಣ್ಣದ ಹನುಮಾನ್ ಧ್ವಜವನ್ನಾರಿಸಿದ್ದನ್ನು ತೆರವುಗೊಳಿಸಿದ ಜಿಲ್ಲಾಡಳಿತ, ರಾಷ್ಟ್ರಧ್ವಜದ ನಿಯಮಗಳನ್ನು ಉಲ್ಲಂಘನೆ ಮಾಡಿ ಮಟ ಮಟ ಮಧ್ಯಾಹ್ನದ ಸಮಯದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಗಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಡ್ಯದ ಕೆರಗೋಡು ಗ್ರಾಮಕ್ಕೆ ಭೇಟಿ ನೀಡಿದ ವಿಪಕ್ಷ ನಾಯಕ ಆರ್. ಅಶೋಕ್ ಮಾಧ್ಯಮಗಳೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಮ, ಹನುಮ ವಿರೋಧಿಯಾಗಿದ್ದಾರೆ. ಈ ಹಿಂದೂಗಳ ವಿರೋಧಿ ಸರ್ಕಾರ ಉಳಿಯಬಾರದು. ಹನುಮಧ್ವಜ ಇಳಿಸೋಕೆ ಇವರೇ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡಿದ್ದಾರೆ. ಹನುಮ ಹುಟ್ಟಿದ ನಾಡಲ್ಲಿ ಹನುಮನಿಗೆ ಈ ಸರ್ಕಾರ ಅವಮಾನ ಹಾಗೂ ದೊಡ್ಡ ದ್ರೋಹವನ್ನು ಮಾಡಿದೆ ಎಂದು ಕಿಡಿ ಕಾರಿದರು.
ರಾಷ್ಟ್ರಧ್ವಜಕ್ಕೆ ಅನುಮತಿ ಪಡೆದು, ಹನುಮಧ್ವಜ ಹಾರಿಸಿದ ಕೆರಗೋಡು ಟ್ರಸ್ಟ್: ಕೆಂಡಕಾರಿದ ಸಚಿವ ಚಲುವರಾಯಸ್ವಾಮಿ
ದೇಶದಲ್ಲಿ ನಮ್ಮ ರಾಷ್ಟ್ರದ ತ್ರಿವರ್ಣ ಧ್ವಜವನ್ನು ಹಾರಿಸಲು ಕೆಲವು ನಿಯಮಾವಳಿಗಳನ್ನು ಮಾಡಲಾಗಿದೆ. ದೇಶದೆಲ್ಲೆಡೆ ಬೆಳಗ್ಗೆ 7 ಗಂಟೆಯಿಂದ 9 ಗಂಟೆಯೊಳಗೆ ರಾಷ್ಟ್ರ ಧ್ವಜಾರೋಹಣ ಮಾಡಬೇಕು ಎಂಬ ನಿಯಮವಿದೆ. ಆದರೆ, ಹಿಂದೂಗಳನ್ನು ಹತ್ತಿಕ್ಕಲು ಹಾಗೂ ಹಿಂದೂಗಳ ಹನುಮಾನ್ ಧ್ವಜವನ್ನು ಹಾರಿಸುವುದನ್ನು ತಡೆಯುವ ಉದ್ದೇಶದಿಂದಲೇ ಕಾಂಗ್ರೆಸ್ ನಾಯಕರ ಕುಮ್ಮಕ್ಕಿನಿಂದಾಗಿ ಮಂಡ್ಯ ಜಿಲ್ಲಾಡಳಿತದ ಅಧಿಕಾರಿಗಳು ಮಟ ಮಟ ಮಧ್ಯಾಹ್ನದ ವೇಳೆ ರಾಷ್ಟ್ರ ಧ್ವಜವನ್ನು ಹಾರಿಸಿದ್ದಾರೆ. ಅದು ಕೂಡ ಪೊಲೀಸರು ಶೂ ಧರಿಸಿ ಧ್ವಜಾರೋಹಣ ನಡೆಸಿದ್ದಾರೆ. ಗೂಂಡಾಗಿರಿ, ದ್ರೌರ್ಜನ್ಯ ಎಸಗಿ, ಹನುಮ ಧ್ವಜ ಇಳಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆರಗೋಡು ಗ್ರಾಮದಲ್ಲಿ ಕಳ್ಳರ ರೀತಿ ರಾತ್ರೆ ಹೊತ್ತು ಬಂದು ಧ್ವಜ ಇಳಿಸಿದ್ದಾರೆ. ದರೋಡೆ ಮಾಡುವವರ ರೀತಿ ಪೊಲೀಸರು ನಡೆದುಕೊಂಡಿದ್ದಾರೆ. ಇವತ್ತು ಮತ್ತೆ ಹನುಮ ಧ್ವಜ ಹಾರಬೇಕು. ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಅಧಿಕಾರಿಗಳಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದರು. ಈ ವೇಳೆ ಕೆರಗೋಡು ಗ್ರಾಮದಲ್ಲಿ ಹನುಮನ ಧ್ವಜ ಇಳಿಸಿದಕ್ಕೆ ಆಕ್ರೋಶ ಭುಗಿಲೆದ್ದಿದೆ. ಧ್ವಜ ಸ್ಥಂಭದ ಬಳಿಗೆ ತೆರಳಲು ಪ್ರತಿಭಟನಾಕಾರರ ಯತ್ನ ಮಾಡಿದ್ದಾರೆ. ಬ್ಯಾರಿಕೇಟ್ ಬಳಿ ಬರುತ್ತಿದ್ದಂತೆ ಪ್ರತಿಭಟನಾಕಾರರನ್ನ ಪೊಲೀಸರು ತಡೆದಿದ್ದಾರೆ. ಬಳಿಕ ಆರ್. ಅಶೋಕ್, ಅಶ್ವಥ್ ನಾರಾಯಣ್ ಸೇರಿದಂತೆ ಹಲವು ಪ್ರತಿಭಟನಾಕಾರರನ್ನು ಬಂಧನ ಮಾಡಲಾಯಿತು.
ನಾಳೆ ರಾಜ್ಯಾದ್ಯಂತ ಪ್ರತಿಭಟನೆಗೆ ಆರ್.ಅಶೋಕ್ ಕರೆ: ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸ್ತಿದೆ. ಇದನ್ನ ಖಂಡಿಸಿ ನಾಳೆ ಜೆಡಿಎಸ್ ಜೊತೆಗೂಡಿ ರಾಜ್ಯಾದ್ಯಂತ ಹೋರಾಟ ಮಾಡ್ತೀವಿ. ಜೆಡಿಎಸ್ ಕೂಡಾ ಇದರಲ್ಲಿ ಕೈಜೋಡಿಸುತ್ತದೆ. ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ಹೋರಾಟ ಮಾಡ್ತೀವಿ ಎಂದು ಮಂಡ್ಯ ಪೊಲೀಸರಿಂದ ಬಂಧನದ ವೇಳೆ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆ ನೀಡಿದ್ದಾರೆ.
ಒಂದು ಹನುಮಾನ್ ಧ್ವಜ ಕೆಳಗಿಳಿಸಿದ್ದಕ್ಕೆ, ಊರ ತುಂಬೆಲ್ಲಾ ಭಗವಾನ್ ಧ್ವಜ ಹಾರಾಟ: ಮುಖ್ಯಮಂತ್ರಿ ಸಿದ್ದರಾಮಯ್ಯನವರೇ , ನಿಮಗೆ ತಾನು ಹಿಂದೂ ಎಂದು ಕರೆದುಕೊಳ್ಳುವ ಯಾವ ನೈತಿಕತೆಯೂ ಉಳಿದಿಲ್ಲ. ನನ್ನ ಹೆಸರಿನಲ್ಲಿ ರಾಮ ಇದ್ದಾನೆ, ನಾನೂ ಹಿಂದು ಎಂದು ಹೇಳಿಕೊಳ್ಳುವ ಯಾವ ನೈತಿಕತೆಯೂ ಇಲ್ಲ ಎಂದು ಸಿಎಂ ಸಿದ್ದರಾಮಯ್ಯರ ವಿರುದ್ಧ ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ. ಮಂಡ್ಯ ಜಿಲ್ಲೆಯ ಕೆರಗೋಡು ಪಟ್ಟಣದಲ್ಲಿ ಹಿಂದೂಗಳ ಭಾರೀ ವಿರೋಧದ ನಡುವೆಯೂ ಪೊಲೀಸರು ಲಾಠಿಚಾರ್ಜ್ ನಡೆಸಿ ಹನುಮಧ್ವಜ ತೆರವು ಮಾಡಿಸಿರುವ ವಿಚಾರ ಸಂಬಂಧ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹಿಂದುವಿರೋಧಿ ನೀತಿಗಳನ್ನು ಅನುಸರಿಸುತ್ತಾ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ವಾಗ್ದಾಳಿ ಮಾಡಿದ್ದಾರೆ.
Mandya: 108 ಅಡಿ ಕೇಸರಿ ಬಣ್ಣದ ಧ್ವಜ ತೆರವು: ಕಾಂಗ್ರೆಸ್ ಶಾಸಕ ಗಣಿಗ ರವಿ ವಿರುದ್ಧ ಕಾರ್ಯಕರ್ತರ ಆಕ್ರೋಶ
ಈಗ ಕೆರಗೋಡು ಗ್ರಾಮದಲ್ಲಿ ಅಳವಡಿಕೆ ಮಾಡಲಾಗಿದ್ದ ಒಂದು ಹನುಮಧ್ವಜ ತೆಗೆದಿದ್ದರಿಂದ, ಈಗ ಪ್ರತಿಯೊಬ್ಬ ಹಿಂದುಗಳ ಮನೆ ಮನೆಯಲ್ಲೂ ಹನುಮಧ್ವಜ ಹಾರಿಸುವಂತೆ ವಿಡಿಯೋ ಮೂಲಕ ಕರೆ ನೀಡಿದ್ದಾರೆ. ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಕರೆಕೊಟ್ಟಿರುವ ಮನೆ ಮನೆಯಲ್ಲಿ ಹನುಮಧ್ವಜ ಹಾರಿಸುವ ಅಭಿಯಾನಕ್ಕೆ ಭಾರೀ ಬೆಂಬಲ ವ್ಯಕ್ತವಾಗಿದೆ. ಮನೆ ಮನೆಯಲ್ಲೂ ಹನುಮಧ್ವಜ ಹಾರಿಸುವ ಮೂಲಕ ಸರ್ಕಾರದ ಹಿಂದೂ ವಿರೋಧಿ ನೀತಿಗೆ ಪ್ರತ್ಯುತ್ತರ ನೀಡಲು ರಾಜ್ಯ ಬಿಜೆಪಿ ಮುಂದಾಗಿದೆ.