ಪುತ್ತೂರಿನ ಯುವ ಪಶುವೈದ್ಯೆ ಡಾ. ಕೀರ್ತನಾ ಜೋಶಿ ಮಂಗಳೂರಿನ ತಮ್ಮ ನಿವಾಸದಲ್ಲಿ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಅವರ ಕುಟುಂಬ ಮತ್ತು ಸ್ನೇಹಿತರಲ್ಲಿ ಆಘಾತವನ್ನುಂಟುಮಾಡಿದೆ. ಪ್ರತಿಭಾವಂತ ವೈದ್ಯೆಯ ಈ ಅಕಾಲಿಕ ಮರಣಕ್ಕೆ ಕಾರಣ ತಿಳಿದುಬಂದಿಲ್ಲ.

ದಕ್ಷಿಣ ಕನ್ನಡ (ಆ.06): ಜಿಲ್ಲೆಯ ಪುತ್ತೂರಿನ ಪ್ರತಿಭಾವಂತ ಯುವ ಪಶುವೈದ್ಯೆಯೊಬ್ಬರು ಮಂಗಳೂರಿನ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಸೋಮವಾರ ರಾತ್ರಿ ನಡೆದಿದೆ.

ಪುತ್ತೂರು ತಾಲೂಕಿನ ಬಪ್ಪಳಿಗೆ ನಿವಾಸಿ, ಖ್ಯಾತ ಚಾರ್ಟೆಡ್ ಅಕೌಂಟೆಂಟ್ ಗಣೇಶ್ ಜೋಶಿ ಅವರ ಪುತ್ರಿ ಡಾ. ಕೀರ್ತನಾ ಜೋಶಿ (27) ಅವರೇ ದುರಂತ ಅಂತ್ಯ ಕಂಡವರು. ಮಂಗಳೂರಿನಲ್ಲಿ ಪಶು ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದ ಡಾ. ಕೀರ್ತನಾ, ಸೋಮವಾರ ರಾತ್ರಿ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಇಹಲೋಕ ತ್ಯಜಿಸಿದ್ದಾರೆ. ಅವರ ಆತ್ಮಹ*ತ್ಯೆಗೆ ನಿಖರವಾದ ಕಾರಣಗಳು ಸದ್ಯಕ್ಕೆ ತಿಳಿದುಬಂದಿಲ್ಲ. ಆದರೆ, ಈ ಘಟನೆ ಅವರ ಕುಟುಂಬ ಮತ್ತು ಸ್ನೇಹಿತರ ವಲಯದಲ್ಲಿ ತೀವ್ರ ಆಘಾತವನ್ನುಂಟುಮಾಡಿದೆ.

ಉಜ್ವಲ ಭವಿಷ್ಯಕ್ಕೆ ಕತ್ತಲೆ:

ಪಶು ವೈದ್ಯಕೀಯದಲ್ಲಿ ಸ್ನಾತಕೋತ್ತರ ಪದವಿ (ಎಂ.ಡಿ.) ಪಡೆದಿದ್ದ ಡಾ. ಕೀರ್ತನಾ ಜೋಶಿ ಅವರು ಶಾಲಾ ಶಿಕ್ಷಣದಿಂದ ವೈದ್ಯರಾಗುವವರೆಗೂ ಅತ್ಯಂತ ಪ್ರತಿಭಾವಂತೆ ಎನಿಸಿಕೊಂಡಿದ್ದರು. ತಮ್ಮ ವೃತ್ತಿ ಜೀವನದಲ್ಲಿ ಪುತ್ತೂರು, ಕೊಯಿಲ ಹಾಗೂ ಮಂಗಳೂರಿನಲ್ಲಿ ಪಶು ವೈದ್ಯರಾಗಿ ಕಾರ್ಯನಿರ್ವಹಿಸಿ, ಪ್ರಾಣಿಪ್ರಿಯರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅವರ ಸೌಮ್ಯ ಸ್ವಭಾವ ಮತ್ತು ವೃತ್ತಿಪರತೆಯು ಎಲ್ಲರಿಗೂ ಚಿರಪರಿಚಿತವಾಗಿತ್ತು. ಇಂತಹ ಉಜ್ವಲ ಭವಿಷ್ಯವಿದ್ದ ವೈದ್ಯೆಯೊಬ್ಬರು ದಿಢೀರ್ ಸಾವಿನ ನಿರ್ಧಾರ ಕೈಗೊಂಡಿರುವುದು ಎಲ್ಲರನ್ನೂ ದಿಗ್ಭ್ರಮೆಗೊಳಿಸಿದೆ.

ಪುತ್ತೂರಿನಲ್ಲಿ ಶೋಕದ ಛಾಯೆ:

ಮಂಗಳವಾರ ಡಾ. ಕೀರ್ತನಾ ಅವರ ಮೃತದೇಹವನ್ನು ಪುತ್ತೂರಿನ ಬಪ್ಪಳಿಗೆಯಲ್ಲಿರುವ ಸ್ವಗೃಹಕ್ಕೆ ತರಲಾಯಿತು. ಅಲ್ಲಿ ಕುಟುಂಬಸ್ಥರು, ಬಂಧುಗಳು ಮತ್ತು ನೂರಾರು ಹಿತೈಷಿಗಳ ಆಕ್ರಂದನದ ನಡುವೆ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು. ಇಡೀ ಬಪ್ಪಳಿಗೆ ಗ್ರಾಮ ಶೋಕಸಾಗರದಲ್ಲಿ ಮುಳುಗಿತ್ತು. ಮೃತ ಕೀರ್ತನಾ ತಂದೆ ಗಣೇಶ್ ಜೋಶಿ, ತಾಯಿ ವೀಣಾ ಜೋಶಿ, ಸಹೋದರಿ ಡಾ. ಮೇಘನಾ ಜೋಶಿ ಸೇರಿದಂತೆ ಅಪಾರ ಬಂಧು ಬಳಗ ಮತ್ತು ಸ್ನೇಹಿತರನ್ನು ಅಗಲಿದ್ದಾರೆ. ಈ ಅಕಾಲಿಕ ಸಾವಿನ ಹಿಂದಿನ ಕಾರಣಗಳ ಬಗ್ಗೆ ತನಿಖೆ ಮುಂದುವರೆದಿದೆ.