Indian Army ಹೆಸರು ಕೇಳಿದಾಕ್ಷಣ ದೇಹದ ನರನಾಡಿಗಳಲ್ಲಿ ರಕ್ತ ಸಂಚಾರ ವೇಗ ಪಡೆದು ದೇಹದ ತಾಪ ಸರ್ರನೆ ಏರಿ ಮನಸ್ಸು ಹೆಮ್ಮೆಯಿಂದ  Indian Army ಎಂದು ಪುನರುಚ್ಛರಿಸುವ ಅನುಭವ. ನಮ್ಮಲ್ಲಿ ಎಷ್ಟು ಜನರಿಗೆ ಹೀಗನ್ನಿಸುತ್ತೋ ಗೊತ್ತಿಲ್ಲ. ಆದರೆ ನನಗೆ ಪ್ರತೀ ಬಾರಿ ದೇಶಕ್ಕಾಗಿ ಸೇನೆಯ ಬಲಿದಾನ, ಸೈನಿಕರ ಆತ್ಮ ಸಮರ್ಪಣೆಯ ವರದಿ ಓದಿದಾಗ ಅಥವಾ ಕಥೆ ಕೇಳಿದಾಗ ಈ ಅನುಭವ. 

ಒಮ್ಮೆ ದುಃಖ ಉಮ್ಮಳಿಸಿದರೆ, ಸುಧಾರಿಸಲು ಕನಿಷ್ಠ ಮೂರ್ನಾಲ್ಕು ದಿನ ಬೇಕು. ಹಾಗಾಗಿಯೇ ಎಷ್ಟೋ ಬಾರಿ ಸೈನ್ಯದ ಕಥೆಗಳಿಂದ ದೂರ ಓಡಿದ್ದುಂಟು. ಸೇನೆಯ ಸಿನಿಮಾಗಳ ಕಡೆ ಮುಖ ಮಾಡದೆ ಇದ್ದಿದ್ದುಂಟು. ಆದರೆ, ಮಾಧ್ಯಮದಲ್ಲಿರುವಾಗ ಪ್ರತೀ ಸುದ್ದಿಯೂ ಮೊದಲು ತಲುಪುವುದೇ ನಮಗೆ . ನಮ್ಮಿಂದ ಜನರಿಗೆ. 

ಪುಲ್ವಾಮ ದಾಳಿಯಾದ ದಿನದ ರಾತ್ರಿ. ದೇಶದಲ್ಲಿ 49 ಸೈನಿಕರ ಸಾವಿನ ಸೂತಕ. ರಾಷ್ಟ್ರಾದ್ಯಂತ ಶತ್ರುಗಳನ್ನು ಸೀಳಿಬಿಡುವ ಆಕ್ರೋಶ. ಸ್ಪೋಟಕ್ಕೆ ಚೆಲ್ಲಾಡಿದ್ದ ಯೋಧರ ದೇಹದ ಭಾಗಗಳು, ರಸ್ತೆಯಿಡೀ ರಕ್ತ ಕಂಡ ಪ್ರತಿಯೊಬ್ಬ ಭಾರತೀಯನ ರಕ್ತವೂ ಕುದಿಯುತ್ತಿತ್ತು. ಯೋಧರ ಸಾವಿನ ದೃಶ್ಯದಿಂದ ವಿಚಲಿತವಾದ ಮನಸ್ಸಿನಿಂದಲೇ ಆಹೋರಾತ್ರಿ ನೇರಪ್ರಸಾರಕ್ಕೆ ಕೂತಿದ್ದು. 

ಪ್ರತಿಯೊಂದು ಕರೆಯಲ್ಲೂ ವೈರಿಗಳನ್ನ ತುಂಡು-ತುಂಡಾಗಿ ಕತ್ತರಿಸಬೇಕು ಅನ್ನೋ ಆಕ್ರೋಶದ ಕಿಡಿ, ಗದ್ಗದಿತ ಧ್ವನಿ. ಸುಮಾರು ನಡುರಾತ್ರಿ 12.30ರ ಸಮಯ. ನಮ್ಮ ಮಂಡ್ಯ ಪ್ರತಿನಿಧಿ ನಂದನ್ ಮಂಡ್ಯದ ಮದ್ದೂರಿನ ಗುಡಿಗೆರೆ ಗ್ರಾಮದಿಂದ ಲೈವ್ ಕೊಡ್ತಾಯಿದ್ರು. ನಾಲ್ಕು ತಿಂಗಳ ಜೀವವನ್ನ ಗರ್ಭದಲ್ಲಿಟ್ಟುಕೊಂಡ ಯೋಧನ ಪತ್ನಿ ಕಲಾವತಿ 'ಇವತ್ತು ಬೆಳಿಗ್ಗೆಯಿಂದ ಕಾಲ್ ಮಾಡ್ತಿದ್ರು ಸಾರ್, ನಾನ್ ಬೇರೆ ಕೆಲಸದಲ್ಲಿದ್ದೆ, ಮಾತಾಡೋಕಾಗ್ಲಿಲ್ಲ ಸಾರ್, ಆ ಕಾಲ್ ಮಾತಾಡಿದ್ರೆ ಆಗಿತ್ತು ಸಾರ್ , ಕೊನೇ ಸಲ ಮಾತಾಡಿಲ್ಲ ಸಾರ್' ಅಂತ ಎದೆಯೊಡೆದುಕೊಂಡು ಅತ್ತಿದ್ದಿದೆಯಲ್ಲಾ... ಕೂತ ಜಾಗದಿಂದ ಒಂದು ಕ್ಷಣ ಎದ್ದು ಓಡಿಹೋಗಬೇಕು ಅನ್ನಿಸಿದ್ರೂ ಇದ್ದದ್ದು ನೇರಪ್ರಸಾರದಲ್ಲಿ. ಉಮ್ಮಳಿಸಿ ಬರುವ ದುಃಖ ತಡೆಯುತ್ತಾ ನೇರಪ್ರಸಾರದಲ್ಲಿ ಮಾತನಾಡೋ ಸ್ಥಿತಿ ಯಾವ ಶತ್ರುವಿಗೂ ಬೇಡ ಅನ್ನಿಸಿದ್ದು ಸುಳಲ್ಲ. ಆದ್ರೆ ಅದೇನೋ ಅಂತಾರಲ್ಲ 'The Show Must Go On'.

ಕಲಾವತಿ ಜೀವಮಾನದಲ್ಲಿ ಬಹುಶಃ ಅದೊಂದು ಕರೆ ಸ್ವೀಕರಿಸದೇ ಇದ್ದದ್ದೇ ಅತೀ ದೊಡ್ಡ ಪಶ್ಚಾತ್ತಾಪವಾಗಿ ಉಳಿದುಹೋಗುತ್ತೇನೋ? ಯೋಧ ಗುರುವಿನ ಆ ಕೊನೆ ಮಾತು ಏನಾಗಿತ್ತೋ? ಗಂಡನ ಆ ಕೊನೆಯ ಮಾತು ಆಕೆಗೆ ಕೇಳಲಾಗಲೇ ಇಲ್ಲ.

ಇನ್ನು ಕುಟುಂಬದ ಉಳಿದವರ ಸ್ಥಿತಿಯೇನೂ ಭಿನ್ನವಾಗಿರಲಿಲ್ಲ. ಆಲದ ಮರ ಕುಸಿದು ಜೀವನ ಕಳೆದುಕೊಂಡ ಹಕ್ಕಿಗಳ ಸ್ಥಿತಿ. ಸೇನೆಗೆ ಆಯ್ಕೆಯಾಗೋ ಕೊನೆ ಕ್ಷಣದ ವರೆಗೂ ತಂದೆ-ತಾಯಿಗೂ ಹೇಳದೆ ದೇಶ ಸೇವೆಗೆ ಟೊಂಕ ಕಟ್ಟಿ ನಿಂತ ಮಗ ಇನ್ನೆಂದೂ ಬರಲಾರ ಅನ್ನೋದನ್ನ ನೆನೆದು ಅತ್ತೂ ಅತ್ತೂ ನಿತ್ರಾಣವಾಗಿದ್ದವು ಹೆತ್ತ ಹಿರಿಜೀವಗಳು. 

ಹುತಾತ್ಮ ಯೋಧನ ಪಾರ್ಥಿವಕ್ಕೆ ನಮನ ಸಲ್ಲಿಸಲು ಜನ ರಸ್ತೆಯ ಇಕ್ಕೆಲಗಳಲ್ಲೂ ಕಿಕ್ಕಿರಿದು ತುಂಬಿದ್ದರು. ಬೈಕ್ ಬಸ್ಸುಗಳಲ್ಲಿ ಪಾರ್ಥಿವದೊಂದಿಗೆ ಲಕ್ಷಾಂತರ ಜನ ಹರಿದು ಬಂದಿದ್ದರು. ಆ ಅಸಂಖ್ಯ ಜನಸ್ತೋಮದ ನಡುವೆ ಮೆರವಣಿಗೆ ಮೂಲಕ ಹುತ್ಮಾತ್ಮ ತನ್ನೂರು ತಲುಪೋದು ಸಂಜೆಯಾಯಿತು. ತಮ್ಮಿಬ್ಬರ ಪ್ರೀತಿಯನ್ನ ಗರ್ಭದಲ್ಲಿ ಹೊತ್ತ ಗುರು ಪತ್ನಿ ತನ್ನ ಗಂಡನ ನಿರ್ಜೀವ ದೇಹ ನೋಡಿ ಹೇಗೆ ಬಿಕ್ಕಿ ಬಿಕ್ಕಿ ಅತ್ತಾಳೋ? ಅವಳ ಸ್ಥಿತಿ ಏನೋ ಅಂತ ಟಿವಿ ಮುಂದೆ ಕೂತವಳು ಒಂದು ಕ್ಷಣ ಶಾಕ್ ಆದೆ. ಕಣ್ಣಾಲಿಗಳು ತೇವಗೊಂಡವು.

ಅತ್ತೂ ಅತ್ತೂ ನಿತ್ರಾಣಗೊಂಡಿದ್ದ ಆ ಜೀವ ದೇಶಕ್ಕಾಗಿ ಮಡಿದ ತನ್ನ ಗಂಡನ ಪಾರ್ಥಿವ ಕಂಡು ಏಕ್ ದಮ್  ಸೆಲ್ಯೂಟ್ ಮಾಡಿ 'ಭಾರತ್ ಮಾತಾ ಕಿ ಜೈ, ಒಂದೇ ಮಾತರಂ' ಎಂದು ಕೂಗಿತ್ತು. ಒಬ್ಬ ಮನುಷ್ಯನ ನರನಾಡಿಗಳು ಮಿಡಿಯಲು ಇದಕ್ಕಿಂತ ಬೇಕೇ? ಕಣ್ಣೀರು ಉಕ್ಕುತ್ತಿದೆ, ಹೃದಯ ಛಿದ್ರ-ಛಿದ್ರವಾಗುತ್ತಿದೆ, ತನ್ನ ಕೈಹಿಡಿದವ ಮರಳಿ ಬರಲಾರ, ತನ್ನ ಮಗು ಅಪ್ಪನನ್ನ ಎಂದಿಗೂ ನೋಡಲಾಗದು ಅನ್ನೋ ಸತ್ಯದ ಅರಿವಿದ್ದರೂ ಅವಳ ಬಾಯಿಂದ ಜಯ ಘೋಷ ನಿಲ್ಲಲಿಲ್ಲ. ಕಲಾವತಿಯನ್ನು ಹಿಂಬಾಲಿಸಿ ಇಡೀ ಕುಟುಂಬ ಘೋಷಣೆ ಕೂಗಿತ್ತು. ಸುತ್ತಲೂ ನೆರೆದಿದ್ದ ಲಕ್ಷಾಂತರ ಜನರ ಕಂಠದಲ್ಲೂ ಆ ಜಯಘೋಷ ಮಾರ್ಧನಿಸಿತ್ತು. ಹುತಾತ್ಮ ಯೋಧ ಗುರು ತನ್ನ ಆಸ್ತಿ ಅಂತ ಬಿಟ್ಟು ಹೋಗಿದ್ದು ದೇಶಭಕ್ತಿ ಅನ್ನೋ ಕಿಡಿಯನ್ನು. ಭಾರತಾಂಬೆಯ ಮಕ್ಕಳು ನಾವು ಎಷ್ಟು ಧನ್ಯರೋ ಇಂಥ ಮಕ್ಕಳನ್ನ ಹಡೆದ ಭಾರತಾಂಬೆಯೂ ಅಷ್ಟೇ ಧನ್ಯಳೇ.

Last But No The Least- ' 10 ತಿಂಗಳು ಅವರ ಜೊತೆ ಬಾಳಿದ ನಾನು ಧನ್ಯೆ. ನನ್ನ ಗಂಡ ವೀರ ಯೋಧ. ನನಗೆ ಹೆಮ್ಮೆ ಇದೆ. ನನ್ನನ್ನೂ ಸೇನೆಗೆ ಕಳಿಸಿ ಸಾರ್, ಶತ್ರುವಿನ ರುಂಡ ಚೆಂಡಾಡ್ತೀನಿ. ಟೆರರಿಸಂ ಅನ್ನೋ ಹೆಸರೇ ಇರಬಾದರು. ನನಗೆ ಮಗ ಹುಟ್ಟಿದರೆ ಅವನನ್ನೂ ಸೇನೆಗೆ ಸೇರಿಸ್ತೀನಿ' - ಕಲಾವತಿ. (ನಮ್ಮ ಹೆಮ್ಮೆಯ ಹುತಾತ್ಮ ಯೋಧ ಗುರು ಪತ್ನಿ)

ವರದಿ :  ಭಾವನಾ ಎಸ್.ಎನ್