ಬೆಂಗಳೂರು(ಜು.24): ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಬಿಬಿಎಂಪಿ ಸಿಬ್ಬಂದಿ ಎರಡು ಫ್ಲ್ಯಾಟ್‌ಗಳ ಬಾಗಿಲುಗಳಿಗೆ ಅಡ್ಡಲಾಗಿ ತಗಡಿನ ಶೀಟ್‌ ಹಾಕಿ ಸೀಲ್‌ಡೌನ್‌ ಮಾಡಿ ಭಾರೀ ಟೀಕೆಗೆ ಗುರಿಯಾದ ಘಟನೆಯೊಂದು ಗುರುವಾರ ಜರುಗಿತು.

ನಗರದ ಶಾಂತಿನಗರ ಅಪಾರ್ಟ್‌ಮೆಂಟ್‌ವೊಂದರ ಫ್ಲ್ಯಾಟ್‌ನಲ್ಲಿ ವಾಸವಿದ್ದವರಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಸೋಂಕಿತರು ಹಾಗೂ ಅವರ ನೆರೆಮನೆಯವರ ಬಾಗಿಲುಗಳಿಗೆ ತಗಡಿನ ಶೀಟ್‌ ಅಳವಡಿಸಿ ಸೀಲ್‌ಡೌನ್‌ ಮಾಡಿದ್ದರು.

'ಖಾಕಿ'ಗೆ ಕೋವಿಡ್‌ ಕಂಟಕ: ಪೊಲೀಸರ ಬೆನ್ನುಬಿದ್ದ ಮಹಾಮಾರಿ ಕೊರೋನಾ..!

ಅಪಾರ್ಟ್‌ಮೆಂಟ್‌ ನಿವಾಸಿ ಸತೀಶ್‌ ಸಂಗಮೇಶ್ವರನ್‌ ಎಂಬುವರು ಈ ಘಟನೆ ಕುರಿತು ಫೋಟೋ ಸಮೇತ ಟ್ವೀಟ್‌ ಮಾಡಿ, 2 ಫ್ಲ್ಯಾಟ್‌ಗಳ ಪೈಕಿ ಒಂದರಲ್ಲಿ ಮಹಿಳೆ ಹಾಗೂ ಇಬ್ಬರು ಮಕ್ಕಳು ಮತ್ತೊಂದರಲ್ಲಿ ವೃದ್ಧ ದಂಪತಿ ಇದ್ದಾರೆ. ಒಂದು ವೇಳೆ ಅಗ್ನಿ ಅವಘಡ ಸೇರಿದಂತೆ ತುರ್ತು ಪರಿಸ್ಥಿತಿ ಎದುರಾದರೆ ನೆರವಾಗುವುದು ಬಹಳ ಕಷ್ಟ. ಇಷ್ಟುಅತಿರೇಕದ ಸೀಲ್‌ಡೌನ್‌ ಅಪಾಯಕಾರಿ. ಈ ಬಗ್ಗೆ ಬಿಬಿಎಂಪಿ ಕೂಡಲೇ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು. ಹಲವರು ಬಿಬಿಎಂಪಿ ವಿರುದ್ಧ ಕೆಂಡಕಾರಿದ್ದರು. ಇದಾದ ಮೂರು ತಾಸಿನಲ್ಲೇ ಆ ತಗಡಿನ ಶೀಟ್‌ ತೆರವುಗೊಳಿಸಿ, ನಿಯಮಾನುಸಾರ ಸೀಲ್‌ಡೌನ್‌ ಮಾಡಲಾಯಿತು.

ಆಯುಕ್ತರಿಂದ ಕ್ಷಮೆ:

ಅತಿರೇಕ ಸೀಲ್‌ಡೌನ್‌ಗೆ ತೀವ್ರ ಖಂಡನೆ ವ್ಯಕ್ತವಾದ ಬೆನ್ನಲ್ಲೇ ಎಚ್ಚೆತ್ತ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ಅವರು ಕ್ಷಮೆಯಾಚಿಸಿ, ಏನೇ ಸಮಸ್ಯೆ ಇದ್ದರೂ ಅದನ್ನು ಬಗೆಹರಿಸಲು ನಾವು ಬದ್ಧವಾಗಿದ್ದೇವೆ. ನಮ್ಮ ಸ್ಥಳೀಯ ಸಿಬ್ಬಂದಿಯ ಅತ್ಯುತ್ಸಾಹಕ್ಕೆ ಕ್ಷಮೆಯಾಚಿಸುತ್ತೇನೆ ಎಂದು ಟ್ವೀಟ್‌ ಮಾಡಿದ್ದರು.

ಕಾರಣ ಕೇಳಿ ನೋಟಿಸ್‌

ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಆಯುಕ್ತರು, ಅಪಾರ್ಟ್‌ಮೆಂಟ್‌ನ ನಿವಾಸಿಗಳ ಆರೋಗ್ಯ ವಿಚಾರಿಸುವುದರ ಜೊತೆಗೆ ಅಗತ್ಯ ವಸ್ತುಗಳ ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಂತೆಯೆ ಸೀಲ್‌ಡೌನ್‌ ವೇಳೆ ನಿರ್ಲಕ್ಷ್ಯ ತಳೆದ ಸಂಬಂಧ ಶಾಂತಿನಗರ ವಿಭಾಗದ ಕಾರ್ಯಪಾಲಕ ಅಭಿಯಂತರ ರಾಧಾಕೃಷ್ಣ ಅವರಿಗೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಲಾಗಿದೆ. 24 ತಾಸಿನಲ್ಲಿ ಸಮಜಾಯಿಷಿ ನೀಡಬೇಕು. ಇಲ್ಲವಾದರೆ ಶಿಸ್ತುಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.