Asianet Suvarna News Asianet Suvarna News

ಅನಿವಾರ್ಯ ಜನತಾ ಕರ್ಪ್ಯೂ: ಸರ್ಕಾರದ ಜತೆ ಸಹಕರಿಸೋಣ!

ಸದ್ಯದ ಸ್ಥಿತಿಯಲ್ಲಿ ಜೀವ ಉಳಿಸಿಕೊಳ್ಳಲು ಪ್ರತಿಯೊಬ್ಬರೂ ಆರ್ಥಿಕ ವಿಷಯದಲ್ಲಿ ತ್ಯಾಗ ಮಾಡಲೇಬೇಕಿದೆ. ಆದರೆ ಸರ್ಕಾರ ಈ ಅವಧಿಯಲ್ಲಾದರೂ ಚಿಕಿತ್ಸೆಗೆ ಉತ್ತಮ ವ್ಯವಸ್ಥೆ ಕಲ್ಪಿಸಬೇಕು

Public must adhere to guidelines of Janta curfew during pandemic Kannada Prabha editorial pod
Author
Bangalore, First Published Apr 27, 2021, 9:20 AM IST

ಸಂಪಾದಕೀಯ

ಕೊರೋನಾ ಸೋಂಕು ನಿಯಂತ್ರಣಕ್ಕೆ ಬಾರದಿರುವುದರಿಂದ ರಾಜ್ಯ ಸರ್ಕಾರ 14 ದಿನಗಳ ಕಾಲ ಜನತಾ ಕರ್ಫ್ಯೂ ಹೆಸರಿನಲ್ಲಿ ಪರೋಕ್ಷವಾಗಿ ರಾಜ್ಯವನ್ನು ಲಾಕ್‌ಡೌನ್‌ ಮಾಡಲು ನಿರ್ಧರಿಸಿದೆ. ಆರೋಗ್ಯ ತುರ್ತು ಸ್ಥಿತಿಯಲ್ಲಿ ಕೈಗೊಂಡ ಅನಿವಾರ್ಯ ನಿರ್ಧಾರವಿದು. ಲಾಕ್‌ಡೌನ್‌ ಅಂದಾಕ್ಷಣ ಎಲ್ಲರಿಗೂ ಕಳೆದ ವರ್ಷದ ಎರಡು ತಿಂಗಳ ಲಾಕ್‌ಡೌನ್‌ ಚಿತ್ರಣವೇ ಮನಸ್ಸಿಗೆ ಬಂದು ಭಯ ಹುಟ್ಟಿಸುವುದರಿಂದ ಸರ್ಕಾರ ಇದನ್ನು ಜನತಾ ಕರ್ಫ್ಯೂ, ಕ್ಲೋಸ್‌ಡೌನ್‌ ಅಥವಾ ಕೋವಿಡ್‌ ಕರ್ಫ್ಯೂ ಎಂಬ ಹೆಸರಿನಿಂದ ಕರೆದಿದೆ. ಈ 14 ದಿನಗಳ ಕಾಲ ರಾಜ್ಯ ಸಂಪೂರ್ಣ ಬಂದ್‌ ಆಗುವಂತೆಯೇ ಮಾರ್ಗಸೂಚಿಗಳಿವೆ.

ಕಠಿಣ ಮಾರ್ಗಸೂಚಿಗಳು ಬೆಂಗಳೂರಿಗೆ ಮಾತ್ರ ಜಾರಿಗೆ ಬರಬಹುದು ಎಂಬ ನಿರೀಕ್ಷೆಗಳಿದ್ದವು. ಆದರೆ ಸರ್ಕಾರ ಇಡೀ ರಾಜ್ಯಕ್ಕೆ ಕರ್ಫ್ಯೂ ಹೇರಿದೆ. ಎಲ್ಲ ಜಿಲ್ಲೆಗಳಲ್ಲೂ ದಿನೇದಿನೇ ಸೋಂಕು ಹೆಚ್ಚುತ್ತಿರುವ ಪ್ರಮಾಣವನ್ನು ಗಮನಿಸಿದರೆ ಅಲ್ಲೂ ಮುಂದೆ ಬೆಂಗಳೂರಿನ ಸ್ಥಿತಿಯೇ ಬರುವ ಅಪಾಯವಿರುವುದರಿಂದ ಸರ್ಕಾರ ಕೊಂಚ ಬಿಗಿ ಕ್ರಮವನ್ನೇ ಕೈಗೊಂಡಿದೆ. ನಿಜ, ಈ ನಿರ್ಧಾರದಿಂದ ರಾಜ್ಯದ ಆರ್ಥಿಕತೆಗೆ ಹೊಡೆತ ಬೀಳುತ್ತದೆ. ಅದಕ್ಕಿಂತ ಹೆಚ್ಚಾಗಿ ಜನರ ಆದಾಯಕ್ಕೆ ಕತ್ತರಿ ಬೀಳುತ್ತದೆ. ದೈನಂದಿನ ದುಡಿಮೆಯನ್ನು ನಂಬಿಕೊಂಡಿರುವ ಲಕ್ಷಾಂತರ ಶ್ರಮಜೀವಿಗಳ ಜೀವನೋಪಾಯಕ್ಕೆ ಕಲ್ಲು ಬೀಳುತ್ತದೆ. ಬಹುಶಃ ಕಳೆದ ಲಾಕ್‌ಡೌನಲ್ಲಿ ಏನೇನು ದುಷ್ಪರಿಣಾಮ ಆಗಿತ್ತೋ ಅವೆಲ್ಲವೂ ಈಗ ಮತ್ತೊಮ್ಮೆ ಆಗಲಿವೆ. ಆದರೆ, ಸೋಂಕಿನ ಸರಪಳಿ ತಕ್ಕಮಟ್ಟಿಗೆ ತುಂಡಾಗುತ್ತದೆ. ಅದು ಈಗ ಅತ್ಯಗತ್ಯ.

ಜನತಾ ಕಫä್ರ್ಯ ಅಥವಾ ಪರೋಕ್ಷ ಲಾಕ್‌ಡೌನ್‌ ಈಗಾಗಲೇ ಕೋವಿಡ್‌ನ ಎರಡನೇ ಅಲೆಯಿಂದ ತತ್ತರಿಸಿರುವ ದೆಹಲಿ, ಮಹಾರಾಷ್ಟ್ರ, ತಮಿಳುನಾಡು, ಉತ್ತರ ಪ್ರದೇಶ, ಛತ್ತೀಸ್‌ಗಢ, ಗುಜರಾತ್‌ ಮುಂತಾದ ಹತ್ತಾರು ರಾಜ್ಯಗಳಲ್ಲಿ ಇಡಿಯಾಗಿ ಅಥವಾ ಅಲ್ಲಲ್ಲಿ ಜಾರಿಯಾಗಿವೆ. ಆ ಸಾಲಿಗೆ ತಡವಾಗಿ ಕರ್ನಾಟಕ ಸೇರ್ಪಡೆಯಾಗಿದೆಯಷ್ಟೆ. ದೇಶದಲ್ಲೇ ಅತ್ಯಂತ ಹೆಚ್ಚು ಸಕ್ರಿಯ ಕೊರೋನಾ ಕೇಸ್‌ಗಳು ಈಗ ಬೆಂಗಳೂರಿನಲ್ಲಿವೆ. ಅದರ ಪರಿಣಾಮ ಏನಾಗಿದೆ ಎಂಬುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ತೀರಾ ತುರ್ತು ಅಗತ್ಯವಿರುವ ರೋಗಿಗಳಿಗೂ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಆಸ್ಪತ್ರೆಯಲ್ಲಿ ಬೆಡ್‌ಗಳು ಇಲ್ಲ, ಆಕ್ಸಿಜನ್‌ ಇಲ್ಲ, ಔಷಧ ಇಲ್ಲ, ಶವ ಸುಡುವುದಕ್ಕೆ ಸರಿಯಾದ ಸೌಕರ್ಯವೂ ಇಲ್ಲ... ಹೀಗೆ ಇಲ್ಲಗಳ ಪಟ್ಟಿದೊಡ್ಡದಿದೆ. ಸದ್ಯದ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ಹಂತದಲ್ಲಿ ಜೀವ ಉಳಿಸಿಕೊಳ್ಳುವುದೇ ದೊಡ್ಡದು ಎಂದು ಯಾರಿಗಾದರೂ ಅನ್ನಿಸದಿರದು.

ಹೀಗಾಗಿ ಪ್ರತಿಯೊಬ್ಬರೂ ಆರ್ಥಿಕ ವಿಷಯದಲ್ಲಿ ತ್ಯಾಗ ಮಾಡುವುದು ಅನಿವಾರ್ಯವೇ ಆಗಿದೆ. ಸರ್ಕಾರ ಕೂಡ ಬೇರೆ ದಾರಿ ಕಾಣದೆ ಈ ಕ್ರಮ ಕೈಗೊಂಡಿರುವುದರಿಂದ ಜನರು ತಮ್ಮದೇ ಒಳಿತಿಗಾಗಿ ಸರ್ಕಾರದ ಜೊತೆ ಸಹಕರಿಸುವುದು ಅನಿವಾರ್ಯ. ಆದರೆ, ಕೊರೋನಾ 1ನೇ ಅಲೆಯಲ್ಲಿ ಮಾಡಿದ ತಪ್ಪಿನಿಂದ ಸರ್ಕಾರ ಪಾಠ ಕಲಿಯಬೇಕು. 1ನೇ ಅಲೆಯ ವೇಳೆ ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸಿಕೊಳ್ಳುವ ಬಗ್ಗೆ ಕೇವಲ ಮಾತನಾಡಿ, ಅದನ್ನು ಕೃತಿಗಿಳಿಸದೆ ಹೋಗಿದ್ದರ ಪರಿಣಾಮ ಇಂದು ಈ ದುಸ್ಥಿತಿ ಎದುರಾಗಿದೆ. ಹೀಗಾಗಿ ಜನತಾ ಕಫä್ರ್ಯ ಸಮಯದಲ್ಲಿ ಸರ್ಕಾರ ಆರೋಗ್ಯ ಮೂಲಸೌಕರ್ಯವನ್ನು ಶಕ್ತಿಮೀರಿ ಸುಧಾರಿಸಿಕೊಳ್ಳಲು ಎಲ್ಲ ಕ್ರಮ ಕೈಗೊಳ್ಳಬೇಕು. ಕೊರೋನಾ ಉಲ್ಬಣಿಸಿದವರಿಗೆ ಸರಿಯಾದ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳುವುದು ಸರ್ಕಾರದ ಕನಿಷ್ಠ ಕರ್ತವ್ಯವಾಗಿದೆ.

ಕೊರೋನಾದ ಮೊದಲ ಅಲೆ ಅನಿರೀಕ್ಷಿತವಾಗಿತ್ತು. ಅದರಲ್ಲಿ ಯಾರದೂ ತಪ್ಪಿರಲಿಲ್ಲ. ಆದರೆ, ಎರಡನೇ ಅಲೆ ನಿರೀಕ್ಷಿತವಾಗಿತ್ತು. ಇದರಲ್ಲಿ ಜನಸಾಮಾನ್ಯರದೂ ತಪ್ಪಿದೆ, ಸರ್ಕಾರದ್ದೂ ತಪ್ಪಿದೆ. ಇಬ್ಬರೂ ಮೊದಲ ಅಲೆ ತಣ್ಣಗಾದ ನಂತರ ಮೈಮರೆತಿದ್ದರು. ಅದರ ದುಷ್ಪರಿಣಾಮವನ್ನು ಈಗ ಎದುರಿಸಲೇಬೇಕಾಗಿದೆ. ಈ ಸಂದರ್ಭದಲ್ಲಿ ಯಾರೂ ಯಾರನ್ನೂ ದೂಷಿಸಿ ಪ್ರಯೋಜನವಿಲ್ಲ. ಪರಸ್ಪರ ಸಹಕಾರದೊಂದಿಗೆ ಸೋಂಕನ್ನು ಎದುರಿಸಬೇಕಿದೆ. ಈ ಮಧ್ಯೆ ಸರ್ಕಾರ 18 ವರ್ಷ ಮೇಲ್ಪಟ್ಟವರಿಗೂ ಲಸಿಕೆಯನ್ನು ಉಚಿತಗೊಳಿಸಿದೆ. ಲಸಿಕೆಯ ಕೊರತೆಯೊಂದು ಆಗದಿದ್ದರೆ ಎಲ್ಲರೂ ಲಸಿಕೆ ಪಡೆದು ಸೋಂಕಿನ ವಿರುದ್ಧದ ಹೋರಾಟವನ್ನು ಇನ್ನಷ್ಟುಬಲಪಡಿಸಲು ಸಾಧ್ಯವಿದೆ.

Follow Us:
Download App:
  • android
  • ios