ಕೊರೋನಾ ಸೋಂಕಿತರಿಗೆ ‘ಸೈಕೋಥೆರಪಿ’!

ಕೊರೋನಾ ಸೋಂಕಿತರಿಗೆ ‘ಸೈಕೋಥೆರಪಿ’!| ರಾಜ್ಯದಲ್ಲೇ ಪ್ರಥಮ| ಸೋಂಕಿತರಲ್ಲಿ ಮನೋಸ್ಥೈರ್ಯ ಹೆಚ್ಚಿಸಲು ಡಿಮ್ಹಾನ್ಸ್‌ ಪ್ರಯೋಗ

Psychotherapy Will Be Given To Coronavirus Patients To Make Mentally Strong

ಶಿವಾನಂದ ಗೊಂಬಿ

ಹುಬ್ಬಳ್ಳಿ(ಜು.26): ಕೊರೋನಾ ಸೋಂಕಿತರು ಹಾಗೂ ಅವರ ಕುಟುಂಬಸ್ಥರಲ್ಲಿ ಮನೋಬಲ ಹೆಚ್ಚಿಸಲು ‘ಸೈಕೋಥೆರಪಿ’ ಧಾರವಾಡ ಜಿಲ್ಲೆಯಲ್ಲಿ ಪ್ರಾರಂಭವಾಗಲಿದೆ. ಡಿಮ್ಹಾನ್ಸ್‌ನಿಂದ ಈ ಕಾರ್ಯ ನಡೆಯಲಿದ್ದು, ಶೀಘ್ರದಲ್ಲೇ ಸೈಕೋಥೆರಪಿ ಸೆಂಟರ್‌ ಪ್ರಾರಂಭವಾಗಲಿದೆ. ರಾಜ್ಯದಲ್ಲೇ ಪ್ರಥಮ ಪ್ರಯೋಗ ಇದಾಗಲಿದೆ.

ಏಕಿದು?:

ಕೊರೋನಾ ಎಂದರೆ ಜನತೆ ಭಯಭೀತರಾಗುತ್ತಾರೆ. ಕೊರೋನಾ ಬಗ್ಗೆ ಭಯ ಸೋಂಕಿತರಲ್ಲಿ ಕಾಣುತ್ತಿದೆ. ಕೆಲ ಸೋಂಕಿತರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ನಡೆದಿವೆ. ಇನ್ನೂ ಕುಟುಂಬದಲ್ಲಿ ಯಾರಿಗಾದರೂ ಕೊರೋನಾ ದೃಢಪಟ್ಟರೆ ಕೆಲವರು ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ. ಈ ರೀತಿ ಆತ್ಮಹತ್ಯೆ ಪ್ರಕರಣಗಳು ಕೊರೋನಾ ಕಾರಣದಿಂದ ಹೆಚ್ಚಾಗುತ್ತಿವೆ. ಇವುಗಳನ್ನು ತಪ್ಪಿಸಲು ‘ಸೈಕೋಥೆರಪಿ’ ಮಾಡಲು ಡಿಮ್ಹಾನ್ಸ್‌ ನಿರ್ಧರಿಸಿದೆ.

ಈಗಾಗಲೇ ಡಿಮ್ಹಾನ್ಸ್‌ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಕೊರೋನಾ ಸೋಂಕಿತರಲ್ಲಿ ಮನೋಬಲ ಹೆಚ್ಚಿಸುವುದಕ್ಕಾಗಿ ಸೈಕೋಥೆರಪಿ ಮಾಡುತ್ತೇವೆ, ಅನುಮತಿ ಕೊಡಿ. ಇದಕ್ಕೆ ಬೇಕಾದ ನೆರವು ನೀಡಿ ಎಂದು ಕೋರಿದೆ. ಈ ವಿಷಯಕ್ಕೆ ಜಿಲ್ಲಾಡಳಿತವೂ ಸಕಾರಾತ್ಮಕವಾಗಿ ಸ್ಪಂದಿಸಿದೆ. ಅಬ್ಬಬ್ಬಾ ಎಂದರೆ ಇನ್ನೊಂದು ವಾರದಲ್ಲಿ ಸೈಕೋಥೆರಪಿ ಸೆಂಟರ್‌ ಪ್ರಾರಂಭವಾಗಲಿದೆ.

ಯಾವ ರೀತಿ ಸೈಕೋಥೆರಪಿ?:

ಡಿಮ್ಹಾನ್ಸ್‌ನಲ್ಲಿ 10ಕ್ಕೂ ಹೆಚ್ಚು ಲ್ಯಾಂಡ್‌ಲೈನ್‌ಗಳ ಕನೆಕ್ಷನ್‌ ಕೊಡಲಾಗುವುದು. ಪ್ರತಿದಿನ ಸೋಂಕಿತರ ಪಟ್ಟಿಡಿಮ್ಹಾನ್ಸ್‌ಗೂ ಬರುತ್ತದೆ. ಪ್ರತಿಯೊಬ್ಬ ಸೋಂಕಿತನಿಗೂ ಕರೆ ಮಾಡಿ ಆತನೊಂದಿಗೆ ಡಿಮ್ಹಾನ್ಸ್‌ ಸಿಬ್ಬಂದಿ ಸಮಾಲೋಚನೆ ನಡೆಸುವುದು, ಮನೋಬಲ ಹೆಚ್ಚಿಸುವುದು, ಇದರೊಂದಿಗೆ ಕೊರೋನಾ ಬಂದಾಗ ಯಾವ ರೀತಿ ಇರಬೇಕು? ಯೋಗ, ಧ್ಯಾನ, ಪ್ರಾಣಾಯಾಮಗಳ ಬಗ್ಗೆ ಮಾಹಿತಿ ನೀಡುವುದು, ಆಹಾರ ಪದ್ಧತಿ ಯಾವ ರೀತಿ ಇರಬೇಕು? ಎಂಬ ಬಗ್ಗೆಯೂ ತಿಳಿಸಿಕೊಡುವುದು, ಸೋಂಕಿತರಿಂದ ಕುಟುಂಬದವರ ಸಂಖ್ಯೆ ಪಡೆದು ಅವರಿಗೂ ಧೈರ್ಯ ಹೇಳುವ ಕೆಲಸ ಈ ಸೆಂಟರ್‌ ಮಾಡಲಿದೆ.

ಪ್ರಾಜೆಕ್ಟರ್‌ ಮೂಲಕ ವಿಡಿಯೋ:

ಇದಲ್ಲದೇ, ಸೋಂಕಿತರಿಗೆ ದಾಖಲಾಗಿರುವ ಆಸ್ಪತ್ರೆಗಳಲ್ಲಿ ಪಾಜೆಕ್ಟರ್‌ ವ್ಯವಸ್ಥೆ ಇದ್ದರೆ ಅಲ್ಲಿಗೆ ಧನಾತ್ಮಕ ವಿಚಾರ ಹೆಚ್ಚಿಸುವ ಕಿರುಚಿತ್ರಗಳನ್ನು, ಸಂಭಾಷಣೆಗಳನ್ನು ಡಿಮ್ಹಾನ್ಸ್‌ ಪ್ರಸಾರ ಮಾಡಲಿದೆ. ಈ ಮೂಲಕ ಸೋಂಕಿತರಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಕೆಟ್ಟವಿಚಾರಗಳಿಂದ ದೂರ ಮಾಡುವಂತೆ ಮನೋಬಲ ಹೆಚ್ಚಿಸುವ ಕೆಲಸ ಮಾಡಲಿದೆ.

ಸಿದ್ಧತೆ ಪೂರ್ಣ:

ಇದಕ್ಕಾಗಿ ಡಿಮ್ಹಾನ್ಸ್‌ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. 15 ಜನರ ತಂಡ ಮಾಡಿ ಅವರು ಸೋಂಕಿತರೊಂದಿಗೆ ಯಾವ ರೀತಿ ಸಮಾಲೋಚನೆ ಮಾಡಬೇಕು. ಸೋಂಕಿತರಿಂದ ಎಂಥ ಪ್ರಶ್ನೆಗಳು ಬರಬಹುದು? ಅದಕ್ಕೆ ಯಾವ ರೀತಿ ಉತ್ತರಿಸಬೇಕು? ಅವರ ಮನೋಬಲ ಹೆಚ್ಚಿಸಲು ಸಿಬ್ಬಂದಿ ಮಾತು ಯಾವ ರೀತಿ ಇರಬೇಕು? ಎಂಬ ಬಗ್ಗೆ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಇದೀಗ ಜಿಲ್ಲಾಡಳಿತ ಸ್ಥಿರ ದೂರವಾಣಿ ಕನೆಕ್ಷನ್‌ ಕೊಡಿಸಿ ಹಸಿರು ನಿಶಾನೆ ತೋರಿಸಿದರೆ ಮುಗಿಯಿತು. ಒಟ್ಟಿನಲ್ಲಿ ಕೊರೋನಾ ಕಾರಣದಿಂದ ಆತ್ಮಹತ್ಯೆ ಪ್ರಕರಣಗಳು ದಾಖಲಾಗದಂತೆ ಮಾಡುವ ಪ್ರಯತ್ನಕ್ಕೆ ಡಿಮ್ಹಾನ್ಸ್‌ ಕೈಹಾಕಿದೆ.

ಡಿಮ್ಹಾನ್ಸ್‌ನಿಂದ ಕೊರೋನಾ ಸೋಂಕಿತರಿಗೆ ಸೈಕೋಥೆರಪಿ ಮಾಡಲು ನಿರ್ಧರಿಸಲಾಗಿದೆ. ಈ ಸಂಬಂಧ ಸಿಬ್ಬಂದಿಗೆ ವರ್ಕ್ಶಾಪ್‌ ಮಾಡಿ ತರಬೇತಿ ನೀಡಲಾಗಿದೆ. ಸೋಂಕಿತರು ಹಾಗೂ ಅವರ ಕುಟುಂಬದವರಲ್ಲಿ ಕೊರೋನಾ ಬಗ್ಗೆ ಇರುವ ಭಯ ಹೋಗಲಾಡಿಸಲು ಇದನ್ನು ಪ್ರಾರಂಭಿಸಲಾಗುತ್ತಿದೆ. ಇಂತಹದೊಂದು ಪ್ರಯತ್ನ ರಾಜ್ಯದಲ್ಲೇ ಮೊದಲು.

-ಡಾ.ಮಹೇಶ ದೇಸಾಯಿ, ನಿರ್ದೇಶಕರು, ಡಿಮ್ಹಾನ್ಸ್‌ ಧಾರವಾಡ

Latest Videos
Follow Us:
Download App:
  • android
  • ios