PSI Scam ಪ್ರಿಯಾಂಕ್ ಖರ್ಗೆ ಹೊಸ ಬಾಂಬ್, ಪಿಎಸ್ಐ ಹಗರಣದಲ್ಲಿ ಗೃಹ ಸಚಿವರು ಶಾಮೀಲು!
- ಗೃಹಸಚಿವರ ತನಿಖೆ ಮಾಡಿ: ಪ್ರಿಯಾಂಕ್ ಖರ್ಗೆ ಆಗ್ರಹ
- ಪಿಎಸ್‌ಐ ನೇಮಕ ಹಗರಣದ ಸಾಕ್ಷ್ಯ ನೀಡಲು ಸೂಚಿಸಿದ್ದ ಸಿಐಡಿ
- ಮಂಗಳವಾರ ಗೈರಾದ ಹಿನ್ನೆಲೆಯಲ್ಲಿ ಮತ್ತೊಮ್ಮೆ ನೋಟಿಸ್ ಜಾರಿ
ಬೆಂಗಳೂರು(ಏ.26): 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮದ ಬಗ್ಗೆ ಗಂಭೀರ ಆರೋಪ ಮಾಡಿದ್ದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರು ಸೋಮವಾರ ಸಿಐಡಿ ವಿಚಾರಣೆಗೆ ಗೈರು ಹಾಜರಾಗಿದ್ದಾರೆ.
ಪಿಎಸ್‌ಐ ನೇಮಕಾತಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಶಾಸಕ ಪ್ರಿಯಾಂಕ್ ಖರ್ಗೆ ಅವರು ಸಾಲು ಸಾಲು ಆರೋಪ ಮಾಡಿದ್ದರು. ಈ ಅವ್ಯವಹಾರದಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಸೇರಿದಂತೆ ಹಲವರು ಭಾಗಿಯಾಗಿದ್ದು, ತನಿಖೆ ಚುರುಕುಗೊಳಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಇದರ ಬೆನ್ನಲ್ಲೇ ಸಿಐಡಿ ಅಧಿಕಾರಿಗಳು ಅಕ್ರಮಕ್ಕೆ ಸಂಬಂಧಿಸಿದಂತೆ ತಮ್ಮ ಬಳಿ ಇರುವ ಸಾಕ್ಷ್ಯ ಹಾಗೂ ದಾಖಲೆಗಳೊಂದಿಗೆ ಸೋಮವಾರ ಬೆಳಗ್ಗೆ 11.30ಕ್ಕೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಆದರೆ, ಪ್ರಿಯಾಂಕ್ ಖರ್ಗೆ ಅವರು ವಿಚಾರಣೆಗೆ ಹಾಜರಾಗದೆ ಹಿಂದೆ ಸರಿದಿದ್ದಾರೆ.
ಪ್ರಿಯಾಂಕ್ ಖರ್ಗೆಗೆ ನೋಟಿಸ್, ಯುಟಿ ಖಾದರ್ ಗರಂ!
ಅಕ್ರಮಕ್ಕೆ ಸಂಬಂಧಿಸಿದಂತೆ ತಮ್ಮ ಬಳಿ ಸಾಕ್ಷ್ಯಗಳಿರುವುದಾಗಿ ಸುದ್ದಿಗೋಷ್ಠಿಯಲ್ಲಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದೀರಿ. ಈ ಪ್ರಕರಣವು ಸೂಕ್ಷ್ಮ ಹಾಗೂ ಗಂಭೀರ ಪ್ರಕರಣವಾಗಿರುವುದರಿಂದ ಲಭ್ಯವಿರುವ ಸಾಕ್ಷ್ಯಗಳನ್ನು ತ್ವರಿತ ಗತಿಯಲ್ಲಿ ಸಂಗ್ರಹಿಸಿ ತನಿಖೆ ನಡೆಸುವ ಅಗತ್ಯವಿದೆ. ಹೀಗಾಗಿ ತಮ್ಮ ಬಳಿ ಇರುವ ಸಾಕ್ಷ್ಯಗಳು ಮತ್ತು ದಾಖಲೆಗಳನ್ನು ಪರಿಶೀಲಿಸಿ ತನಿಖೆ ಕೈಗೊಳ್ಳುವುದು ಅತ್ಯಾವಶ್ಯಕವಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿತ್ತು.
ಇದೀಗ ಪ್ರಿಯಾಂಕ್ ಖರ್ಗೆ ಅವರು ವಿಚಾರಣೆಗೆ ಗೈರು ಹಾಜರಾಗಿರುವುದರಿಂದ ಶೀಘ್ರದಲ್ಲೇ ಮತ್ತೊಮ್ಮೆ ನೋಟಿಸ್ ನೀಡುವ ಸಾಧ್ಯತೆಯಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.
ಗೃಹಸಚಿವರ ತನಿಖೆ ಮಾಡಿ: ಪ್ರಿಯಾಂಕ್
ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಗೃಹ ಇಲಾಖೆಯೇ ಶಾಮೀಲಾಗಿರುವ ಅನುಮಾನವಿದೆ. ಗೃಹ ಇಲಾಖೆಯ ನೇಮಕಾತಿಗಳ ಕಾರ್ಯನಿರ್ವಾಹಕ ಮುಖ್ಯಸ್ಥರು ಗೃಹ ಸಚಿವ ಆರಗ ಜ್ಞಾನೇಂದ್ರ. ಅವರೇ ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಮನೆಗೆ ಹೋಗಿ ಬಂದಿದ್ದಾರೆ. ಹೀಗಾಗಿ ಮೊದಲು ಗೃಹ ಸಚಿವರನ್ನು ವಿಚಾರಣೆ ಮಾಡಿ ತನಿಖೆಗೆ ಒಳಪಡಿಸಬೇಕು ಎಂದು ಮಾಜಿ ಸಚಿವ ಪ್ರಿಯಾಂಕ ಖರ್ಗೆ ಆಗ್ರಹಿಸಿದ್ದಾರೆ.
CID Notice: ಪ್ರಿಯಾಂಕ್ ಖರ್ಗೆ ಹಿಂದೆ ಪಕ್ಷ ಇದೆ, ಬೆದರಿಕೆಗೆ ಬಗ್ಗಲ್ಲ; ಸಿದ್ದರಾಮಯ್ಯ
ಸಾಕ್ಷ್ಯ ನೀಡದೆ ಪ್ರಿಯಾಂಕ್ ಪಲಾಯನ: ಆರಗ ಲೇವಡಿ
ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರು ಸಿಐಡಿ ಅಧಿಕಾರಿಗಳ ಮುಂದೆ ಹಾಜರಾಗಿ ತನಿಖೆಗೆ ಸಹಕರಿಸುವುದರ ಬದಲು ಪಲಾಯನವಾದ ನೀತಿ ಅನುಸರಿಸಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಲೇವಡಿ ಮಾಡಿದ್ದಾರೆ. ಸಿಐಡಿ ಅಧಿಕಾರಿಗಳ ಮುಂದೆ ಹಾಜರಾಗಿ ಸಾಕ್ಷ್ಯಾಧಾರಗಳನ್ನು ನೀಡದೆ ಇರುವ ನಿರ್ಧಾರದ ಹಿಂದೆ ಬಂಧನಕ್ಕೆ ಒಳಗಾಗಿರುವ ತಮ್ಮ ಆಪ್ತರನ್ನು ರಕ್ಷಿಸುವ ಇರಾದೆ ಖರ್ಗೆ ಅವರಿಗೆ ಇದೆ ಎಂಬ ಸಂಶಯ ಮೂಡುತ್ತದೆ ಎಂದೂ ಹೇಳಿದ್ದಾರೆ.
ಶಾಸಕ ಖರ್ಗೆ ಅವರು ತಮ್ಮ ಬಳಿ ಅಕ್ರಮ ನೇಮಕಾತಿಗೆ ಸಂಬಂಧಿಸಿದಂತೆ ಬಹಳಷ್ಟುಸಾಕ್ಷ್ಯಾಧಾರಗಳು, ವ್ಯಕ್ತಿಗಳ ಹೆಸರುಗಳು ಗೊತ್ತು ಎಂಬುದಾಗಿ ಮಾಧ್ಯಮದವರ ಮುಂದೆ ಬಿಂಬಿಸಿಕೊಂಡಿದ್ದರು. ಈಗ ಸಿಐಡಿ ಅಧಿಕಾರಿಗಳ ಮುಂದೆ ಹಾಜರಾಗಲು ಹಿಂಜರಿಯುತ್ತಿದ್ದಾರೆ. ತಮ್ಮ ಹೊಣೆಗಾರಿಕೆಯನ್ನು ಮರೆತು, ತಮ್ಮಲ್ಲಿ ಯಾವುದೇ ಸಾಕ್ಷ್ಯಾಧಾರಗಳಿಲ್ಲ, ಕೇವಲ ಸಾಮಾಜಿಕ ಜಾಲತಾಣದಲ್ಲಿರುವ ಮಾಹಿತಿಯನ್ನು ಮಾತ್ರ ಪ್ರಕಟಿಸಿದ್ದೆ ಎಂಬ ಬಾಲಿಶ ಹೇಳಿಕೆ ನೀಡಿದ್ದಾರೆ. ಈಗಲಾದರೂ ಖರ್ಗೆ ಅವರು ತನಿಖೆ ಕೈಗೊಂಡಿರುವ ಸಿಐಡಿ ಅಧಿಕಾರಿಗಳಿಗೆ ತಮ್ಮ ಬಳಿಯಿರುವ ದಾಖಲೆ ಹಾಗೂ ಮಾಹಿತಿಯನ್ನು ಹಂಚಿಕೊಳ್ಳಬೇಕು. ಅಕ್ರಮ ನೇಮಕಾತಿ ಪ್ರಕರಣದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರನ್ನೂ ಕಾನೂನು ಪ್ರಕ್ರಿಯೆಗಳಿಗೆ ಒಳಪಡಿಸಲು ಸಹಕರಿಸಬೇಕು ಎಂದು ಸಚಿವರು ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.