* ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಬೇಕು: ಸಿದ್ದು, ಡಿಕೆಶಿ ಒತ್ತಾಯ* ಬಂಧಿತ ಎಡಿಜಿಪಿ ಅಮೃತ್‌ಪಾಲ್‌ ನಡೆಸಿದ ಎಲ್ಲ ನೇಮಕಾತಿಗಳ ತನಿಖೆಗೆ ಪಟ್ಟು* ಪಿಎಸ್‌ಐ ಅಕ್ರಮ: ಆರಗ ವಜಾ, ನ್ಯಾಯಾಂಗ ತನಿಖೆಗೆ ಕೈ ಆಗ್ರಹ

ಬೆಂಗಳೂರು(ಜು.06): ಪಿಎಸ್‌ಐ ನೇಮಕಾತಿ ಪ್ರಕರಣದ ಹಿನ್ನೆಲೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಕೂಡಲೇ ಸಂಪುಟದಿಂದ ವಜಾ ಮಾಡಬೇಕು. ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಬೇಕು. ತಪ್ಪಿದರೇ ರಾಜ್ಯಪಾಲರೇ ಈ ಭ್ರಷ್ಟಸರ್ಕಾರವನ್ನು ವಜಾ ಮಾಡಬೇಕು.

ಜೊತೆಗೆ, ಹಗರಣದಲ್ಲಿ ಭಾಗಿಯಾಗಿರುವ ಘಟಾನುಘಟಿಗಳ ಪಾತ್ರ ಬಹಿರಂಗಗೊಳಿಸಲು ನ್ಯಾಯಾಂಗ ತನಿಖೆಗೆ ನಡೆಸಬೇಕು ಮತ್ತು ಬಂಧಿತ ಎಡಿಜಿಪಿ ಅಮೃತ್‌ ಪಾಲ್‌ ಇದುವರೆಗೂ ನಡೆಸಿರುವ ಎಲ್ಲ ನೇಮಕಾತಿಗಳ ಬಗ್ಗೆ ಸಮಗ್ರ ತನಿಖೆ ನಡೆಯಬೇಕು.

ನಗರದಲ್ಲಿ ಮಂಗಳವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಆಗ್ರಹವಿದು. ಈ ಆಗ್ರಹಕ್ಕೆ ಮಣಿಯದಿದ್ದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ಅವರು ನೀಡಿದ್ದಾರೆ.

ಈ ಹಗರಣದಲ್ಲಿ ಇನ್ನೂ ದೊಡ್ಡ ದೊಡ್ಡ ಘಟಾನುಘಟಿಗಳು ಭಾಗಿಯಾಗಿದ್ದಾರೆ. ಸಿಐಡಿ ತನಿಖೆಯಿಂದ ಈ ದೊಡ್ಡವರ ಹೆಸರು ಬಹಿರಂಗಕ್ಕೆ ಬರಲು ಸಾಧ್ಯವಿಲ್ಲ. ಹೀಗಾಗಿ ಹೈಕೋರ್ಚ್‌ ನ್ಯಾಯಮೂರ್ತಿಯವರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಅವರು ಆಗ್ರಹಿಸಿದರು.

ಆರಂಭದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್‌, ಪಿಎಸ್‌ಐ ನೇಮಕಾತಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಸದನದಲ್ಲಿ ವಿವಿಧ ಸದಸ್ಯರ ಪ್ರಶ್ನೆಗಳಿಗೆ ಆರು ಬಾರಿ ಸುಳ್ಳು ಉತ್ತರ ಕೊಟ್ಟು ರಾಜ್ಯದ ಜನರಿಗೆ ತಪ್ಪು ಮಾಹಿತಿ ನೀಡಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ ಅವರ ವಿರುದ್ಧವೂ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು. ಇಡೀ ಪ್ರಕರಣದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಅವರು ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ರಾಜ್ಯಪಾಲರು ಸರ್ಕಾರವನ್ನು ವಜಾಗೊಳಿಸಬೇಕು. ತಪ್ಪಿದರೆ ಕಾಂಗ್ರೆಸ್‌ ಈ ಪ್ರಕರಣವನ್ನು ತಾಂತ್ರಿಕ ಅಂತ್ಯಕ್ಕೆ ಕೊಂಡೊಯ್ಯಲು ಹೋರಾಟಕ್ಕೆ ಮುಂದಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಯಾವುದೇ ಹಗರಣದ ವಿಚಾರಣೆ ವೇಳೆ ಆರೋಪಿ ಹೇಳಿಕೆ, ಕೆಳ ಅಧಿಕಾರಿಗಳ ಹೇಳಿಕೆ, ದಾಖಲಾತಿ ಸಂಗ್ರಹದಂತಹ ನಂತರ ಆರೋಗ್ಯ ತಪಾಸಣೆ ನಡೆಸುವುದು ವಾಡಿಕೆ. ಆದರೆ, ಅಮೃತ್‌ ರಾಲ್‌ರನ್ನು ಬಂಧಿಸಿದ ಅರ್ಧಗಂಟೆಯಲ್ಲಿ ಆರೋಗ್ಯ ಪರೀಕ್ಷೆಗೆ ಕಳಿಸಿದ್ದಾರೆ. ನನ್ನ ಮೇಲಿನ ಸಣ್ಣ ಪ್ರಕರಣದಲ್ಲಿ ಗಂಟೆ ಗಟ್ಟಲೆ ವಿಚಾರಣೆ ನಡೆಸಿದರು. ರಾಹುಲ್‌ ಗಾಂಧಿ ಅವರನ್ನು 50 ಗಂಟೆ ವಿಚಾರಣೆ ಮಾಡಿದರು. ಈ 500 ಕೋಟಿ ರು.ಗಳಷ್ಟುಹಗರಣ ಆರೋಪದ ಈ ಪ್ರಕರಣದಲ್ಲಿ ಕೇವಲ ಅರ್ಧಗಂಟೆಯಲ್ಲಿ ವಿಚಾರಣೆ ಮುಗಿಸಿದ್ದಾರೆ. ನಾಚಿಕೆ ಮಾನ ಮರ್ಯಾದೆ ಏನೂ ಇಲ್ಲವಾ ಎಂದು ಅವರು ಪ್ರಶ್ನಿಸಿದರು.

ಗೃಹ ಸಚಿವರ ವಿರುದ್ಧ ಪ್ರಕರಣ:

ಸಿದ್ದರಾಮಯ್ಯ ಮಾತನಾಡಿ, ಎಡಿಜಿಪಿ ತಮ್ಮ ಕಚೇರಿಯಲ್ಲೇ 300 ಅಭ್ಯರ್ಥಿಗಳ ಒಎಂಆರ್‌ ತಿದ್ದುಪಡಿ ಮಾಡಿಸಿದ್ದಾರೆ ಎಂಬ ಆರೋಪವಿದೆ. ಸರ್ಕಾರದ ನಿರ್ದೇಶನ ಇಲ್ಲದೆ ಅಷ್ಟುರಾಜಾರೋಷವಾಗಿ ತಿದ್ದುಪಡಿ ಮಾಡಲು ಸಾಧ್ಯವಾ? ಕೋಟ್ಯಾಂತರ ರು. ಲಂಚ ಪಡೆಯಲು ಸಾಧ್ಯವೇ? ಒಂದೆಡೆ ಪ್ರಮಾಣಿಕವಾಗಿ ಪರೀಕ್ಷೆ ಬರೆದು ಆಯ್ಕೆಯಾದವರು ಕಣ್ಣೀರು ಸುರಿಸುತ್ತಿದ್ದಾರೆ. ಮತ್ತೊಂದೆಡೆ ಅಕ್ರಮ ನಡೆಸಿ ಒಂದೊಂದು ಹುದ್ದೆಗೆ 30ರಿಂದ 80 ಲಕ್ಷ ರು. ವರೆಗೆ ಲಂಚ ಪಡೆಯಲಾಗಿದೆ ಎಂಬ ಆಪಾದನೆಗಳಿವೆ. ಈ ಹಣ ಯಾವ್ಯಾವ ಸಚಿವರ ಜೇಬಿಗೆ ಹೋಗಿದೆ ಗೊತ್ತಾಗಬೇಕಲ್ವಾ? ಹಾಗಾಗಿ ಇಡೀ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು. ಸಿಐಡಿಯಿಂದ ಸಂಪೂರ್ಣ ಸತ್ಯ ಹೊರಬರುವುದಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಪ್ರಿಯಾಂಕ ಖರ್ಗೆ, ಶಾಸಕ ಮುನಿಯಪ್ಪ, ವಿಧಾನ ಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ ಮತ್ತಿತರರಿದ್ದರು.

ನ್ಯಾಯಾಂಗಕ್ಕೇ ರಕ್ಷಣೆ ಇಲ್ಲ

ರಾಜ್ಯದ ಆಡಳಿತ ಯಾವ ಮಟ್ಟಕ್ಕೆ ಹೋಗಿದೆ ಎಂದರೆ ಹೈಕೋರ್ಚ್‌ ಜಡ್ಜ್‌ ಒಬ್ಬರು ತಮ್ಮ ಸ್ಥಾನಕ್ಕೆ ಕಂಟಕ ಬಂದ ಬಗ್ಗೆ ದುಗುಡ ಹೇಳಿಕೊಂಡಿದ್ದಾರೆ. ಈ ಸರ್ಕಾರದಲ್ಲಿ ನ್ಯಾಯಾಂಗಕ್ಕೂ ರಕ್ಷಣೆ ಇಲ್ಲದಂತಾಗಿದೆ. ಇದಕ್ಕಾಗಿ ಆ ನ್ಯಾಯಾಧೀಶರಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ.

- ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

ಆಗ ಯಾಕೆ ಸುಮ್ಮನಿದ್ದಿರಿ?

ಕಾಂಗ್ರೆಸ್‌ ಸರ್ಕಾರದಲ್ಲಿ ನಡೆದ ನೇಮಕಾತಿಗಳಲ್ಲೂ ಅಕ್ರಮ ನಡೆದಿತ್ತು ಎಂದು ಈಗ ಹೇಳಿಕೆ ನೀಡುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಆಗ ಏನು ಮಾಡುತ್ತಿದ್ದಿರಿ? ನಿಮ್ಮ ಬಳಿ ದಾಖಲೆ ಇದ್ದಿದ್ದರೆ ತನಿಖೆಗೆ ಆಗಲೇ ಒತ್ತಾಯ ಮಾಡಬೇಕಿತ್ತು. ಯಾಕೆ ಸುಮ್ಮನಿದ್ರಿ.

- ಸಿದ್ದರಾಮಯ್ಯ, ವಿಧಾನಸಭೆ ಪ್ರತಿಪಕ್ಷ ನಾಯಕ

ಆರು ಬಾರಿ ಆರಗ ಸುಳ್ಳು

ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ನಡೆದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ 6 ಬಾರಿ ಸದನದಲ್ಲಿ ಸುಳ್ಳು ಉತ್ತರ ನೀಡಿದ್ದಾರೆ. ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ, ಅವರ ವಿರುದ್ಧವೂ ಕೇಸು ದಾಖಲಿಸಿ ತನಿಖೆ ನಡೆಸಬೇಕು. ಸಿಎಂ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಕಾಂಗ್ರೆಸ್‌ ಹೋರಾಟ ನಡೆಸಲಿದೆ.

- ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

1 ಹುದ್ದೆಗೆ 80 ಲಕ್ಷ ಲಂಚ!

ಎಡಿಜಿಪಿ ತಮ್ಮ ಕಚೇರಿಯಲ್ಲೇ 300 ಅಭ್ಯರ್ಥಿಗಳ ಒಎಂಆರ್‌ ತಿದ್ದುಪಡಿ ಮಾಡಿಸಿದ್ದಾರೆ. ಒಂದೊಂದು ಹುದ್ದೆಗೆ 30ರಿಂದ 80 ಲಕ್ಷ ರು. ಲಂಚ ಪಡೆದ ಬಗ್ಗೆ ಆಪಾದನೆ ಇದೆ. ಸರ್ಕಾರದ ನಿರ್ದೇಶನ ಇಲ್ಲದೆ ಇದೆಲ್ಲ ಸಾಧ್ಯವಾ? ಹಗರಣದ ಹಿಂದೆ ಯಾವ ಸಚಿವರಿದ್ದಾರೆ ಎಂದು ತಿಳಿಯಲು ನ್ಯಾಯಾಂಗ ತನಿಖೆ ನಡೆಯಬೇಕು.

- ಸಿದ್ದರಾಮಯ್ಯ, ವಿಧಾನಸಭೆ ವಿಪಕ್ಷ ನಾಯಕ