Asianet Suvarna News Asianet Suvarna News

ಪಿಎಸ್‌ಐ ಪರಶುರಾಮ್‌ ಸಾವಿನ ಪ್ರಕರಣ ತನಿಖೆ ಸಿಬಿಐಗೆ?

ಪಿಎಸೈ ಪರಶುರಾಮ್‌ ಸೇರಿದಂತೆ, ಈಶಾನ್ಯ ವಲಯದ ಕೆಲವು ಪಿಎಸೈ ವರ್ಗಾವಣೆ ವಿಚಾರದಲ್ಲಿ ಕೇಳಿಬಂದ ಆರೋಪಗಳಿಂದಾಗಿ ಸಿಐಡಿ ಅಧಿಕಾರಿಗಳು ಪರಶುರಾಮ್‌ ಪ್ರಕರಣದಲ್ಲಿ ಡಿಐಜಿ ಕಚೇರಿಯ ಕೆಲವರ ವಿಚಾರಣೆ ನಡೆಸುವ ಸಾಧ್ಯತೆಯಿದೆ. ಅಲ್ಲಿನ ಕೆಲವರು ಮಧ್ಯವರ್ತಿಯಂತೆ ಕೆಲಸ ನಿರ್ವಹಿಸುತ್ತಿದ್ದು, ಪಿಎಸೈ ವರ್ಗಾವಣೆಯಲ್ಲಿ ಭಾರಿ ಪ್ರಮಾಣದ ದುಡ್ಡಿನ ಅವ್ಯವಹಾರ ನಡೆದಿದೆ ಎಂದು ಪೊಲೀಸ್‌ ವಲಯದಲ್ಲೇ ಮಾತುಗಳಿವೆ.
 

PSI Parashuram's death case investigation to CBI grg
Author
First Published Aug 7, 2024, 11:37 AM IST | Last Updated Aug 7, 2024, 12:21 PM IST

ಆನಂದ್‌ ಎಂ. ಸೌದಿ

ಯಾದಗಿರಿ(ಆ.07):  ಪಿಎಸೈ ಪರಶುರಾಮ್‌ ಶಂಕಾಸ್ಪದ ಸಾವಿನ ಪ್ರಕರಣ ಸಿಬಿಐ ತನಿಖೆಗೊಳಪಡುವ ಬಹುತೇಕ ಸಾಧ್ಯತೆಗಳು ಕಂಡುಬರುತ್ತಿವೆ. ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆ ವಹಿಸಿದೆಯಾದರೂ, ಸಿಬಿಐಗೆ ವಹಿಸುವಂತೆ ಕುಟುಂಬಸ್ಥರು ಹಾಗೂ ರಾಜ್ಯ ಬಿಜೆಪಿ ನಾಯಕರು ಆಗ್ರಹಿಸಿದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆ ಸಿಬಿಐಗೆ ಪ್ರಕರಣ ಕೊಡಲು ಕ್ರಮಕ್ಕೆ ಮುಂದಾಗಿದೆ ಎಂದು ಮೂಲಗಳು ಹೇಳಿವೆ.

ಇದಕ್ಕೆ ಪೂರಕವೆಂಬಂತೆ, ಕೇಂದ್ರ ಗೃಹ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಪಿಎಸೈ ಪರಶುರಾಮ್‌ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳವಣಿಗೆಗಳ ಕುರಿತು ವಿವಿಧ ಮಾಹಿತಿ ಕಲೆ ಹಾಕಿದೆ ಎಂದು ಬೆಂಗಳೂರಿನ ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು "ಕನ್ನಡಪ್ರಭ"ಕ್ಕೆ ಪ್ರತಿಕ್ರಿಯಿಸಿದ್ದಾರೆ.

ನನ್ನ ಪತಿಯ ಸಾವಿನ ಕೇಸನ್ನು ಸಿಬಿಐಗೆ ವಹಿಸಿ: ಪರಶುರಾಮ ಪತ್ನಿ ಶ್ವೇತಾ

ಪರಶುರಾಮ್‌ ಪತ್ನಿ ಹಾಗೂ ಕುಟುಂಬಸ್ಥರ ಆರೋಪಗಳು, ತಮ್ಮದೇ ಇಲಾಖೆಯ ಪೊಲೀಸ್ ಅಧಿಕಾರಿಯೊಬ್ಬರ ಶಂಕಾಸ್ಪದ ಸಾವಿನ ಬಗ್ಗೆ ಶಾಸಕ, ಪುತ್ರನ ವಿರುದ್ಧ ಎಫ್‌ಐಆರ್‌ ದಾಖಲಿಸುವಲ್ಲಿ ಪೊಲೀಸ್‌ ಇಲಾಖೆ ಮಾಡುತ್ತಿರುವ ವಿಳಂಬ, ಪ್ರತಿಭಟನೆ ಸೇರಿದಂತೆ ಇಡೀ ಪ್ರಕರಣದ ಇಂಚಿಂಚೂ ಮಾಹಿತಿಗಳನ್ನು ಕೇಂದ್ರ ಅಧಿಕಾರಿಗಳು ಪಡೆದುಕೊಂಡಿದ್ದಾರೆ ಅವರು ತಿಳಿಸಿದ್ದಾರೆ.

ಡಿಐಜಿ ಕಚೇರಿಯಲ್ಲೂ ವಿಚಾರಣೆ ಸಾಧ್ಯತೆ

ಪಿಎಸೈ ಪರಶುರಾಮ್‌ ಸೇರಿದಂತೆ, ಈಶಾನ್ಯ ವಲಯದ ಕೆಲವು ಪಿಎಸೈ ವರ್ಗಾವಣೆ ವಿಚಾರದಲ್ಲಿ ಕೇಳಿಬಂದ ಆರೋಪಗಳಿಂದಾಗಿ ಸಿಐಡಿ ಅಧಿಕಾರಿಗಳು ಪರಶುರಾಮ್‌ ಪ್ರಕರಣದಲ್ಲಿ ಡಿಐಜಿ ಕಚೇರಿಯ ಕೆಲವರ ವಿಚಾರಣೆ ನಡೆಸುವ ಸಾಧ್ಯತೆಯಿದೆ. ಅಲ್ಲಿನ ಕೆಲವರು ಮಧ್ಯವರ್ತಿಯಂತೆ ಕೆಲಸ ನಿರ್ವಹಿಸುತ್ತಿದ್ದು, ಪಿಎಸೈ ವರ್ಗಾವಣೆಯಲ್ಲಿ ಭಾರಿ ಪ್ರಮಾಣದ ದುಡ್ಡಿನ ಅವ್ಯವಹಾರ ನಡೆದಿದೆ ಎಂದು ಪೊಲೀಸ್‌ ವಲಯದಲ್ಲೇ ಮಾತುಗಳಿವೆ.

- ಏನಿದು ಪ್ರಕರಣ ?

ಯಾದಗಿರಿ ನಗರ ಠಾಣೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪಿಎಸೈ ಆಗಿದ್ದ ಪರಶುರಾಮ್‌, ಅವಧಿಪೂರ್ವ ವರ್ಗಾವಣೆಯಿಂದ ನೊಂದಿದ್ದರೆನ್ನಲಾಗಿದ್ದು, ಶುಕ್ರವಾರ (ಆ.2) ಮನೆಯಲ್ಲಿ ಮಲಗಿದ್ದಾಗ ಮೃತಪಟ್ಟಿದ್ದರು.
ವರ್ಗಾವಣೆ ತಡೆಯಲು ಯಾದಗಿರಿ ಶಾಸಕ ಚೆನ್ನಾರೆಡ್ಡಿ ತುನ್ನೂರು ಹಾಗೂ ಪುತ್ರ ಸನ್ನೀಗೌಡ, ತಮ್ಮ ಪತಿ ಪರಶುರಾಮಗೆ 30 ಲಕ್ಷ ರು.ಗಳ ಬೇಡಿಕೆ ಇಟ್ಟಿದ್ದರಿಂದ ತೀವ್ರ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತ್ನಿ ಶ್ವೇತಾ ಆರೋಪಿಸಿದ್ದಾರೆ. ಭಾರಿ ಒತ್ತಡಗಳಿಗೆ ಮಣಿದ ಸರ್ಕಾರ, ಶಾಸಕ ಹಾಗೂ ಪುತ್ರ ವಿರುದ್ಧ ಎಫ್‌ಐಆರ್‌ ದಾಖಲಿಸಿ, ಸಿಐಡಿ ತನಿಖೆಗೆ ಆದೇಶಿಸಿದೆ.

Latest Videos
Follow Us:
Download App:
  • android
  • ios