Asianet Suvarna News Asianet Suvarna News

ಸ್ಮಶಾನಕ್ಕೆ ಜಾಗ: ವಂಚಕ ಜಿಲ್ಲಾಧಿಕಾರಿಗಳಿಗೆ ಜೈಲಿಗಟ್ಟುವ ಎಚ್ಚರಿಕೆ ನೀಡಿದ ಹೈಕೋರ್ಟ್

ರಾಜ್ಯದ ಎರಡು ಸಾವಿರಕ್ಕೂ ಅಧಿಕ ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಾಗ ಕಲ್ಪಿಸದಿದ್ದರೂ, 319 ಗ್ರಾಮಗಳಿಗಷ್ಟೇ ಸ್ಮಶಾನ ಜಾಗ ಒದಗಿಸಬೇಕಿದೆ ಎಂದು ತಪ್ಪು ಮಾಹಿತಿ ನೀಡಿರುವ ಎಲ್ಲ ಜಿಲ್ಲಾಧಿಕಾರಿಗಳು ಮಾ.16ರಂದು ವಿಚಾರಣೆಗೆ ಖುದ್ದು ಹಾಜರಾಗಬೇಕು.

providing land for burial grounds high court summoned for deputy commissioners gvd
Author
First Published Mar 10, 2023, 11:33 AM IST

ಬೆಂಗಳೂರು (ಮಾ.09): ರಾಜ್ಯದ ಎರಡು ಸಾವಿರಕ್ಕೂ ಅಧಿಕ ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಾಗ ಕಲ್ಪಿಸದಿದ್ದರೂ, 319 ಗ್ರಾಮಗಳಿಗಷ್ಟೇ ಸ್ಮಶಾನ ಜಾಗ ಒದಗಿಸಬೇಕಿದೆ ಎಂದು ತಪ್ಪು ಮಾಹಿತಿ ನೀಡಿರುವ ಎಲ್ಲ ಜಿಲ್ಲಾಧಿಕಾರಿಗಳು ಮಾ.16ರಂದು ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂದು ತಾಕೀತು ಮಾಡಿರುವ ಹೈಕೋರ್ಟ್‌, ತಪ್ಪು ಮಾಹಿತಿ ನೀಡುವ ಮೂಲಕ ನ್ಯಾಯಾಲಯಕ್ಕೆ ವಂಚನೆ ಎಸಗಿರುವ ಜಿಲ್ಲಾಧಿಕಾರಿಗಳನ್ನು ಜೈಲಿಗೆ ಕಳುಹಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ರಾಜ್ಯದಲ್ಲಿ ಸ್ಮಶಾನಕ್ಕೆ ಜಾಗ ಇಲ್ಲದ ಗ್ರಾಮಗಳಿಗೆ ಅಗತ್ಯ ಭೂಮಿ ಒದಗಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಬೆಂಗಳೂರು ನಿವಾಸಿ ಮಹಮ್ಮದ್‌ ಇಕ್ಬಾಲ್‌ ಸಲ್ಲಿಸಿದ್ದ ಸಿವಿಲ್‌ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಬಿ. ವೀರಪ್ಪ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ನಿರ್ದೇಶನ ನೀಡಿದೆ. ಕಳೆದ ಜ.10ರಂದು ಅರ್ಜಿ ವಿಚಾರಣೆ ವೇಳೆ ಸರ್ಕಾರ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ರಾಜ್ಯದ ಒಟ್ಟು 29,616 ಗ್ರಾಮಗಳ ಪೈಕಿ ಈವರೆಗೆ 27,903 ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಮೀನು ಒದಗಿಸಲಾಗಿದೆ. 319 ಗ್ರಾಮಗಳಿಗೆ ಸ್ಮಶಾನ ಸೌಲಭ್ಯ ಒದಗಿಸಬೇಕಾಗಿದೆ. 

ಬೆಂಗಳೂರಿನಲ್ಲಿ ಹೊತ್ತಿ ಉರಿದ ಬಿಎಂಟಿಸಿ: ಬಸ್‌ನಲ್ಲೇ ಕಂಡಕ್ಟರ್ ಸಜೀವ ದಹನ

56 ಗ್ರಾಮಗಳಲ್ಲಿ ಆಗಿರುವ ಸ್ಮಶಾನ ಜಾಗದ ಒತ್ತುವರಿ ತೆರವುಗೊಳಿಸಲಾಗುತ್ತಿದೆ. ಒಟ್ಟು 1,394 ಬೇಚರಾಕ್‌ (ಜನ ವಸತಿ ಇಲ್ಲದ) ಗ್ರಾಮಗಳಿವೆ ಎಂದು ವಿವರಿಸಲಾಗಿತ್ತು. ಅದನ್ನು ಪರಿಗಣಿಸಿದ್ದ ನ್ಯಾಯಪೀಠ, ಸರ್ಕಾರದ ವರದಿ ಪರಿಶೀಲಿಸಿ ವಸ್ತುಸ್ಥಿತಿ ಮಾಹಿತಿ ತಿಳಿಸುವಂತೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನಿರ್ದೇಶಿಸಿತ್ತು. ಗುರುವಾರ ಪ್ರಾಧಿಕಾರದ ಪರ ವಕೀಲರು, ಸರ್ಕಾರದ ಅಂಕಿ-ಅಂಶಗಳಿಗೂ ಮತ್ತು ಪ್ರಾಧಿಕಾರ ಸಂಗ್ರಹಿಸಿದ ಮಾಹಿತಿಗೂ ವ್ಯತ್ಯಾಸವಿದೆ. ರಾಜ್ಯದಲ್ಲಿ ಇನ್ನೂ 2,041 ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಾಗ ಒದಗಿಸಬೇಕಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. 

ಇದೇ ವೇಳೆ ಸರ್ಕಾರಿ ವಕೀಲರು ಸಹ, ಪ್ರಕರಣದಲ್ಲಿ ಸರ್ಕಾರದಿಂದ ತಪ್ಪಾಗಿದೆ, ಕೆಲ ಜಿಲ್ಲಾಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದರು. ಇದರಿಂದ ಕೋಪಗೊಂಡ ನ್ಯಾಯಪೀಠ, ಹೈಕೋರ್ಟ್‌ ಆದೇಶಕ್ಕೆ ಅಧಿಕಾರಿಗಳು ಅಗೌರವ ತೋರುತ್ತಿದ್ದಾರೆ. ಇದರಿಂದ ಪ್ರಕರಣದ ಆರೋಪಿಗಳಾದ ಸರ್ಕಾರಿ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ನಿಗದಿಪಡಿಸುವುದು ಬಿಟ್ಟು ಅನ್ಯ ಮಾರ್ಗವಿಲ್ಲ. ಆದ್ದರಿಂದ ಪ್ರಕರಣದ ಆರೋಪಿಗಳು ಮತ್ತು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ ಎಲ್ಲ ಜಿಲ್ಲಾಧಿಕಾರಿಗಳು ಮಾ.16ರಂದು ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂದು ನಿರ್ದೇಶಿಸಿತು.

ಮೋದಿ ರೋಡ್‌ ಶೋನಲ್ಲಿ 40 ಸಾವಿರ ಮಂದಿ ಭಾಗಿ: ಜನರನ್ನು ಕರೆತರಲು 4 ಸಾವಿರ ಬಸ್‌ ವ್ಯವಸ್ಥೆ

‘ತ್ರೀ ಇನ್‌ ಒನ್‌ ಮೋಸ’: ವಿಚಾರಣೆ ವೇಳೆ ಸರ್ಕಾರಿ ವಕೀಲರನ್ನು ಉದ್ದೇಶಿಸಿ ಪ್ರತಿಕ್ರಿಯಿಸಿದ ನ್ಯಾ.ಬಿ.ವೀರಪ್ಪ, ಜಿಲ್ಲಾಧಿಕಾರಿಗಳು ಹೇಗೆ ತಪ್ಪು ಮಾಹಿತಿ ನೀಡುತ್ತಾರೆ? ಅವರು ಕಣ್ಣು ಮುಚ್ಚಿಕೊಂಡು ನೀಡುವ ಮಾಹಿತಿ ಪರಿಶೀಲಿಸಲು, ಸತ್ಯಾಂಶ ಪತ್ತೆ ಹಚ್ಚಲು ಅರ್ಜಿದಾರರಿಗೆ ಹೇಗೆ ಸಾಧ್ಯವಾಗುತ್ತದೆ, ಎಷ್ಟುಗ್ರಾಮಗಳಿಗೆ ಭೇಟಿ ಕೊಡಲಾಗುತ್ತದೆ, ಅನಿವಾರ್ಯವಾಗಿ ಅರ್ಜಿದಾರರು ಮತ್ತು ನ್ಯಾಯಾಲಯ ಮಾಹಿತಿಗಾಗಿ ಸರ್ಕಾರವನ್ನು ನಂಬಿಕೊಳ್ಳಬೇಕು. ಜಿಲ್ಲಾಧಿಕಾರಿಗಳು ಸುಳ್ಳು ಮಾಹಿತಿ ಒದಗಿಸಿ ನ್ಯಾಯಾಲಯ, ಅರ್ಜಿದಾರರು ಮತ್ತು ಸಾರ್ವಜನಿಕರಿಗೆ ವಂಚನೆ ಮಾಡುತ್ತಿದ್ದಾರೆ. ಇದು ‘ತ್ರೀ ಇನ್‌ ಒನ್‌ ಮೋಸ’ ಎಂದು ಬೇಸರ ವ್ಯಕ್ತಪಡಿಸಿದರು.

Follow Us:
Download App:
  • android
  • ios