ಎರಡು ಪ್ರತ್ಯೇಕ ಘಟನೆಯಲ್ಲಿ ಖಾಸಗಿ ಆಸ್ಪತ್ರೆಯ ಬಣ ಬಯಲು| ಕುಟುಂಬಸ್ಥರ ತೀವ್ರ ವಿರೋಧ| ವಿರೋಧಿಸಿದ ಮೃತನ ಸಂಬಂಧಿಕರಿಂದ ಪ್ರತಿಭಟನೆ
ಬೆಂಗಳೂರು(ಆ.26): ಚಿಕಿತ್ಸಾ ವೆಚ್ಚ ಪಾವತಿಸಿದ ನಂತರವೇ ಮೃತದೇಹ ಪಡೆದುಕೊಳ್ಳುವಂತೆ ಖಾಸಗಿ ಆಸ್ಪತ್ರೆಯೊಂದು ಕುಟುಂಬದ ಸದಸ್ಯರಿಗೆ ಒತ್ತಡ ಹಾಕಿದ ಎರಡು ಪ್ರತ್ಯೇಕ ಘಟನೆ ನಗರದ ಕಲ್ಯಾಣನಗರದಲ್ಲಿ ನಡೆದಿದೆ.
ನಲವತ್ತು ದಿನಕ್ಕೂ ಹೆಚ್ಚು ಕಾಲ ಐಸಿಯುನಲ್ಲಿ ಚಿಕಿತ್ಸೆ ನೀಡಿದ ನಂತರ ಯುವಕ ಮೃತಪಟ್ಟಿದ್ದಾನೆ. ಆಸ್ಪತ್ರೆ ಮೃತನ ಶವ ನೀಡದೆ ಬಾಕಿ ಮೂರು ಲಕ್ಷ ಹಣ ಕಟ್ಟುವಂತೆ ಹೇಳಿತ್ತು. ಇದನ್ನು ವಿರೋಧಿಸಿದ ಮೃತನ ಸಂಬಂಧಿಕರು ಮಂಗಳವಾರ ಆಸ್ಪತ್ರೆ ಮುಂದೆ ಪ್ರತಿಭಟನೆ ಮಾಡಿದರು.
ಅಪಘಾತದಲ್ಲಿ ತಲೆಗೆ ಪೆಟ್ಟು ಬಿದ್ದ ಕಾರಣಕ್ಕೆ ಜು.9ರಂದು ಖಾಸಗಿ ಆಸ್ಪತ್ರೆಗೆ ಯುವಕನನ್ನು ದಾಖಲಿಸಲಾಗಿತ್ತು. ಗುಣಪಡಿಸಲಾಗುವುದು ಎಂದ ವೈದ್ಯರು 40 ದಿನದಿಂದಲೂ ಐಸಿಯುನಲ್ಲಿ ಚಿಕಿತ್ಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಎರಡು ಬಾರಿ ಮಾಡಿದ ಕೊರೋನಾ ತಪಾಸಣೆಯಲ್ಲಿ ವರದಿಯಲ್ಲಿ ನೆಗಟಿವ್ ಬಂದಿದೆ. 21 ಲಕ್ಷ ಚಿಕಿತ್ಸಾ ವೆಚ್ಚದಲ್ಲಿ ಹಂತ ಹಂತವಾಗಿ 19 ಲಕ್ಷ ಪಾವತಿಸಿದ್ದೇವೆ. ಬಾಕಿ ಹಣ ಕಟ್ಟಿ ಮೃತದೇಹ ತೆಗೆದುಕೊಂಡು ಹೋಗಿ ಎಂದು ತೊಂದರೆ ನೀಡಿದರೆಂದು ಕುಟುಂಬದ ಸದಸ್ಯರು ಆರೋಪಿಸಿದರು.
ಒಂದೇ ದಿನ 8 ಸಾವಿರ ದಾಟಿದ ಪಾಸಿಟಿವ್ ಕೇಸ್ : ಸಾವಲ್ಲೂ ದಾಖಲೆ
ವೈದ್ಯರು ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ. ಅಲ್ಲದೇ ಹೆಚ್ಚಿನ ಪ್ರಮಾಣದಲ್ಲಿ ಔಷಧ ನೀಡಿದ್ದರಿಂದ ಯುವಕ ಮೃತಪಟ್ಟಿದ್ದಾನೆ. ಇದನ್ನು ಮುಚ್ಚಿಡಲು ಆಸ್ಪತ್ರೆ ಸಿಬ್ಬಂದಿ ಮೃತನಿಗೆ ಕೊರೋನಾ ಪಾಸಿಟಿವ್ ಇತ್ತು. ಕೂಡಲೇ ಬಾಕಿ ಹಣ ಕಟ್ಟಿಶವ ಒಯ್ದು ಅಂತ್ಯಕ್ರಿಯೆ ಮಾಡಿ. ಇಲ್ಲದಿದ್ದರೆ ಸಮಸ್ಯೆಯಾಗುತ್ತದೆ ಎಂದು ನಮ್ಮ ಮೇಲೆ ಒತ್ತಡ ಹಾಕಿದ್ದಾರೆ ಎಂದು ಮೃತನ ದೊಡ್ಡಪ್ಪ ಆರೋಪಿಸಿದ್ದಾರೆ. ಆಸ್ಪತ್ರೆ ಮುಂದೆ ಸುಮಾರು 30ಕ್ಕೂ ಅಧಿಕ ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಸಂಜೆ ವೇಳೆ ಮೃತರ ಕುಟುಂಬಸ್ಥರ ಒತ್ತಡಕ್ಕೆ ಮಣಿದ ಆಸ್ಪತ್ರೆ ಸಿಬ್ಬಂದಿ ಮೃತದೇಹ ಹಸ್ತಾಂತರಿಸಿದೆ.
ಆಸ್ಪತ್ರೆ ಸಿಬ್ಬಂದಿಯಿಂದ ಬೆದರಿಕೆ: ಆರೋಪ
ಕಲ್ಯಾಣನಗರದ ಇದೇ ಖಾಸಗಿ ಆಸ್ಪತ್ರೆಗೆ ಆ.13ರಂದು ದಾಖಲಾಗಿದ್ದ 72 ವರ್ಷದ ವೃದ್ಧರು ಸೋಮವಾರ ರಾತ್ರಿ ಮೃತಪಟ್ಟಿದ್ದು, ಮೃತದೇಹ ಹಸ್ತಾಂತರಿಸಲು ಬಾಕಿ ಹಣ ಪಾವತಿಸುವಂತೆ ಬೇಡಿಕೆ ಇಟ್ಟಿತ್ತು. ಇದಕ್ಕೆ ಬಾಣಸವಾಡಿ ಮೂಲದ ಮೃತರ ಕುಟುಂಬಸ್ಥರು ಪ್ರತಿರೋಧ ವ್ಯಕ್ತಪಡಿಸಿದರು.
ಅನಾರೋಗ್ಯ ಕಾರಣಕ್ಕೆ ತಂದೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲವು ದಿನ ಚಿಕಿತ್ಸೆ ನೀಡಿದ್ದ ವೈದ್ಯರು, ಎಂಟು ಗಂಟೆ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅಲ್ಲದೇ ಅವರಿಗೆ ಕೊರೋನಾ ಪಾಸಿಟಿವ್ ಇತ್ತು ಎಂದು ತಿಳಿಸಿದರು. ಆಸ್ಪತ್ರೆಗೆ ದಾಖಲಿಸಿದ ವೇಳೆಯೇ ತಪಾಸಣೆಯಲ್ಲಿ ತಂದೆಗೆ ಕೊರೋನಾ ನೆಗೆಟಿವ್ ವರದಿ ಬಂದಿತ್ತು. ಆದರೆ ಅವರ ಸಾವಿನ ನಂತರ ಪಾಸಿಟಿವ್ ಇದೆ ಎಂದಿರುವ ವೈದ್ಯರ ಹೇಳಿಕೆ ಅನುಮಾನ ಮೂಡಿಸಿದೆ ಎಂದು ಮಕ್ಕಳು ಆರೋಪಿಸಿದರು.
ಚಿಕಿತ್ಸೆಯ ವೆಚ್ಚ ಒಟ್ಟು 3.85 ಲಕ್ಷ ಆಗಿದ್ದು, ಇದರಲ್ಲಿ ಮೃತರು ಮಾಡಿಸಿರುವ ವಿಮಾ ಕಂಪನಿ 3.21 ಭರಿಸಲಿದೆ. ಬಾಕಿ ಹಣ ನೀವು ಪಾವತಿಸಿ ಶವ ಪಡೆಯವಂತೆ ವೈದ್ಯರು ಸೂಚಿಸಿದರು. ನಾವು ಇದಕ್ಕೆ ಒಪ್ಪದಿದ್ದಾಗ ಆಸ್ಪತ್ರೆ ಸಿಬ್ಬಂದಿ ನಮಗೆ ಬೆದರಿಕೆ ಹಾಕಿದ್ದಾರೆ ಎಂದು ಮೃತರ ಮಕ್ಕಳು ದೂರಿದ್ದಾರೆ.
