ಹಂಪಿ ಎಕ್ಸ್‌ಪ್ರೆಸ್‌ನಲ್ಲಿ ಬರುವಾಗ ಕನ್ನಡದಲ್ಲಿ ಮಾತನಾಡಿ ಎಂದಿದ್ದಕ್ಕೆ ಪ್ರಯಾಣಿಕ ಮಹ್ಮದ್‌ ಭಾಷಾ ಅತ್ತಾರ ಮೇಲೆ ಟಿಟಿ ಹಲ್ಲೆ ಮಾಡಿರುವುದನ್ನು ಖಂಡಿಸಿ ಕರವೇ ಕಾರ್ಯಕರ್ತರು ಪ್ರತಿಭಟನೆ ಮಾಡಿದರು.  

ಕೊಪ್ಪಳ (ಏ.27): ಹಂಪಿ ಎಕ್ಸ್‌ಪ್ರೆಸ್‌ನಲ್ಲಿ ಬರುವಾಗ ಕನ್ನಡದಲ್ಲಿ ಮಾತನಾಡಿ ಎಂದಿದ್ದಕ್ಕೆ ಪ್ರಯಾಣಿಕ ಮಹ್ಮದ್‌ ಭಾಷಾ ಅತ್ತಾರ ಮೇಲೆ ಟಿಟಿ ಹಲ್ಲೆ ಮಾಡಿರುವುದನ್ನು ಖಂಡಿಸಿ ಕೊಪ್ಪಳ ರೈಲ್ವೆ ನಿಲ್ದಾಣದ ಎದುರು ಕರವೇ ಕಾರ್ಯಕರ್ತರು ಶನಿವಾರ ಪ್ರತಿಭಟನೆ ಮಾಡಿದರು. ಟಿಟಿ ಅಮಾನತು ಮಾಡಬೇಕೆಂದು ನಿಲ್ದಾಣದ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು. ಕರವೇ ಜಿಲ್ಲಾಧ್ಯಕ್ಷ ಗಿರೀಶಾನಂದ ಜ್ಞಾನಸುಂದರ ಮಾತನಾಡಿ, ಏ.21ರಂದು ಭಾಗ್ಯನಗರದ ಮಹ್ಮದ್‌ ಭಾಷಾ ಅತ್ತಾರ ಮೈಸೂರಿನಿಂದ ಕೊಪ್ಪಳಕ್ಕೆ ಹಂಪಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸಿದ್ದಾರೆ. ಈ ವೇಳೆ ಟಿಟಿ ಟಿಕೆಟ್‌ ಚೆಕ್‌ ಮಾಡುವ ವೇಳೆ ಹಿಂದಿಯಲ್ಲಿ ಮಾತನಾಡಿದ್ದಾರೆ. ಆಗ ಮಹ್ಮದ್‌ಭಾಷಾ ಕನ್ನಡ ಮಾತನಾಡಿ ಎಂದು ಹೇಳಿದ್ದಾರೆ. 

ಆಗ ಟಿಟಿ ಮೊಬೈಲ್‌ ಕಿತ್ತುಕೊಂಡು ದರ್ಪ ಮೆರೆದಿದ್ದಾನೆ. ಜತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ದೌರ್ಜನ್ಯವೆಸಗಿದ್ದು ಬೇಸರದ ಸಂಗತಿ ಎಂದರು. ಇತ್ತೀಚೆಗೆ ಬೆಂಗಳೂರಿನಲ್ಲಿ ವಾಯುಪಡೆಯ ಅಧಿಕಾರಿಯೊಬ್ಬರು ಕನ್ನಡಿಗನ ಮೇಲೆ ಹಲ್ಲೆ ನಡೆಸಿರುವ ಘಟನೆ ಮಾಸುವ ಮುನ್ನವೇ ಈ ಪ್ರಕರಣ ನಡೆದಿರುವುದು ಖೇದಕರ ಸಂಗತಿ. ಪ್ರಯಾಣಿಕರಿಗೆ ಸುರಕ್ಷತೆ ಒದಗಿಸುವ ಅಧಿಕಾರಿಗಳೇ ದೌರ್ಜನ್ಯವೆಸಗಿದರೆ ರೈಲ್ವೆ ಇಲಾಖೆ ಮೇಲಿರುವ ನಂಬಿಕೆ ಹೋಗುತ್ತದೆ. ಕೂಡಲೇ ಟಿಟಿ ಅಮಾನತು ಮಾಡಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಮೂಗಿನ್, ಜಿಲ್ಲಾ ಗೌರವಾಧ್ಯಕ್ಷ ಶರಣಪ್ಪ ಚಂದನಕಟ್ಟಿ ಸೇರಿ ಇತರರು ಪಾಲ್ಗೊಂಡಿದ್ದರು.

ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸಿ: ಕಾಶ್ಮೀರದ ಪಹಲ್ಗಾಂನಲ್ಲಿ ಭಯೋತ್ಪಾದಕರ ದಾಳಿ, ಅಮಾಯಕ ಪ್ರವಾಸಿಗರ ಹತ್ಯೆ ಖಂಡಿಸಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಮತ್ತು ಜಿಲ್ಲಾ ಸಮಿತಿಯಿಂದ ನಗರದಲ್ಲಿ ಶನಿವಾರ ಪ್ರತಿಭಟಿಸಲಾಯಿತು. ಶ್ರೀ ಜಯದೇವ ವೃತ್ತದಲ್ಲಿ ವಿಶ್ವ ಕರವೇ ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪ ನೇತೃತ್ವದಲ್ಲಿ ಭಯೋತ್ಪಾದಕರ ದುಷ್ಕೃತ್ಯ ಖಂಡಿಸಿ, ಉಗ್ರರ ಸಂಘಟನೆಗಳು ಹಾಗೂ ಉಗ್ರರ ದಮನಕ್ಕೆ ಒತ್ತಾಯಿಸಿ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಘೋಷಣೆ ಕೂಗಿದರು.

1 ಲಕ್ಷ ದಾಟಿದರೂ ಇಳಿಯದ ಚಿನ್ನದ ಖರೀದಿ: ಬುಕ್ಕಿಂಗ್ 10ರಷ್ಟು ಹೆಚ್ಚಳ

ವಿಶ್ವ ಕರವೇ ಜಿಲ್ಲಾಧ್ಯಕ್ಷ ಬಾಬು ರಾವ್ ಮಾತನಾಡಿ, ಭೂ ಲೋಕದ ಸ್ವರ್ಗವೆಂದೇ ಜಮ್ಮು-ಕಾಶ್ಮೀರ ಕರೆಯಲ್ಪಡುತ್ತದೆ. ಅಲ್ಲಿನ ಪಹಲ್ಗಾಂ ಮಿನಿ ಸ್ವಿಡ್ಜರ್‌ಲೆಂಡ್‌ ಅಂತಲೇ ಪ್ರಸಿದ್ಧಿ. ಪ್ರಕೃತಿ ಸೌಂದರ್ಯ ವೀಕ್ಷಣೆಗೆ ತೆರಳಿದ್ದ ಅಮಾಯಕ ಪ್ರವಾಸಿಗರ ಮೇಲೆ ಗುಂಡು ಹಾಕಿಸಿ, 26ಕ್ಕೂ ಹೆಚ್ಚು ಜನರನ್ನು ಉಗ್ರರು ಬಲಿ ಪಡೆದಿದ್ದಾರೆ. ಈ ಕೃತ್ಯ ತೀವ್ರವಾಗಿ ಖಂಡಿಸುತ್ತೇವೆ ಎಂದರು. ಪಹಲ್ಗಾಂನಲ್ಲಿ ಉಗ್ರರ ದಾಳಿಯಿಂದಾಗಿ ದೇಶವೇ ಒಕ್ಕೊರಲಿನಿಂದ ದುಷ್ಕೃತ್ಯವನ್ನು ಖಂಡಿಸುತ್ತಿದೆ. ಭಯೋತ್ಪಾದರು, ಭಯೋತ್ಪಾದಕರ ಸಂಘಟನೆ ಹಾಗೂ ಉಗ್ರರ ಪ್ರೋತ್ಸಾಹಕರು, ಪ್ರಾಯೋಜಕರನ್ನೂ ಮಟ್ಟ ಹಾಕುವ ಕೆಲಸವನ್ನು ಕೇಂದ್ರ ಸರ್ಕಾರ, ಭಾರತೀಯ ಸೈನ್ಯವು ಪ್ರಥಮ ಆದ್ಯತೆಯೊಂದಿಗೆ ಮಾಡಬೇಕು. ಭಯೋತ್ಪಾದಕರಿಗೆ ಸಾಥ್ ನೀಡಿದವರನ್ನೂ ಸೇನೆ ನಿರ್ನಾಮ ಮಾಡಬೇಕಿದೆ ಎಂದು ಆಗ್ರಹಿಸಿದರು.