* ಅಂದು ಅಮಿತ್ ಶಾ ಬೆಂಗಳೂರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆ* ವರಿಷ್ಠರು ಮಾತ್ರ ಇದುವರೆಗೆ ಹಸಿರು ನಿಶಾನೆ ತೋರಿಲ್ಲ* ರಾಜ್ಯ ರಾಜಕಾರಣದಲ್ಲಿ ಸಹಜವಾಗಿಯೇ ಕುತೂಹಲ ಮೂಡಿಸಿದೆ
ಬೆಂಗಳೂರು(ಏ.30): ಶನಿವಾರ ನಡೆಯಲಿರುವ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಾಧೀಶರು, ಪ್ರಧಾನಿ ಹಾಗೂ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಪಾಲ್ಗೊಳ್ಳುವ ಸಂಬಂಧ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಶುಕ್ರವಾರ ರಾತ್ರಿ ದೆಹಲಿ ತಲುಪಿದ್ದಾರೆ.
ಈ ಭೇಟಿ ವೇಳೆ ಸಂಪುಟ ವಿಸ್ತರಣ(Cabinet Expansion) ಕುರಿತಂತೆ ಚರ್ಚಿಸಲು ಸಮಯಾವಕಾಶ ನೀಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ(JP Nadda) ಅವರಿಗೆ ಬೊಮ್ಮಾಯಿ ಪ್ರಯತ್ನ ಮಾಡಿದರೂ ಭೇಟಿಗೆ ಸಮಯ ಸಿಕ್ಕಿಲ್ಲ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ.
Cabinet Expansion: ಹೈಕಮಾಂಡ್‌ನತ್ತ ಬೊಟ್ಟು ಮಾಡಿದ ಸಿಎಂ: ಸಚಿವಾಕಾಂಕ್ಷಿಗಳಲ್ಲಿ ಹೆಚ್ಚಿದ ಟೆನ್ಷನ್..!
ಹೀಗಾಗಿ, ದೆಹಲಿ ಭೇಟಿ ವೇಳೆ ಸಂಪುಟ ಕಸರತ್ತಿನ ಬಗ್ಗೆ ಚರ್ಚೆಯಾಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಬರುವ ಮಂಗಳವಾರ (ಮೇ 3ರಂದು) ಅಮಿತ್ ಶಾ ಅವರು ಅಧಿಕೃತ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಆಗಮಿಸುತ್ತಿರುವುದರಿಂದ ಮುಖ್ಯಮಂತ್ರಿ ಬೊಮ್ಮಾಯಿ ಅವರು ಇಲ್ಲಿಯೇ ಮಾತುಕತೆ ನಡೆಸಲು ಪ್ರಯತ್ನಿಸುವ ಸಾಧ್ಯತೆಯಿದೆ.
ಇದೇ ವೇಳೆ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ಶನಿವಾರ ಇಡೀ ದಿನ ಸಭೆ ನಡೆಯುವ ಹಿನ್ನೆಲೆಯಲ್ಲಿ ರಾಜ್ಯದ ಸಂಪುಟ ವಿಸ್ತರಣೆ ಕುರಿತಂತೆ ಚರ್ಚೆ ಅಸಾಧ್ಯ. ಅಲ್ಲದೆ, ಭಾನುವಾರ ಬೆಳಗ್ಗೆ ಬೇಗ ನಾನು ದೆಹಲಿಯಿಂದ ಬೆಂಗಳೂರಿಗೆ ವಾಪಸ್ಸಾಗಲಿದ್ದೇನೆ. ಹಾಗಾಗಿ, ಸಂಪುಟ ವಿಸ್ತರಣೆ ಬಗ್ಗೆ ಬಿಜೆಪಿ ವರಿಷ್ಠರೊಂದಿಗೆ ಚರ್ಚಿಸಲು ಸಾಧ್ಯವಾಗುವುದಿಲ್ಲ. ಅಮಿತ್ ಶಾ ಅವರು ಮೇ 3ರಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಅವಕಾಶ ಪಡೆದು ಸಂಪುಟ ವಿಸ್ತರಣೆ ಕುರಿತು ಸಮಾಲೋಚನೆ ಮಾಡುತ್ತೇನೆ ಎಂದು ತಿಳಿಸಿದರು.
ಕಳೆದ ಹಲವು ತಿಂಗಳುಗಳಿಂದ ಮುಖ್ಯಮಂತ್ರಿ ಬೊಮ್ಮಾಯಿ ಅವರು ದೆಹಲಿಗೆ ತೆರಳಿದಾಗಲೆಲ್ಲ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆ ಬಗ್ಗೆ ಪ್ರಸ್ತಾಪಿಸುತ್ತಲೇ ಇದ್ದಾರೆ. ಆದರೆ, ವರಿಷ್ಠರು ಮಾತ್ರ ಇದುವರೆಗೆ ಹಸಿರು ನಿಶಾನೆ ತೋರಿಲ್ಲ. ವಿಳಂಬಕ್ಕೆ ನಿರ್ದಿಷ್ಟ ಕಾರಣಗಳನ್ನೂ ನೀಡದೆ ಮುಂದೂಡುತ್ತಿರುವುದು ರಾಜ್ಯ ರಾಜಕಾರಣದಲ್ಲಿ ಸಹಜವಾಗಿಯೇ ಕುತೂಹಲ ಮೂಡಿಸಿದೆ.
"
