ಹಾಸನದ ಯುವ IPS ಅಧಿಕಾರಿ ಅಪಘಾತದಲ್ಲಿ ಸಾವು, ಡ್ಯೂಟಿ ರಿಪೋರ್ಟ್‌ಗೆ ಬಂದ ದಿನವೇ ದುರಂತ!

ಹಾಸನದ ಯುವ ಐಪಿಎಸ್ ಅಧಿಕಾರಿ ಭೀಕರ ವಾಹನ ಅಪಘಾತದಲ್ಲಿ ಮೃತಪಟ್ಟ ಘಟನೆ ನಡೆದಿದೆ.  ಪ್ರೊಬೆಷನರಿ ಐಪಿಎಸ್ ಅಧಿಕಾರಿಯಾಗಿ ಇಂದು ಡ್ಯೂಟಿ ರಿಪೋರ್ಟ್ ಮಾಡಲು ಬಂದ ಮೊದಲ ದಿನವೇ ಅಪಘಾತದಲ್ಲಿ ದುರಂತ ಅಂತ್ಯ ಕಂಡಿದ್ದಾರೆ.

Probation ips officer Harsh Bardhan dies in road accident at Hassan Karnataka ckm

ಹಾಸನ(ಡಿ.01) ಹಾಸನದ ಪ್ರೊಬೆಷನರಿ ಐಪಿಎಸ್ ಅಧಿಕಾರಿಯಾಗಿ ಡ್ಯೂಟಿಗೆ ರಿಪೋರ್ಟ್ ಮಾಡಲು ಮೈಸೂರಿನಿಂದ ಹಾಸನಕ್ಕೆ ಬರುತ್ತಿದ್ದ ವೇಳೆ ನಡೆದ ಭೀಕರ ಅಪಘಾತದಲ್ಲಿ 27 ವರ್ಷದ ಯುವ ಐಪಿಎಸ್ ಅಧಿಕಾರಿ ಹರ್ಷಬರ್ಧನ್ ದುರಂತ ಅಂತ್ಯಕಂಡ ಘಟನೆ ನಡೆದಿದೆ. ಹಾಸನನದ ಕಿತ್ತಾನೆ ಗ್ರಾಮದ ಬಳಿ ನಡೆದ ಅಪಘಾತದಲ್ಲಿ ಯುವ ಅಧಿಕಾರಿ ಹರ್ಷಬರ್ಧನ್ ಮೃತಪಟ್ಟಿದ್ದಾರೆ. ಅವಘಾತದಲ್ಲಿ ತಲೆ ತೀವ್ರವಾಗಿ ಗಾಯಗೊಂಡ ಹರ್ಷಬರ್ಧನ್‌ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.  

ಹಾಸನದ ಎಸ್‌ಪಿ ಕಚೇರಿಯಲ್ಲಿ ಅಧಿಕಾರ ಸ್ವೀಕಾರಕ್ಕೆ ಆಗಮಿಸುತ್ತಿದ್ದ ವೇಳೆ ಈ ಅಪಘಾತ ನಡೆದಿದೆ. ಮೈಸೂರಿನ ಪೊಲೀಸ್ ಅಕಾಡಮೆಯಿಂದ ಹಾಸನದ ಕಡೆ ಬರುತ್ತಿದ್ದ ವೇಳೆ ಪೊಲೀಸ್ ಜೀಪು ಅಪಘಾತಕ್ಕೀಡಾಗಿದೆ. ಐಪಿಎಸ್ ವೃತ್ತಿ ಜೀವನ ಆರಂಭಿಸಿದ ಮೊದಲ ದಿನವೇ ಹರ್ಷಬರ್ಧನ್ ದುರಂತ ಅಂತ್ಯ ಕಂಡಿದ್ದಾರೆ. ಪೊಲೀಸ್ ವಾಹನದ ಟೈಯರ್ ಸ್ಪೋಟಗೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ವಾಹನ ಅಪಘಾತವಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಮೈಸೂರಿನ ಐಜಿಪಿ ಕಚೇರಿಗೆ ತೆರಳಿ ಅಧಿಕಾರಿ ಭೇಟಿಯಾಗಿದ್ದ ಹರ್ಷಬರ್ಧನ್ ಮಹತ್ವದ ಮಾತುಕತೆ ನಡೆಸಿದ್ದರು. ಈ ವೇಳೆ ಹರ್ಷಬರ್ಧನ್‌ಗೆ ಶುಭಕೋರಿ ಕಳುಹಿಸಲಾಗಿತ್ತು. ಮಧ್ಯ ಪ್ರದೇಶ ಮೂಲದ ಹರ್ಷಬರ್ಧನ್ ಅಧಿಕಾರ ಸ್ವೀಕಾರಕ್ಕಾಗಿ ಮೈಸೂರಿನಿಂದ ಮಾರ್ಗದ ಮೂಲಕ ಹಾಸನಕ್ಕೆ ಆಗಮಿಸಿದ್ದಾರೆ. ಹರ್ಷಬರ್ಧನ್ ಸಾವಿನ ಸುದ್ದಿಯನ್ನು ಆಸ್ಪತ್ರೆ ಮುಖ್ಯಸ್ಥ ಡಾ. ಬಷೀರ್ ಸ್ಪಷ್ಟಪಡಿಸಿದ್ದಾರೆ.

ಕಿತ್ತಾನೆ ಗ್ರಾಮದ ಬಳಿಕ ಅಪಘಾತದ ಮಾಹಿತಿ ಸಿಗುತ್ತಿದ್ದಂತೆ ಹಾಸನ ಎಸ್‌ಪಿ ಮೊಹಮದ್ ಸುಜಿತಾ, ಎಎಸ್‌ಪಿಗಳಾದ ತಮ್ಮಯ್ಯ, ವೆಂಕಟೇಶ ನಾಯ್ದು ಸ್ಥಳಕ್ಕೆ ಧಾವಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಹರ್ಷಬರ್ಧನ್ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾಹಿತಿ ತಿಳಿಯುತ್ತಿದ್ದಂತೆ ಹಾಸನ ದಕ್ಷಿಣ ವಲಯ ಐಜಿಪಿ ಡಾ.ಬೋರಲಿಂಗಯ್ಯ ಭೇಟಿ ನೀಡಿದ್ದರು. ಪೊಲೀಸ್ ಅಧಿಕಾರಿಗಳ ದಂಡ ಆಸ್ಪತ್ರೆಯಲ್ಲಿ ಠಿಕಾಣಿ ಹೂಡಿತ್ತು. ವೈದ್ಯರ ತಂಡದ ಸಮಾಲೋಚನೆ ನಡೆಸಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಸ್ಥಳಾಂತರ ಕುರಿತು ಪೊಲೀಸರು ಚರ್ಚಿಸಿದ್ದರು. 

ಆದರೆ ಹರ್ಷಬರ್ಧನ್ ಆರೋಗ್ಯ ಕ್ಷಣಕ್ಷಣಕ್ಕೂ ಚಿಂತಾಜನಕ ಸ್ಥಿತಿಗೆ ತಿರುಗಿತ್ತು. ಹೀಗಾಗಿ ಸ್ಥಳಾಂತರ ಅಸಾಧ್ಯವಾಗಿತ್ತು. ಚೇತರಿಕೆ ಕಂಡ ತಕ್ಷಣವೇ ಯುವ ಅಧಿಕಾರಿಯನ್ನು ಬೆಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ಕೊಡಿಸಲು ಹಾಸನ ಪೊಲೀಸರು ವೈದ್ಯರ ಜೊತೆ ಚರ್ಚಿಸಿದ್ದರು. ಏರ್‌ಲಿಫ್ಟ್ ಮಾಡಲು ಮುಂದಾಗಿದ್ದರು ಅನ್ನೋ ಮಾಹಿತಿ ಹೊರಬಿದ್ದಿದೆ. ಆದರೆ ಹರ್ಷಬರ್ಧನ್ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಾಣಲಿಲ್ಲ. ಬದಲಾಗಿ ಕ್ಷಣಕ್ಷಣಕ್ಕೂ ಆರೋಗ್ಯ ಹದಗೆಟ್ಟಿತ್ತು   
 

Latest Videos
Follow Us:
Download App:
  • android
  • ios