ಬೆಂಗಳೂರು (ಡಿ.01):  ಮರಾಠ ಅಭಿವೃದ್ಧಿ ನಿಗಮ ಅಧಿಕೃತ ಘೋಷಣೆಯಾದ ಬೆನ್ನಲ್ಲೇ ಬರುವ ಡಿ.5ರ ಕರ್ನಾಟಕ ಬಂದ್‌ ಸಿದ್ಧತೆ ಕೂಡ ಚುರುಕುಗೊಂಡಿದೆ.

ಸುಮಾರು ಎರಡು ಸಾವಿರಕ್ಕೂ ಹೆಚ್ಚಿನ ವಿವಿಧ ಕನ್ನಡಪರ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿರುವುದಾಗಿ ಘೋಷಿಸಿವೆ. ನಾಡು-ನುಡಿಗೆ ಧಕ್ಕೆಯಾದರೆ ಎಂತಹುದೇ ಹೋರಾಟಕ್ಕೂ ಸಿದ್ಧ ಎಂಬ ಸಂದೇಶ ರವಾನಿಸಿವೆ.

ಬಂದ್‌ ಪೂರ್ವಭಾವಿಯಾಗಿ ಸೋಮವಾರ ನಗರದ ಮೌರ್ಯ ವೃತ್ತದಲ್ಲಿ ಕರ್ನಾಟಕ ಸಂಘಟನೆಗಳ ಒಕ್ಕೂಟ ದಿನವಿಡೀ ಕಪ್ಪು ಪಟ್ಟಿಧರಿಸಿ ಧರಣಿ ನಡೆಸಿತು. ಧರಣಿ ಉದ್ದೇಶಿಸಿ ಮಾತನಾಡಿದ ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌, ಕರ್ನಾಟಕ ಬಂದ್‌ಗೆ ಬೆಂಬಲ ನೀಡುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕಿದೆ ಎಂದು ಕರೆ ನೀಡಿದರು.

‘ನಿಗಮ ಸ್ಥಾಪನೆ ವಿರೋಧಿಸಿ ಡಿ.5ರಂದು ಕರೆ ನೀಡಿರುವ ಬಂದ್‌ಗೆ ರಾಜ್ಯಾದ್ಯಂತ ಸುಮಾರು ಎರಡು ಸಾವಿರ ಕನ್ನಡಪರ ಸಂಘಟನೆಗಳು ಬೆಂಬಲ ನೀಡಿವೆ. ಆಟೋ, ಲಾರಿ, ಟ್ಯಾಕ್ಸಿ ಚಾಲಕರು, ರೈತರು, ಪ್ರಗತಿಪರ ಚಿಂತಕರು, ಮಹಿಳಾ ಸಂಘಟನೆಗಳು ಸೇರಿದಂತೆ ಎಲ್ಲರೂ ಬೆಂಬಲ ನೀಡಿದ್ದಾರೆ. ಒಂದು ವೇಳೆ ಈ ಬಂದ್‌ ಯಶಸ್ವಿಯಾಗದಿದ್ದರೆ ಮುಂದಿನ ದಿನಗಳಲ್ಲಿ ಅತ್ಯಂತ ಆತಂಕದ ದಿನಗಳು ಎದುರಾಗಲಿವೆ’ ಎಂದು ಎಚ್ಚರಿಕೆ ನೀಡಿದರು.

‘ಮರಾಠ ಅಭಿವೃದ್ಧಿ ನಿಗಮ ರಚನೆಯಿಂದ ಮಹಾಜನ್‌ ವರದಿಗೆ ಅಪಾಯವಿದ್ದು, ಬೆಳಗಾವಿ ಕನ್ನಡಿಗರಿಗೆ ಆತಂಕವಿದೆ ಎಂಬುದನ್ನು ಪ್ರತಿಯೊಬ್ಬರು ತಿಳಿದು ಬಂದ್‌ಗೆ ಸಹಕಾರ ನೀಡಬೇಕು. ಕನ್ನಡ ಅಸ್ಮಿತೆಗೆ ಧಕ್ಕೆಯಾದಂತಹ ಸಂದರ್ಭದಲ್ಲಿ ಪ್ರತಿಯೊಬ್ಬರೂ ಕೈಜೋಡಿಸುವುದು ಆದ್ಯ ಕರ್ತವ್ಯವಾಗಿದೆ’ ಎಂದರು.

ಡಾ. ರಾಜಕುಮಾರ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದು ಮಾತನಾಡಿ, ‘ಮರಾಠ ಅಭಿವೃದ್ಧಿ ನಿಗಮ ರಚನೆಗೆ ಮಾಜಿ ಸಚಿವ ವಿಶ್ವನಾಥ್‌ ಹೊರತುಪಡಿಸಿ ಉಳಿದ ಯಾರೊಬ್ಬರು ವಿರೋಧ ವ್ಯಕ್ತಪಡಿಸಿಲ್ಲ. ವಿಪಕ್ಷ, ಆಡಳಿತ ಪಕ್ಷಗಳೂ ಸಹ ತಮ್ಮ ಮತ ಬ್ಯಾಂಕ್‌ಗಾಗಿ ನಾಡಿನ ಹಿತಾಸಕ್ತಿಯನ್ನು ಬಲಿಕೊಡುತ್ತಿದೆ. ನಾಡಿನಲ್ಲಿ ನೆಲೆಸಿರುವ ಮರಾಠಿಗರಿಗೆ 50 ಕೋಟಿ ಅಲ್ಲ, ಸಾವಿರ ಕೋಟಿ ರು. ಸಹಾಯ ಮಾಡಿದರೂ ನಮ್ಮ ಅಭ್ಯಂತರವಿಲ್ಲ. ಆದರೆ, ನಿಗಮ, ಪ್ರಾಧಿಕಾರ ರಚನೆ ಮಾಡಿ ಪ್ರತ್ಯೇಕಗೊಳಿಸಿ ಒಡಕು ಉಂಟು ಮಾಡುವ ಹುನ್ನಾರ ಮಾಡಬಾರದು’ ಎಂದು ಹೇಳಿದರು.

‘ಶಾಸಕಿ ಅಂಜಲಿ ನಿಂಬಾಳ್ಕರ್‌ ಅವರೇ ಮರಾಠ ಅಭಿವೃದ್ಧಿ ನಿಗಮ ಬೇಡ, ಅನುದಾನವೂ ಬೇಡ. ನಮಗೆ 2ಎ ಮೀಸಲಾತಿ ನೀಡಿ ಎಂದು ಒಂದು ವಾರದ ಗಡುವು ನೀಡಿದ್ದಾರೆ. ಇಂತಹ ಸೌಲಭ್ಯಗಳನ್ನು ಸರ್ಕಾರ ನೀಡುವುದು ಬಿಟ್ಟು ಚುನಾವಣೆಗಾಗಿ ನಿಗಮಗಳನ್ನು ಸ್ಥಾಪನೆ ಮಾಡಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಎನ್‌. ಲಿಂಗೇಗೌಡ, ನಿಗಮ ಸ್ಥಾಪಿಸುವ ಮೂಲಕ ಮರಾಠಿಗರಿಗೆ ಅಸ್ತ್ರ ನೀಡಿದಂತಾಗಿದ್ದು, ಇದರಿಂದ ಮಹಾರಾಷ್ಟ್ರ ಗಡಿಯಲ್ಲಿ ವಾಸಿಸುತ್ತಿರುವ ಕನ್ನಡಿಗರು ಮತ್ತಷ್ಟುಅಭದ್ರತೆಯಿಂದ ಜೀವನ ಮಾಡುವಂತಾಗಿದೆ. ಹೀಗಾಗಿ, ಹೋರಾಟ ಅನಿವಾರ್ಯವಾಗಿದೆ ಎಂದರು.