ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯ ಕುರಿತು ಬಿಜೆಪಿ ಟೀಕೆಗೆ ಸಚಿವ ಪ್ರಿಯಾಂಕ್ ಖರ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಮೆಟ್ರೋ, ಸಬ್ ಅರ್ಬನ್ ರೈಲು ಯೋಜನೆಗಳನ್ನು ಉಲ್ಲೇಖಿಸಿ, ಅಭಿವೃದ್ಧಿ ಜೊತೆಗೆ ಸಮಸ್ಯೆಗಳು ಸಹಜ ಎಂದ ಅವರು, ಕೇಂದ್ರದಿಂದ ಅನುದಾನ ತರುವಂತೆ ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದಾರೆ.
ಬೆಂಗಳೂರು (ಅ.11): ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಉದ್ಯೋಗ ಹುಡುಕಿಕೊಂಡು ದೇಶಾದ್ಯಂತ ಲಕ್ಷಾಂತರ ಜನ ಬರುತ್ತಿದ್ದಾರೆ. ಇದರಿಂದಾಗಿ ನಗರದ ಸಾರಿಗೆ, ಟ್ರಾಫಿಕ್ ಜಾಮ್ ಮತ್ತು ಜನದಟ್ಟಣೆ ಸಮಸ್ಯೆಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿ ನಾಯಕರ ವಿರುದ್ಧ ತೀವ್ರವಾಗಿ ಟೀಕಿಸಿದ್ದಾರೆ.
ಬಿಜೆಪಿಯವರಿಗೆ ಕಾಮನ್‌ಸೆನ್ಸ್ ಇದೆಯಾ?
ಬಿಜೆಪಿಯವರಿಗೆ ಕಾಮನ್ ಸೆನ್ಸ್ ಇದ್ದರೆ, ಸಮಸ್ಯೆಗಳನ್ನು ಗುರುತಿಸಿ ಪರಿಹಾರ ಕೊಡಬೇಕು. ಆದರೆ, ಅವರಿಗೆ ಸಾಮಾನ್ಯ ಪ್ರಜ್ಞೆ ಇಲ್ಲದಿದ್ದರೆ ನಾನೇನು ಮಾಡಲಿ? ನಾವು 86 ಕಿ.ಮೀ ಮೆಟ್ರೋ ವಿಸ್ತರಣೆ ಮಾಡಿದ್ದೇವೆ, 136 ಕಿ.ಮೀ ಸಬ್ ಅರ್ಬನ್ ರೈಲು, 32 ಕಿ.ಮೀ ಡಬಲ್ ಡೆಕ್ಕರ್ ಮಾರ್ಗ ಮತ್ತು 40 ಕಿ.ಮೀ ಟನಲ್ ನಿರ್ಮಾಣ ಮಾಡುತ್ತಿದ್ದೇವೆ. ಇವೆಲ್ಲವೂ ಪ್ರಗತಿಯ ಸಂಕೇತಗಳಲ್ಲವೇ? ಆದರೆ, ಪ್ರಗತಿಯ ಜೊತೆಗೆ ಕೆಲವು ಸಮಸ್ಯೆಗಳು ಬರುವುದು ಸಹಜ. ಪುಣೆ, ಮುಂಬೈನಂತಹ ನಗರಗಳಲ್ಲೂ ಇಂತಹ ಸಮಸ್ಯೆಗಳಿಲ್ಲವೇ? ಎಂದು ಪ್ರಶ್ನಿಸಿದರು.
ರಾಜೀವ್ ಚಂದ್ರಶೇಖರ್ ವಿರುದ್ಧ ಟೀಕೆ:
ಬಿಜೆಪಿಯ ಮಾಜಿ ಸಂಸದ ರಾಜೀವ್ ಚಂದ್ರಶೇಖರ್ ಅವರನ್ನು ಟೀಕಿಸಿದ ಖರ್ಗೆ, ಸ್ಟೀಲ್ ಫ್ಲೈಓವರ್ ಬೇಡ ಎಂದು ಅಭಿಯಾನ ಮಾಡಿದವರು ಈಗ ಕರ್ನಾಟಕದಿಂದ ಓಡಿಹೋಗಿದ್ದಾರೆ. ಕೇಂದ್ರ ಸರ್ಕಾರದಿಂದ ಒಂದು ರೂಪಾಯಿ ತರುವ ಯೋಗ್ಯತೆಯೂ ಇಲ್ಲ. ಲೇವಡಿ ಮಾಡುವ ಬದಲು, ಕೇಂದ್ರದಿಂದ ಕನಿಷ್ಠ ಹತ್ತು ರೂಪಾಯಿಯಾದರೂ ತನ್ನಿ! ಎಂದು ವ್ಯಂಗ್ಯವಾಡಿದರು.
ರಾಜ್ಯ ಸರ್ಕಾರವು ವಾಹನ ದಟ್ಟಣೆ ಕಡಿಮೆ ಮಾಡಲು ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದ ಖರ್ಗೆ, ಬಿಜೆಪಿಯವರು ಸಾಮಾನ್ಯ ಪ್ರಜ್ಞೆಯನ್ನೇ ಕಳೆದುಕೊಂಡಿದ್ದಾರೆ. ಸಮಸ್ಯೆಗಳನ್ನು ಗುರುತಿಸಿ, ಪರಿಹಾರ ಕೊಡುವ ಬದಲು ಟೀಕೆ ಮಾಡುವುದು ತಪ್ಪು ಎಂದು ಕಿಡಿಕಾರಿದರು.ಸಚಿವ ಪ್ರಿಯಾಂಕ್ ಅವರ ಈ ಹೇಳಿಕೆಯಿಂದ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಬಿಜೆಪಿಯಿಂದ ಯಾವ ರೀತಿಯ ಪ್ರತಿಕ್ರಿಯೆ ಬರುತ್ತದೆ ಎಂಬುದು ಕುತೂಹಲ ಕೆರಳಿಸಿದೆ.
