ಬೆಂಗಳೂರು(ಜು.16): ಕೋವಿಡ್‌ ಚಿಕಿತ್ಸೆ ವಿಚಾರವಾಗಿ ಸರ್ಕಾರದೊಂದಿಗೆ ಇದ್ದ ಎಲ್ಲ ಗೊಂದಲಗಳೆಲ್ಲವೂ ಬಗೆಹರಿದಿವೆ. ಬೆಂಗಳೂರಿನ ಎಲ್ಲಾ ಖಾಸಗಿ ಆಸ್ಪತ್ರೆಗಳು ಸೋಂಕಿತರಿಗೆ ಚಿಕಿತ್ಸೆ ಒದಗಿಸಲು ಸಂಪೂರ್ಣ ಸಜ್ಜಾಗಿದ್ದು ಇನ್ಮುಂದೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಖಾಸಗಿ ಆಸ್ಪತ್ರೆ ಹಾಗೂ ನರ್ಸಿಂಗ್‌ ಹೋಂಗಳ ಅಸೋಸಿಯೇಷನ್‌ (ಫಾನಾ) ಅಧ್ಯಕ್ಷ ಡಾ ಆರ್‌.ರವೀಂದ್ರ ತಿಳಿಸಿದ್ದಾರೆ.

ಅಲ್ಲದೆ, ಕೋವಿಡ್‌ ಬಂದ ಬಳಿಕ ಖಾಸಗಿ ಆಸ್ಪತ್ರೆಗಳು ಶೇ.30ರಷ್ಟುವೈದ್ಯರು ಹಾಗೂ ಸಿಬ್ಬಂದಿ ಕೊರತೆ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿವೆ. ಹಾಗಾಗಿ ಸರ್ಕಾರ ಕಠಿಣ ಕಾನೂನು ಕ್ರಮಕ್ಕೆ ಮುಂದಾಗದೆ ಸಹಕರಿಸಬೇಕು. ಖಾಸಗಿ ಆಸ್ಪತ್ರೆಗಳ ಎಲ್ಲ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗೂ ಕೋವಿಡ್‌ ವಿಮಾ ಸೌಲಭ್ಯ ಒದಗಿಸಬೇಕು ಎಂದು ಅವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಲಾಕ್‌ಡೌನ್‌ ವೇಳೆ ಸೇವೆ ಸಲ್ಲಿಸುವ ಬಿಎಂಟಿಸಿ ಸಿಬ್ಬಂದಿಗೆ ವಿಶೇಷ ಭತ್ಯೆ

ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಡ್‌ ಚಿಕಿತ್ಸೆ ಆರಂಭಿಸಲು ಸರ್ಕಾರ ಜೂ.23ರಂದು ಸೂಚಿಸಿತ್ತು. ಆದರೆ, ಮೂಲಸೌಕರ್ಯಗಳ ಕೊರತೆ, ಸಿಬ್ಬಂದಿ ಸಮಸ್ಯೆ ಮತ್ತಿತರ ಕಾರಣಗಳಿಂದ ಪೂರ್ಣ ಪ್ರಮಾಣದಲ್ಲಿ ಸಜ್ಜಾಗಿರಲಿಲ್ಲ. ಜೊತೆಗೆ ಕೋವಿಡ್‌ ವರದಿ ಇರುವ ರೋಗಿಗಳನ್ನು ಮಾತ್ರ ದಾಖಲಿಸಿಕೊಳ್ಳಬೇಕಾ, ಶಂಕಿತರನ್ನೂ ದಾಖಲಿಸಿಕೊಂಡು ಚಿಕಿತ್ಸೆ ನೀಡಬೇಕಾ ಎಂಬ ಗೊಂದಲ ಇತ್ತು. ಈಗ ಸರ್ಕಾರ ಈ ಬಗ್ಗೆ ಗೊಂದಲ ಬಗೆಹರಿಸಿದೆ. ಜೊತೆಗೆ ಆಸ್ಪತ್ರೆಗಳೂ ಸಜ್ಜಾಗಿವೆ. ಇನ್ನುಮುಂದೆ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ಚಿಕಿತ್ಸೆಗೆ ಯಾವುದೇ ತೊಂದರೆ ಆಗುವುದಿಲ್ಲ. ಸರ್ಕಾರಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು’ ಎಂದರು.

4500 ಹಾಸಿಗೆ ಮೀಸಲು:

ಖಾಸಗಿ ಆಸ್ಪತ್ರೆ ಹಾಗೂ ನರ್ಸಿಂಗ್‌ ಹೋಂಗಳ ಅಸೋಸಿಯೇಷನ್‌ (ಫಾನಾ) ಅಡಿಯಲ್ಲಿ 384 ಆಸ್ಪತ್ರೆಗಳಿದ್ದು, ಅವುಗಳಿಂದ ಒಟ್ಟು 10,500 ಹಾಸಿಗೆಗಳು ಲಭ್ಯವಿದೆ. ಇದರಲ್ಲಿ ಕೋವಿಡ್‌ ರೋಗಿಗಳಿಗೆ 4,500 ಹಾಸಿಗೆಗಳನ್ನು ಮೀಸಲಿಡಲಾಗಿದೆ. ಇನ್ನು 50ಕ್ಕೂ ಕಡಿಮೆ ಹಾಸಿಗೆಗಳನ್ನು ಹೊಂದಿರುವ ಆಸ್ಪತ್ರೆಗಳನ್ನು ಪೂರ್ಣ ಪ್ರಮಾಣವಾಗಿ ಕೋವಿಡ್‌ ಆಸ್ಪತ್ರೆಯನ್ನಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ ಎಂದು ಡಾ.ರವೀಂದ್ರ ತಿಳಿಸಿದರು.

ಕೊರೋನಾ ರಣಕೇಕೆ: ಬೆಂಗಳೂರು ಜನರೇ ಬಸ್‌ ಹತ್ತುವ ಮುನ್ನ ಹುಷಾರ್‌..!

ಪ್ರಸ್ತುತ ಖಾಸಗಿ ಆಸ್ಪತ್ರೆಗಳಲ್ಲಿ 2 ಸಾವಿರಕ್ಕೂ ಹೆಚ್ಚು ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಇದರಲ್ಲಿ ಸರ್ಕಾರ ಶಿಫಾರಸು ಮಾಡಿರುವ ಸುಮಾರು 500 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಸರ್ಕಾರದ ಆದೇಶದ ಮೇರೆಗೆ ಖಾಸಗಿಯಲ್ಲಿ ಶೇ.50 ಹಾಸಿಗೆಗಳನ್ನು ಮೀಸಲಿಡಲಾಗಿದ್ದು, ಶಿಫಾರಸ್ಸಿನ ಮೇಲೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು.

ಆ್ಯಂಟಿಜೆನ್‌ ಕಿಟ್‌ಗೆ ಮನವಿ

ಖಾಸಗಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ಗಳ ಕೊರತೆ ಕೂಡ ಇದ್ದು, ಅದನ್ನು ಸರ್ಕಾರವೇ ಪೂರೈಸಲು ಒಪ್ಪಿದೆ. ಇದರ ಜತೆಗೆ ಕೋವಿಡ್‌ ಪರೀಕ್ಷೆಗಾಗಿ ಆ್ಯಂಟಿಜೆನ್‌ ಕಿಟ್‌ ಗಳನ್ನು ಒದಗಿಸಲು ಮನವಿ ಮಾಡಲಾಗಿದೆ. ಈಗಾಗಲೇ ಖಾಸಗಿ ಆಸ್ಪತ್ರೆಗಳಲ್ಲಿ 60 ಫಿವರ್‌ ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತಿದ್ದು, ನಿತ್ಯ 200 ಮಂದಿ ಚಿಕಿತ್ಸೆಗೆ ಬರುತ್ತಿದ್ದಾರೆ. ಸರ್ಕಾರದ ಆದೇಶ ಪಾಲನೆಯ ಜತೆಗೆ ಕೋವಿಡ್‌ ಪರಿಸ್ಥಿತಿ ನಿರ್ವಹಣೆಗೆ ಸರ್ಕಾರಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಹೇಳಿದರು.