ಬೆಂಗಳೂರು(ಜು.16): ಕೊರೋನಾ ಸೋಂಕು ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರ ಕಳೆದ ಮಾರ್ಚ್‌ 24ರಿಂದ ಜಾರಿ ಮಾಡಿದ್ದ ಲಾಕ್‌ಡೌನ್‌ ಸಂದರ್ಭದಲ್ಲಿ ಕೆಲಸ ಮಾಡಿದ ಬಿಎಂಟಿಸಿಯ 3,397 ಸಿಬ್ಬಂದಿಗಳಿಗೆ ವಿಶೇಷ ಭತ್ಯೆ ನೀಡಲು ನಿಗಮ ಮುಂದಾಗಿದೆ.

ಲಾಕ್‌ಡೌನ್‌ ಅವಧಿಯಲ್ಲಿ ಬಿಎಂಟಿಸಿ ಬಸ್‌ ಸಂಚಾರ ಸ್ಥಗಿತಗೊಳಿಸಲಾಗಿತ್ತಾದರೂ ಅಗತ್ಯ ಸೇವೆಗಳಲ್ಲಿ ಕೆಲಸ ಮಾಡುವವರು, ಆಸ್ಪತ್ರೆಗೆ ತೆರಳುವವರಿಗಾಗಿ ಬಿಎಂಟಿಸಿ ನಿತ್ಯ 150ಕ್ಕೂ ಹೆಚ್ಚಿನ ಬಸ್‌ಗಳ ಸೇವೆ ನೀಡಿತ್ತು. ಆ ಸೇವೆಗಾಗಿ ಚಾಲಕ, ನಿರ್ವಾಹಕರು, ಅದರ ಜೊತೆಗೆ ಬಸ್‌ ಕಾರ್ಯಾಚರಣೆಗೆ ಕಳುಹಿಸುವುದು ಸೇರಿ ಇನ್ನಿತರ ಕೆಲಸಕ್ಕಾಗಿ ಕೇಂದ್ರ ಕಚೇರಿ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಿದ್ದರು. ಅದರಂತೆ ಮಾ.26ರಿಂದ ಏ.24ರವರೆಗೆ ಕಾರ್ಯನಿರ್ವಹಿಸಿದ ಸಿಬ್ಬಂದಿಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಪ್ರತಿದಿನ 250 ಗಳನ್ನು ವಿಶೇಷ ಭತ್ಯೆ ನೀಡಲು ನಿರ್ಧರಿಸಲಾಗಿದೆ.

ಕೊರೋನಾ ರಣಕೇಕೆ: ಬೆಂಗಳೂರು ಜನರೇ ಬಸ್‌ ಹತ್ತುವ ಮುನ್ನ ಹುಷಾರ್‌..!

95.92 ಲಕ್ಷ: 

ಬಿಎಂಟಿಸಿ ಲೆಕ್ಕ ಹಾಕಿರುವಂತೆ ಕರೊನಾ ಭೀತಿ ನಡುವೆಯೂ ಲಾಕ್‌ಡೌನ್‌ ಅವಧಿಯಲ್ಲಿ 3,397 ಸಿಬ್ಬಂದಿ ಕೆಲಸ ಮಾಡಿದ್ದಾರೆ. ಅವರೆಲ್ಲರೂ ಸೇರಿ ಒಟ್ಟು 38,370 ಮಾನವ ದಿನಗಳು ಕೆಲಸ ಮಾಡಿದ್ದಾರೆ. ಪ್ರತಿ ದಿನಕ್ಕೆ 250 ನಂತೆ ಒಟ್ಟಾರೆ 95,92,500 ಗಳಾಗಲಿದ್ದು, ಅಷ್ಟು ಮೊತ್ತವನ್ನು ಅರ್ಹ ಸಿಬ್ಬಂದಿಗೆ ಪಾವತಿಸುವಂತೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ಸಂಬಂಧಪಟ್ಟ ಅಧಿಕಾರಿಗೆ ಸೂಚಿಸಿದ್ದಾರೆ.