ಆನೇಕಲ್‌(ಜು.26): ತಾಲೂಕಿನಾದ್ಯಂತ 32 ಖಾಸಗಿ ನರ್ಸಿಂಗ್‌ ಹೋಂಗಳಿದ್ದು, ಕೊರೋನಾ ಸೋಂಕಿತರಿಗಾಗಿ ಅರ್ಧದಷ್ಟು ಹಾಸಿಗೆಗಳನ್ನು ಮೀಸಲಿಡಲು ಸಮ್ಮತಿ ಸೂಚಿಸಿವೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್‌ ತಿಳಿಸಿದ್ದಾರೆ.

ಚಂದಾಪುರದಲ್ಲಿ ಖಾಸಗಿ ಆಸ್ಪತ್ರೆಗಳ ಮಾಲೀಕರ ಜತೆ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ನಮ್ಮ ಸ್ಪಂದನೆಗೆ ಆಸ್ಪತ್ರೆಗಳು ಸ್ಪಂದಿಸಿವೆ. ಈ ನಿಟ್ಟಿನಲ್ಲಿ ನಮಗೆ ಮೊದಲನೇ ಹಂತದಲ್ಲೇ 361 ಹಾಸಿಗೆಗಳು ಲಭಿಸಲಿವೆ. ಶೀಘ್ರದಲ್ಲೇ ಕೋವಿಡ್‌ ಆರೈಕೆ ಕೇಂದ್ರಗಳು ಆರಂಭವಾಗಲಿದ್ದು, ಇನ್ನೂ 400 ಹಾಸಿಗೆಗಳು ಲಭ್ಯವಾಗಲಿವೆ ಎಂದರು.

ಜಿಲ್ಲಾ ಜೆಡಿಎಸ್‌ ಮುಖಂಡ ಶ್ರೀನಾಥರೆಡ್ಡಿ ಸೋಂಕಿಗೆ ಬಲಿ

ಇದರಿಂದಾಗಿ ಈ ಭಾಗದ ಜನರಲ್ಲಿ ಧೈರ್ಯ ಮೂಡಿದೆ. ಸಕಾಲದಲ್ಲಿ ಚಿಕಿತ್ಸೆ ದೊರೆಯುವಂತೆ ಮಾಡಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಒಂದೊಮ್ಮೆ ಯಾವುದೇ ಆಸ್ಪತ್ರೆಗಳು ಚಿಕಿತ್ಸೆ ನೀಡಲು ನಿರಾಕರಿಸಿದರೆ ಕಾನೂನು ಕ್ರಮಕೈಗೊಳ್ಳಲಾಗುವುದು. ಚಿಕಿತ್ಸೆಗೆ ನಿಗದಿಗಿಂತ ಅಧಿಕ ಹಣ ವಸೂಲಿ ಮಾಡಿದರೆ ಕೇಸ್‌ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಕೊರೋನಾ ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಲಾ 2 ಆ್ಯಂಬುಲೆನ್ಸ್‌, ಟಿಟಿಗಳನ್ನು ನೀಡಲಾಗಿದೆ. ಅಗತ್ಯ ಬಿದ್ದರೆ ಹೆಚ್ಚಿನ ವಾಹನಗಳ ವ್ಯವಸ್ಥೆ ಮಾಡಲಾಗುವುದು ಎಂದರು.

ವಿದ್ಯುತ್‌ ಚಿತಾಗಾರಕ್ಕೆ ಸ್ಥಳ ನೀಡಿ:

ವಿಶೇಷ ಜಿಲ್ಲಾಧಿಕಾರಿ ಹಾಗೂ ಆನೇಕಲ್‌ ತಾಲೂಕು ಕೋವಿಡ್‌ ನೊಡಲ್‌ ಅಧಿಕಾರಿ ಬಸವರಾಜು ಮಾತನಾಡಿ, ಆನೇಕಲ್‌ ತಾಲೂಕು ಕೇಂದ್ರದಲ್ಲಿ ವಿದ್ಯುತ್‌ ಚಿತಾಗಾರ ನಿರ್ಮಿಸಲು ಅಗತ್ಯವಿರುವ ಅನುದಾನ ಬಿಡುಗಡೆ ಮಾಡುತ್ತೇನೆ. ಇದಕ್ಕಾಗಿ ಸೂಕ್ತ ಸ್ಥಳ ಗೊತ್ತು ಮಾಡಿ ಎಂದು ತಹಸೀಲ್ದಾರ್‌ಗೆ ಸೂಚಿಸಿದರು.

ತಾಲೂಕಿನ ಪ್ರಸಿದ್ಧ ಆಸ್ಪತ್ರೆಗಳಾದ ನಾರಾಯಣ ಹೃದಯಾಲಯ, ಸ್ಪರ್ಶ, ನೇತ್ರಾಲಯ ಹಾಗೂ ಕಿರಣ್‌ ಮಜೂಂದಾರ್‌ ಸೆಂಟರ್‌ನ ಪ್ರತಿನಿಧಿಗಳು ಗೈರಾಗಿದ್ದರು. ಇದನ್ನು ಗಮನಿಸಿದ ಡಿಎಚ್‌ಒ ಅವರಿಗೆ ನೋಟಿಸ್‌ ನೀಡಲಾಗುವುದು ಎಂದು ಇದೇ ವೇಳೆ ತಿಳಿಸಿದರು. ಸಭೆಯಲ್ಲಿ ವಿಶೇಷ ಜಿಲ್ಲಾಧಿಕಾರಿ ಬಸವರಾಜು, ತಾಲೂಕು ವೈದ್ಯಾಧಿಕಾರಿ ಜ್ಞಾನಪ್ರಕಾಶ್‌ ಇತರೆ ಅಧಿಕಾರಿಗಳಿದ್ದರು.