ಬೆಂಗಳೂರು(ಸೆ.26):ನಗರದ ಮಲ್ಲೇಶ್ವರದ ‘ದಿ ಮೈಸೂರು ಲ್ಯಾಂಫ್ಸ್‌ ವರ್ಕ್ಸ್‌ ಲಿಮಿಟೆಡ್‌’ ಕಾರ್ಖಾನೆ ಹಾಗೂ ಈ ಕಾರ್ಖಾನೆಗೆ ಸೇರಿದ ಸ್ವತ್ತುಗಳನ್ನು ಖಾಸಗಿ ಸಂಸ್ಥೆ ಅಥವಾ ವ್ಯಕ್ತಿಗಳಿಗೆ ಪರಭಾರೆ ಮಾಡದೆ ಸರ್ಕಾರವೇ ಉಳಿಸಿಕೊಂಡು ಸಾರ್ವಜನಿಕ ಉದ್ದೇಶಗಳಿಗೆ ಬಳಸಬೇಕೆಂದು ವಿರೋಧ ಪಕ್ಷದ ಸದಸ್ಯರು ವಿಧಾನ ಪರಿಷತ್‌ನಲ್ಲಿ ಖಾಸಗಿ ನಿರ್ಣಯ ಮಂಡಿಸಿದರು.

ಕಾಂಗ್ರೆಸ್‌ನ ಸದಸ್ಯ ಬಿ.ಕೆ.ಹರಿಪ್ರಸಾದ್‌ ಅವರು ಸದನದಲ್ಲಿ ಈ ವಿಚಾರ ಪ್ರಸ್ತಾಪಿಸಿ, ಮೈಸೂರು ಮಹಾರಾಜರು ಹಾಗೂ ಸರ್‌.ಎಂ.ವಿಶ್ವೇಶ್ವರಯ್ಯನವರು 1934ರಲ್ಲಿ ಸುಮಾರು 24 ಎಕರೆ ಪ್ರದೇಶದಲ್ಲಿ ಈ ಕಾರ್ಖಾನೆಯನ್ನು ಸ್ಥಾಪಿಸಿದ್ದರು. ಕಳೆದ ಹಲವು ವರ್ಷಗಳಿಂದ ಈ ಕಾರ್ಖಾನೆ ಹಾಗೂ ಅದರ ಸ್ವತ್ತುಗಳನ್ನು ಖಾಸಗಿಯವರಿಗೆ ವಹಿಸುವ ಪ್ರಯತ್ನಗಳು ನಡೆಯುತ್ತಿವೆ. ಯಾವುದೇ ಕಾರಣಕ್ಕೂ ಇದನ್ನು ಖಾಸಗಿಯವರಿಗೆ ವಹಿಸಬಾರದು. ಸರ್ಕಾರವೇ ನೇರವಾಗಿ ಸ್ವಾಧೀನಕ್ಕೆ ಪಡೆದು ಈ ಜಾಗದಲ್ಲಿ ಆಸ್ಪತ್ರೆ, ಮಕ್ಕಳ ಪಾರ್ಕ್, ಉದ್ಯಾನ ಸೇರಿದಂತೆ ಸಾರ್ವಜನಿಕ ಉದ್ದೇಶಗಳಿಗೆ ಬಳಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಕೊರೋನಾ ಸಂಕಷ್ಟ: 4008 ಕೋಟಿ ಪೂರಕ ಅಂದಾಜಿಗೆ ಒಪ್ಪಿಗೆ

ಸರ್ಕಾರಕ್ಕೆ ಕಮಾಂಡ್‌ ಮಾಡಬೇಡಿ:

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಜೆ.ಸಿ.ಮಾಧುಸ್ವಾಮಿ ಅವರು, ಈ ಕಾರ್ಖಾನೆ ಸಂಬಂಧ ಈಗಾಗಲೇ ಮುಖ್ಯಮಂತ್ರಿಗಳು ಮಾತನಾಡಿದ್ದು, ಅನ್ಯರಿಗೆ ಪರಭಾರೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಹೀಗಿದ್ದರೂ ಖಾಸಗಿ ನಿರ್ಣಯ ಮಂಡಿಸಿ, ಸರ್ಕಾರಕ್ಕೆ ಕಮಾಂಡ್‌ ಮಾಡುವುದು ಸರಿಯಲ್ಲ ಎಂದರು.

ಬಳಿಕ ಮಾತನಾಡಿ ಬಿ.ಕೆ.ಹರಿಪ್ರಸಾದ್‌ ಅವರು, ಈ ಹಿಂದೆ ಸರ್ಕಾರದ ಅಧೀನದಲ್ಲೇ ಇದ್ದ ಎಚ್‌ಎಂಟಿ, ಎನ್‌ಜಿಎಫ್‌, ಅಶೋಕ ಹೋಟೆಲ್‌ ಸೇರಿದಂತೆ ಹಲವು ಸ್ವತ್ತುಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲಾಗಿದೆ. ಮಲ್ಲೇಶ್ವರ ಭಾಗದಲ್ಲಿ ಹಸಿರು ಪರಿಸರ ಕಡಿಮೆಯಿದೆ. ಈ ಕಾರ್ಖಾನೆಯ ಜಾಗವನ್ನೂ ಖಾಸಗಿಯವರಿಗೆ ವಹಿಸಿದರೆ ಆ ಭಾಗದಲ್ಲಿ ಹಸಿರು ಪರಿಸರವೇ ಇಲ್ಲದಂತಾಗುತ್ತದೆ. ಹೀಗಾಗಿ ಸರ್ಕಾರವೇ ಸದರಿ ಜಾಗ ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು. ಪ್ರತಿಕ್ರಿಯಿಸಿದ ಮಾಧುಸ್ವಾಮಿ ಮತ್ತೊಮ್ಮೆ ಈ ಕಾರ್ಖಾನೆ ವಿಚಾರವನ್ನು ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ಸರ್ಕಾರದ ಬಳಿಯೇ ಈ ಜಾಗವನ್ನು ಉಳಿಸಿಕೊಳ್ಳಲು ಪ್ರಯತ್ನಿಸಲಿದ್ದೇವೆ ಎಂದು ಚರ್ಚೆಗೆ ಅಂತ್ಯ ಹಾಡಿದರು.