ಮುಡಾ ಉರುಳು ಸಿದ್ದರಾಮಯ್ಯ ಪುತ್ರ ಯತೀಂದ್ರಗೂ ಸುತ್ತಿಕೊಳ್ಳುವ ಸಾಧ್ಯತೆ!
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾರ್ವತಿ ಹೆಸರು ಉಲ್ಲೇಖ ಇದೆ. ಆದರೆ, ಯತೀಂದ್ರ ಸಿದ್ದರಾಮಯ್ಯ ಹೆಸರು ಉಲ್ಲೇಖ ಇಲ್ಲ. ಮುಡಾ ನಿವೇಶನ ಹಂಚಿಕೆಯಲ್ಲಿ ಯತೀಂದ್ರ ಅವರು ಸಹ ಪ್ರಭಾವ ಬೀರಿದ್ದರು. ಹೀಗಾಗಿ ಪ್ರಕರಣದಲ್ಲಿ ಅವರ ಹೆಸರು ಸೇರಿಸಬೇಕು ಎಂದು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗುವುದು ಎಂದು ತಿಳಿಸಿದ ವಕೀಲ ಪ್ರದೀಪ್ ಕುಮಾರ್
ಬೆಂಗಳೂರು(ಅ.01): ರಾಜ್ಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಮುಡಾ (ಮೈಸೂರು ಅಭಿವೃದ್ಧಿ ಪ್ರಾಧಿಕಾರ) ಸೈಟ್ ಹಂಚಿಕೆ ಹಗರಣದ ಉರುಳು ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರಿಗೂ ಸುತ್ತಿಕೊಳ್ಳುವ ಸಾಧ್ಯತೆ ಇದ್ದು, ಪ್ರಕರಣದಲ್ಲಿ ಅವರ ಹೆಸರು ಹೆಸರಿಸಬೇಕು ಎಂದು ಕೋರಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮೊರೆ ಹೋಗಲು ಸಿದ್ಧತೆ ನಡೆದಿದೆ. ವಕೀಲ ಪ್ರದೀಪ್ ಕುಮಾರ್ ಮಂಗಳವಾರ ಈ ಸಂಬಂಧ ಜನಪ್ರತಿನಿಧಿ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾರ್ವತಿ ಹೆಸರು ಉಲ್ಲೇಖ ಇದೆ. ಆದರೆ, ಯತೀಂದ್ರ ಸಿದ್ದರಾಮಯ್ಯ ಹೆಸರು ಉಲ್ಲೇಖ ಇಲ್ಲ. ಮುಡಾ ನಿವೇಶನ ಹಂಚಿಕೆಯಲ್ಲಿ ಯತೀಂದ್ರ ಅವರು ಸಹ ಪ್ರಭಾವ ಬೀರಿದ್ದರು. ಹೀಗಾಗಿ ಪ್ರಕರಣದಲ್ಲಿ ಅವರ ಹೆಸರು ಸೇರಿಸಬೇಕು ಎಂದು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗುವುದು ಎಂದು ವಕೀಲ ಪ್ರದೀಪ್ ಕುಮಾರ್ ತಿಳಿಸಿದ್ದಾರೆ.
ಮುಡಾ ಕೇಸ್: ಸಿಎಂ ಸಿದ್ದರಾಮಯ್ಯಗೆ ಲೋಕಾ ನೋಟಿಸ್ ಸಂಭವ
ಯತೀಂದ್ರ ಸಿದ್ದರಾಮಯ್ಯ ಶಾಸಕರಾಗಿದ್ದ ವೇಳೆ ಮುಡಾ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದರು. ಮುಡಾದಿಂದ ಕಾನೂನು ಬಾಹಿರವಾಗಿ 14 ನಿವೇಶನಗಳನ್ನು ಪಡೆದುಕೊಂಡಿರುವುದರಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರ ಪಾತ್ರವು ಇದೆ. ಈ ಹಿನ್ನೆಲೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ವಿರುದ್ಧವೂ ತನಿಖೆ ನಡೆಸುವ ಅಗತ್ಯ ಇದೆ. ಅವರ ವಿರುದ್ಧ ತನಿಖೆ ನಡೆಸಲು ಪ್ರಕರಣ ದಾಖಲಿಸುವ ಅಗತ್ಯ ಇರುವ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.
ಮುಡಾ ನಿವೇಶನ ಹಂಚಿಕೆ ವಿಚಾರದಲ್ಲಿ ಭಾರೀ ಅಕ್ರಮ ನಡೆದಿದೆ. 50:50 ಅನುಪಾತದಡಿ ಸರಿಯಾಗಿ ಹಂಚಿಕೆ ಮಾಡದೆ ಬೇಕಾಬಿಟ್ಟಿ ಹಂಚಿಕೆ ಮಾಡಲಾಗಿದ್ದು, ಕೋಟ್ಯಂತರ ರು.ನಷ್ಟು ಭಾರೀ ಅಕ್ರಮ ನಡೆದಿದೆ. ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ಮೈಸೂರಿನ ಕೆಸರೆ ಗ್ರಾಮದಲ್ಲಿ 3 ಎಕರೆ ಜಮೀನು ಹೊಂದಿದ್ದರು. ಈ ಭೂಮಿಯನ್ನು ಮುಡಾ ಅಭಿವೃದ್ದಿಗಾಗಿ ಸ್ವಾಧೀನಪಡಿಸಿಕೊಂಡಿದ್ದು, ಪರಿಹಾರದ ನಿವೇಶನಗಳನ್ನು ಮಂಜೂರು ಮಾಡಲಾಗಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ಆರಂಭಗೊಂಡಿದೆ.
ಯತೀಂದ್ರ ಪಾತ್ರ
• ಮುಡಾ ಕೇಸ್‌ನಲ್ಲಿ ಸಿದ್ದರಾಮಯ್ಯ, ಪತ್ನಿ ಪಾರ್ವತಿ ಹೆಸರು ಮಾತ್ರ ಇದೆ
• ನಿವೇಶನ ಹಂಚಿಕೆಯಲ್ಲಿ ಯತೀಂದ್ರ ಕೂಡ ಪ್ರಭಾವ ಬೀರಿರುವ ಆರೋಪ
• ಹೀಗಾಗಿ ಪ್ರಕರಣದಲ್ಲಿ ಅವರ ಹೆಸರೂ ಸೇರಿಸ ಬೇಕೆಂದು ಮನವಿ ಸಾಧ್ಯತೆ
• ಯತೀಂದ್ರ ಶಾಸಕರಾಗಿದ್ದ ವೇಳೆ ಮುಡಾ ಮೇಲೆ ಒತ್ತಡ ಹೇರಿದ್ದ ಆರೋಪ
# 14 ಸೈಟ್ ಪಡೆಯುವಲ್ಲಿ ಯತೀಂದ್ರ ಪಾತ್ರವೂ ಇರುವ ಸಾಧ್ಯತೆ: ವಕೀಲ