ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ಶನಿವಾರ ಕೋವಿಡ್-19 ಪರೀಕ್ಷೆಗೆ ಒಳಪಟ್ಟಿದ್ದ ಸಚಿವಪರೀಕ್ಷೆಯ ವರದಿಯಲ್ಲಿ ಕೋವಿಡ್-19 ಪಾಸಿಟಿವ್ ಸಾಬೀತು
ಬೆಂಗಳೂರು (ಜ.1): ಕರ್ನಾಟಕ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮತ್ತು ಸಕಾಲ ಸಚಿವ ಬಿಸಿ ನಾಗೇಶ್ (Primary and Secondary Education Minister BC Nagesh) ಕೋವಿಡ್-19 ಪಾಸಿಟಿವ್ ಆಗಿರುವುದನ್ನು ಖಚಿತಪಡಿಸಿದ್ದಾರೆ. ತಮ್ಮ ಟ್ವಿಟರ್ (Twitter )ಖಾತೆಯಲ್ಲಿ ಈ ಕುರಿತಾಗಿ ಟ್ವೀಟ್ ಮಾಡುವ ಮೂಲಕ ಸಚಿವರು ಈ ವಿಚಾರ ತಿಳಿಸಿದ್ದು, ತಮ್ಮ ಸಂಪರ್ಕಕ್ಕೆ ಬಂದ ವ್ಯಕ್ತಿಗಳೆಲ್ಲರೂ ಕೋವಿಡ್-19 (Covid 19 )ಪರೀಕ್ಷೆಗೆ ಒಳಗಾಗುವಂತೆ ಹೇಳಿದ್ದಾರೆ. ಕೆಲ ವಾರಗಳ ಹಿಂದೆ ಮಾತನಾಡಿದ್ದ ಬಿಸಿ ನಾಗೇಶ್, ರಾಜ್ಯದಲ್ಲಿ ಕೋವಿಡ್-19 ಸೋಂಕು ನಿಯಂತ್ರಣದಲ್ಲಿರುವ ಕಾರಣ ಯಾವುದೇ ಕಾರಣಕ್ಕೂ ಶಾಲೆಗಳನ್ನು ಬಂದ್ ಮಾಡುವುದಿಲ್ಲ ಎಂದು ಹೇಳಿದ್ದರು. ಇದರ ಬೆನ್ನಲ್ಲಿಯೇ ಸಚಿವರಿಗೆ ಕೋವಿಡ್-19 ಪಾಸಿಟಿವ್ (Covid 19 positive)ಆಗಿದೆ.
ಶನಿವಾರ ಸಂಜೆಯ ವೇಳೆಗೆ ಟ್ವಿಟರ್ ನಲ್ಲಿ ಈ ಕುರಿತು ಮಾಹಿತಿ ನೀಡಿರುವ ಅವರು, ಕೋವಿಡ್-19 ಲಘು ಲಕ್ಷಣಗಳು ಕಾಣಿಸಿದ ಕಾರಣ ನಾನು ಇಂದು ಪರೀಕ್ಷೆಗೆ ಒಳಪಟ್ಟಿದ್ದು, ಕೋವಿಡ್-19 ವರದಿ ಪಾಸಿಟಿವ್ ಬಂದಿದೆ. ಕ್ವಾರಂಟೈನ್‌ನಲ್ಲಿದ್ದು ಅಗತ್ಯ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದೇನೆ. ನನ್ನ ಸಂಪರ್ಕಕ್ಕೆ ಬಂದ ಎಲ್ಲರೂ ಪರೀಕ್ಷೆ ಮಾಡಿಸಿಕೊಳ್ಳಿ" ಎಂದು ಹೇಳಿದ್ದಾರೆ. ಪರೀಕ್ಷೆಯಲ್ಲಿ ಪಾಸಿಟವ್ ಬಂದ ಬೆನ್ನಲ್ಲಿಯೇ ಸಚಿವ ಬಿಸಿ ನಾಗೇಶ್ ಕ್ವಾರಂಟೈನ್ ಗೆ ತೆರಳಿದ್ದಾರೆ.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಲೇ ಇದೆ. ರಾಜ್ಯದ ವಿವಿಧ ಇಲಾಖೆಯ ಸರ್ಕಾರಿ ನೌಕರರೊಂದಿಗೆ, ಪ್ರಮುಖ ರಾಜಕಾರಣಿಗಳಿಗೂ ಈಗಾಗಲೇ ಕೋವಿಡ್-19 ಸೋಂಕು ತಗುಲಿದೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ದಕ್ಷಿಣ ಕನ್ನಡದ ಮಾಜಿ ಸಂಸದ ಜನಾರ್ಧನ ಪೂಜಾರಿ, ಮಾಜಿ ಉಪ ಸಭಾಪತಿ ಪುಟ್ಟಣ್ಣ, ಮಂಗಳೂರು ಶಾಸಕ ಭರತ್ ಶೆಟ್ಟಿ, ಮಂಡ್ಯ ಸಂಸದೆ ಸುಮಲತಾ, ಕುಣಿಗಲ್ ಶಾಸಕ ರಂಗನಾಥ್, ಚಿಕ್ಕಮಗಳೂರಿನ ಎಂಎಲ್ ಸಿ ಪ್ರಾಣೇಶ್, ಬೆಂಗಳೂರು ಹೊರವಲಯದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ, ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ರಾಜ್ಯ ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಹಾಗೂ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಅವರಿಗೂ ಕೋವಿಡ್-19 ಸೋಂಕು ತಗುಲಿತ್ತು. ಶೀಘ್ರವಾಗಿ ಕ್ವಾರಂಟೈನ್ ನಲ್ಲಿ ಉಳಿದು ಚಿಕಿತ್ಸೆ ಪಡೆದ ಕಾರಣ ಗುಣಮುಖರಾಗಿದ್ದರು.
ಕಳೆದ ವಾರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಬಿಸಿ ನಾಗೇಶ್, ರಾಜ್ಯದಲ್ಲಿ ಕೋವಿಡ್-19 ಸೋಂಕುಗಳ ಪ್ರಮಾಣ ಏರಿಕೆಯಾಗುತ್ತಿರುವ ಕಾರಣ ದ್ವಿತೀಯ ಪಿಯುಸಿ ಪರೀಕ್ಷೆ ಮುಂದೂಡಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದರು. ಪಾಠಗಳು ಇನ್ನೂ ಪೂರ್ಣಗೊಳ್ಳದ ಕಾರಣ ಮಾರ್ಚ್ ತಿಂಗಳಿನಲ್ಲಿ ನಡೆಯಬೇಕಿದ್ದ ದ್ವಿತೀಯ ಪಿಯು ಪರೀಕ್ಷೆಗಳು ಏಪ್ರಿಲ್ ಕೊನೆಯ ವಾರಕ್ಕೆ ಮುಂದೂಡಿಕೆಯಾಗುವ ಸಾಧ್ಯತೆಗಳಿವೆ. ಏಪ್ರಿಲ್ ನಂತರ ಪರೀಕ್ಷೆಗಳು ವಿಳಂಬವಾಗುವುದಿಲ್ಲ. ಏಕೆಂದರೆ, ಪರೀಕ್ಷೆ ವಿಳಂಬವಾಗಿದ್ದೇ ಆದರೆ, ಅದು ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET), ಸಾಮಾನ್ಯ ಪ್ರವೇಶ ಪರೀಕ್ಷೆ ಮತ್ತು ವಿದ್ಯಾರ್ಥಿಗಳ ಇತರ ಪ್ರವೇಶ ಪರೀಕ್ಷೆಗಳ ವೇಳಾಪಟ್ಟಿಗಳ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಪರೀಕ್ಷೆಗಳು ವಿಳಂಬವಾಗುವುದಿಲ್ಲ ಎಂದು ತಿಳಿಸಿದ್ದರು.
ಇತ್ತೀಚೆಗಷ್ಟೇ ಪಿಯು ಇಲಾಖೆ ಮಾರ್ಚ್ ನಲ್ಲಿಯೇ ನಿಗದಿಯಂತೆ ಪರೀಕ್ಷೆಗಳು ನಡೆಯಲಿವೆ ಎಂದು ಹೇಳಿದ್ದರೂ, ಕೋವಿಡ್-19 ನಿರ್ಬಂಧಗಳಿಂದಾಗಿ ಈವರೆಗೂ ಪಠ್ಯಕ್ರಮವನ್ನು ಪೂರ್ತಿ ಮಾಡಲು ಸಾಧ್ಯವಾಗಿಲ್ಲ ಎಂದು ಉಪನ್ಯಾಸಕರು ಅಳಲು ತೋಡಿಕೊಂಡಿದ್ದರು.
