ಹೊಸ ವರ್ಷ ಹತ್ತಿರವಾಗುತ್ತಿದಂತೆ ಅನಧಿಕೃತ ಪಬ್‌, ಬಾರ್‌, ರೆಸ್ಟೋರೆಂಟ್‌ ಹಾಗೂ ಹೋಟೆಲ್‌ ಗಳನ್ನು ಪುನರ್ ಆರಂಭಿಸುವುದಕ್ಕೆ ಅವಕಾಶ ನೀಡುವಂತೆ ಪಾಲಿಕೆ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ.

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು (ಡಿ.7): ಹೊಸ ವರ್ಷ ಹತ್ತಿರವಾಗುತ್ತಿದಂತೆ ಅನಧಿಕೃತ ಪಬ್‌, ಬಾರ್‌, ರೆಸ್ಟೋರೆಂಟ್‌ ಹಾಗೂ ಹೋಟೆಲ್‌ ಗಳನ್ನು ಪುನರ್ ಆರಂಭಿಸುವುದಕ್ಕೆ ಅವಕಾಶ ನೀಡುವಂತೆ ಪಾಲಿಕೆ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ.

ಕೋರಮಂಗಲದ ಮಡ್‌ ಪೈಪ್ ಕೆಫೆ ಅಗ್ನಿ ದುರಂತದ ಹಿನ್ನೆಲೆಯಲ್ಲಿ ಬಿಬಿಎಂಪಿಯ ಎಂಟು ವಲಯದ ಆರೋಗ್ಯಾಧಿಕಾರಿಗಳಿಗೆ ನಗರದಲ್ಲಿರುವ ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಮುಖ್ಯ ಆಯುಕ್ತರು ಸೂಚಿಸಿದ್ದರು. ಜತೆಗೆ, ಏಳು ದಿನದಲ್ಲಿ ವರದಿ ನೀಡುವಂತೆ ಸೂಚಿಸಿದ್ದರು.

ನೀರಾವರಿ ವಿಚಾರದ ಬಗ್ಗೆ ಈವರೆಗೆ ಸಂಸತ್ತಿನಲ್ಲಿ ಪ್ರಸ್ತಾಪಿಸಿಲ್ಲ; ಎಚ್‌ಡಿಕೆ ಮಾತಿಗೆ ಕೆಎಚ್ ಮುನಿಯಪ್ಪ ಕೊಟ್ಟ ತಿರುಗೇಟು ಏನು?

ಅದರಂತೆ ಬಿಬಿಎಂಪಿ ಆರೋಗ್ಯಾಧಿಕಾರಿಗಳು ಸುಮಾರು 10 ದಿನ ನಗರದಲ್ಲಿರುವ 1,112 ಪಬ್‌, ಬಾರ್‌, ರೆಸ್ಟೋರೆಂಟ್‌ ಹಾಗೂ ಹೋಟೆಟ್‌ಗಳಿಗೆ ಭೇಟಿ ನೀಡಿ ಅಗ್ನಿ ಅವಘಡದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ, ಬಿಬಿಎಂಪಿಯಿಂದ ಪರವಾನಗಿ ಪಡೆಯಲಾಗಿದೆಯೇ, ಸ್ವಚ್ಛತೆ ಇದೆಯೇ ಅಥವಾ ಇಲ್ಲವೇ ಸೇರಿದಂತೆ ಹಲವು ರೀತಿಯ ಪರಿಶೀಲನೆ ನಡೆಸಿದ್ದರು.

ಈ ವೇಳೆ 526 ಪಬ್‌, ಬಾರ್‌, ರೆಸ್ಟೋರೆಂಟ್‌ ಹಾಗೂ ಹೋಟೆಲ್‌ಗಳಿಗೆ ನೋಟಿಸ್‌ ಜಾರಿಗೊಳಿಸಿದ್ದರು. ಜತೆಗೆ, ಬಿಬಿಎಂಪಿಯಿಂದ ಯಾವುದೇ ಅನುಮತಿ ಪಡೆಯದೇ, ಅನಧಿಕೃತವಾಗಿ ಕಟ್ಟಡ ಚಾವಣಿ ಮೇಲೆ ವಾಣಿಜ್ಯ ವಹಿವಾಟು ನಡೆಸುತ್ತಿರುವ 49 ಪಬ್‌, ಹೋಟೆಲ್‌, ರೆಸ್ಟೋರೆಂಟ್‌ ಹಾಗೂ ಬಾರ್‌ಗಳನ್ನು ಸಂಪೂರ್ಣವಾಗಿ ಮುಚ್ಚುವಂತೆ ನಿರ್ದೇಶಿಸಿದ್ದರು.

ರಾಜಕೀಯ ಒತ್ತಡ

ಇದೀಗ ಹೊಸ ವರ್ಷಾಚರಣೆಗೆ ಇನ್ನೇನು ಕೆಲವೇ ದಿನಗಳು ಮಾತ್ರ ಉಳಿದಿವೆ. ಜತೆಗೆ, ಕೋರಮಂಗಲದ ಅಗ್ನಿ ಅವಘಡ ದುರಂತದ ಕರಿನೆರಳು ದೂರವಾಗಿದೆ. ಹೀಗಾಗಿ, ಬಿಬಿಎಂಪಿ ಅಧಿಕಾರಿಗಳು ಮುಚ್ಚಿಸಿದ್ದ ಅನಧಿಕೃತ ಪಬ್‌, ಬಾರ್‌, ರೆಸ್ಟೋರೆಂಟ್‌ ಹಾಗೂ ಹೋಟೆಲ್‌ಗಳನ್ನು ಪುನರ್‌ ಆರಂಭಿಸುವುದಕ್ಕೆ ಅವಕಾಶ ಮಾಡಿಕೊಡುವಂತೆ ಬಿಬಿಎಂಪಿಯ ಸ್ಥಳೀಯ ಮತ್ತು ಹಿರಿಯ ಆರೋಗ್ಯ ವಿಭಾಗದ ಅಧಿಕಾರಿಗಳ ಮೇಲೆ ವಿವಿಧ ರಾಜಕೀಯ ಪಕ್ಷದ ಮುಖಂಡರು, ಪ್ರಭಾವಿ ಅಧಿಕಾರಿಗಳ ಮೂಲಕ ತೀವ್ರ ಒತ್ತಡ ಹಾಕಿಸಲಾಗುತ್ತಿದೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಹೊಸ ವರ್ಷದ ಆದಾಯಕ್ಕಾಗಿ ಲಾಬಿ

ಹೊಸ ವರ್ಷಾಚರಣೆಯ ಹಿಂದಿನ ದಿನ ಮತ್ತು ಹೊಸ ವರ್ಷದ ಮೊದಲ ದಿನ ರಾಜಧಾನಿ ಬೆಂಗಳೂರಿನ ಪಬ್‌, ಹೋಟೆಲ್‌, ರೆಸ್ಟೋರೆಂಟ್‌ ಹಾಗೂ ಬಾರ್‌ನಲ್ಲಿ ಕೋಟ್ಯಂತರ ರುಪಾಯಿ ವ್ಯವಹಾರ ನಡೆಯಲಿದೆ. ಅದಕ್ಕಾಗಿ ಈಗಾಗಲೇ ಹೋಟೆಲ್, ಪಬ್‌, ಬಾರ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಮುಂಗಡ ಬುಕ್ಕಿಂಗ್‌ ಆರಂಭಗೊಂಡಿದೆ. ಎರಡು ದಿನದ ಆದಾಯ ನಷ್ಟವಾಗಲಿದೆ ಎಂಬ ಕಾರಣಕ್ಕೆ ಪಾಲಿಕೆ ಅಧಿಕಾರಿಗಳ ಮೇಲೆ ಒತ್ತಡ ಹೇರುವ ಕೆಲಸ ಮಾಡಲಾಗುತ್ತಿದೆ ಎನ್ನಲಾಗಿದೆ.

ಮಣಿಕಂಠ ರಾಥೋಡ್, ವಿಜಯೇಂದ್ರ ವಿರುದ್ಧ ಮಾನನಷ್ಟ ಕೇಸ್‌ ಹಾಕುವೆ: ಪ್ರಿಯಾಂಕ್‌ ಖರ್ಗೆ

ಈಗಾಗಲೇ ಕೆಲವು ಪುನರ್‌ ಆರಂಭ

ನೋಟಿಸ್‌ ನೀಡಿದ ಪಬ್‌, ಬಾರ್, ರೆಸ್ಟೋರೆಂಟ್‌ ಹಾಗೂ ಹೋಟೆಲ್‌ಗಳ ಪೈಕಿ ಕೆಲವು ಈಗಾಗಲೇ ಬಿಬಿಎಂಪಿಗೆ ಸ್ಪಷ್ಟಣೆ ನೀಡಿ ಮತ್ತು ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡಿ ಪುನರ್‌ ಆರಂಭಿಸಿಕೊಂಡಿದ್ದಾರೆ. ಇನ್ನೂ ಕೆಲವು ಅನಧಿಕೃತ ಪಬ್, ಬಾರ್‌, ರೆಸ್ಟೋರೆಂಟ್ ಹಾಗೂ ಹೋಟೆಲ್‌ಗಳನ್ನು ಯಾವುದೇ ಮಾಹಿತಿ ನೀಡದೇ ಆರಂಭಿಸಿಕೊಂಡಿದ್ದಾರೆ ಎಂಬ ದೂರುಗಳು ಕೇಳಿ ಬಂದಿವೆ.

ಅನಧಿಕೃತ ಪಬ್‌ಗಳ ಮೇಲೆ ಕ್ರಮ ಇಲ್ಲ?

ಕಳೆದ ಅಕ್ಟೋಬರ್‌ನಲ್ಲಿ ಬಿಬಿಎಂಪಿ ಆರೋಗ್ಯಾಧಿಕಾರಿಗಳು ಪರಿಶೀಲನೆ ನಡೆಸಿ 49 ಅನಧಿಕೃತ ಪಬ್‌, ಬಾರ್‌, ರೆಸ್ಟೋರೆಂಟ್‌ ಹಾಗೂ ಹೋಟೆಲ್‌ಗಳನ್ನು ಮುಚ್ಚಿಸಲಾಗಿದೆ ಎಂದು ಮಾಹಿತಿ ನೀಡಿದ್ದರು. ಈಗಾಗಲೇ ಒಂದೂವರೆ ತಿಂಗಳು ಕಳೆದಿದೆ. ಆದರೂ ಬಿಬಿಎಂಪಿ ಅಧಿಕಾರಿಗಳು ಈ ಅನಧಿಕೃತ ಪಬ್‌, ಬಾರ್‌, ರೆಸ್ಟೋರೆಂಟ್‌ಗಳ ಮೇಲೆ ಯಾವುದೇ ಕಾನೂನು ಕ್ರಮವನ್ನು ಕೈಗೊಂಡಿಲ್ಲ. ಅದಕ್ಕೆ ಸಂಬಂಧಿಸಿದ ವರದಿಯನ್ನೂ ಮೇಲಾಧಿಕಾರಿಗಳಿಗೆ ನೀಡಿಲ್ಲ. ದುರಂತ ಸಂಭವಿಸಿದಾಗ ಮಾತ್ರ ಬಿಬಿಎಂಪಿ ಆರೋಗ್ಯಾಧಿಕಾರಿಗಳು ಎಚ್ಚೆತ್ತುಕೊಳ್ಳುವ ಸ್ಥಿತಿ ಇದೆ ಎಂಬ ಆರೋಪಗಳು ಕೇಳಿ ಬಂದಿವೆ.

ಪಬ್‌, ಬಾರ್‌, ರೆಸ್ಟೋರೆಂಟ್‌ ತಪಾಸಣೆ ವಿವರ

ವಲಯ ಪರಿಶೀಲನೆ ನೋಟಿಸ್‌ ಸಂಖ್ಯೆ ಬಂದ್‌ ಸಂಖ್ಯೆ

  • ಬೊಮ್ಮನಹಳ್ಳಿ 126 80 1
  • ದಾಸರಹಳ್ಳಿ 44 22 0
  • ಪೂರ್ವ 265 139 18
  • ಮಹದೇವಪುರ 221 44 2
  • ರಾಜರಾಜೇಶ್ವರಿನಗರ 75 44 7
  • ದಕ್ಷಿಣ 192 114 8
  • ಪಶ್ಚಿಮ 107 13 13
  • ಯಲಹಂಕ 97 70 0
  • ಒಟ್ಟು 1127 526 49