Asianet Suvarna News Asianet Suvarna News

2 ದಿನಗಳ ಭೇಟಿಗಾಗಿ ಇಂದು ರಾಷ್ಟ್ರಪತಿ ಕೋವಿಂದ್‌ ಬೆಂಗಳೂರಿಗೆ

ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ರಾಜ್ಯ ರಾಜಧಾನಿ ಬೆಂಗಳೂರಿಗೆ ಎರಡು ದಿನಗಳ ಭೇಟಿಗಾಗಿ ಸೋಮವಾರ ಆಗಮಿಸಲಿದ್ದಾರೆ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. 

President Ram Nath Kovind to inaugurate Rashtriya Military School today gvd
Author
Bangalore, First Published Jun 13, 2022, 5:00 AM IST

ಬೆಂಗಳೂರು (ಜೂ.13): ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ರಾಜ್ಯ ರಾಜಧಾನಿ ಬೆಂಗಳೂರಿಗೆ ಎರಡು ದಿನಗಳ ಭೇಟಿಗಾಗಿ ಸೋಮವಾರ ಆಗಮಿಸಲಿದ್ದಾರೆ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಸೋಮವಾರದಂದು 11.40 ಕ್ಕೆ ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಷ್ಟ್ರಪತಿಗಳನ್ನು ಬರಮಾಡಿಕೊಳ್ಳಲಿದ್ದಾರೆ. ಸಂಜೆ 4.30ಕ್ಕೆ ಬೆಂಗಳೂರಿನ ರಾಷ್ಟ್ರೀಯ ಮಿಲಿಟರಿ ಸ್ಕೂಲ್‌ನ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ರಾಷ್ಟ್ರಪತಿಗಳು ಉದ್ಘಾಟಿಸಲಿದ್ದಾರೆ. 

ರಾಷ್ಟ್ರೀಯ ಮಿಲಿಟರಿ ಸ್ಕೂಲ್‌ನ ಚಾಣಕ್ಯ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋಟ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಕೇಂದ್ರ, ರಾಜ್ಯ ಸರ್ಕಾರದ ಗಣ್ಯರು, ಸೇನೆಯ ಹಿರಿಯ ಅಧಿಕಾರಿಗಳು ಭಾಗಿಯಾಗಲಿದ್ದಾರೆ. ರಾಷ್ಟ್ರಪತಿಯವರು ಸೋಮವಾರ ರಾತ್ರಿ ರಾಜಭವನದಲ್ಲಿ ತಂಗಲಿದ್ದಾರೆ. ಮಂಗಳವಾರ ಪೂರ್ವಾಹ್ನ 11.30 ವಸಂತಪುರದ ವೈಕುಂಠ ಗಿರಿಯಲ್ಲಿ ಇಸ್ಕಾನ್‌ನವರು ನಿರ್ಮಿಸಿರುವ ಶ್ರೀ ರಾಜಾಧಿಕಾರ ಗೋವಿಂದ ದೇಗುಲದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಆ ಬಳಿಕ ಗೋವಾಕ್ಕೆ ನಿರ್ಗಮಿಸಲಿದ್ದು ಅಲ್ಲಿ ಬುಧವಾರ ಅಲ್ಲಿ ನಡೆಯಲಿರುವ ಹೊಸ ರಾಜಭವನದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

Padma Shri: ಕನ್ನಡಿಗ ಮಹಾಲಿಂಗ, ರೈತರತ್ನ ನಡಕಟ್ಟಿನ್‌ಗೆ ಪದ್ಮ ಪ್ರದಾನ

ಜು.18ಕ್ಕೆ ರಾಷ್ಟ್ರಪತಿ ಚುನಾವಣೆ: ದೇಶದ 14ನೇ ರಾಷ್ಟ್ರಪತಿಯಾಗಿರುವ ರಾಮನಾಥ ಕೋವಿಂದ್‌ ಅವರ ಅವಧಿ ಇನ್ನು ಒಂದೂವರೆ ತಿಂಗಳಿನಲ್ಲಿ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ ನೂತನ ರಾಷ್ಟ್ರಪತಿ ಆಯ್ಕೆಗೆ ಕೇಂದ್ರ ಚುನಾವಣಾ ಆಯೋಗ ಗುರುವಾರ ವೇಳಾಪಟ್ಟಿಪ್ರಕಟಿಸಿದೆ. ಜು.18ರಂದು ಚುನಾವಣೆ ನಡೆಯಲಿದ್ದು, ಜು.21ರಂದು ಮತಗಳ ಎಣಿಕೆ ಕಾರ್ಯ ನಡೆಯಲಿದೆ ಎಂದು ಆಯೋಗ ತಿಳಿಸಿದೆ. 2017ರಲ್ಲಿ ರಾಷ್ಟ್ರಪತಿಯಾಗಿ ಚುನಾಯಿತರಾಗಿದ್ದ ಕೋವಿಂದ್‌ ಅವರ ಅವಧಿ ಜು.24ಕ್ಕೆ ಮುಗಿಯಲಿದೆ. ಹೀಗಾಗಿ ಜು.25ರೊಳಗೆ ನೂತನ ರಾಷ್ಟ್ರಪತಿ ಪ್ರಮಾಣವಚನ ಸ್ವೀಕರಿಸಬೇಕಾಗಿದೆ.

ಲೋಕಸಭೆ, ರಾಜ್ಯಸಭೆ ಮತ್ತು ರಾಜ್ಯಗಳ ವಿಧಾನಸಭೆಯಲ್ಲಿ ಅತ್ಯಧಿಕ ಬೆಂಬಲ ಹೊಂದಿರುವ ಬಿಜೆಪಿ, ತನ್ನದೇ ಅಭ್ಯರ್ಥಿಯನ್ನು ರಾಷ್ಟ್ರಪತಿಯಾಗಿ ಆರಿಸಲು ಬೇಕಾದ ಸಂಖ್ಯಾಬಲವನ್ನು ಹೊಂದಿದೆ. ಇದಲ್ಲದೆ, ಒಡಿಶಾದ ಬಿಜು ಜನತಾ ದಳ ಹಾಗೂ ಆಂಧ್ರಪ್ರದೇಶದ ವೈಎಸ್ಸಾರ್‌ ಕಾಂಗ್ರೆಸ್‌ ಬೆಂಬಲ ಕೂಡ ಲಭಿಸುವ ನಿರೀಕ್ಷೆ ಇದೆ. ಹೀಗಾಗಿ ಬಿಜೆಪಿ ನೇತೃತ್ವದ ಎನ್‌ಡಿಎಯಿಂದ ಅಭ್ಯರ್ಥಿಯಾಗಿ ಕಣಕ್ಕಿಳಿದವರು ರಾಷ್ಟ್ರಪತಿಯಾಗಿ ಆಯ್ಕೆಯಾಗುವುದು ನಿಶ್ಚಿತವಾಗಿದೆ.

Padma Shri ಪ್ರಧಾನಿ, ರಾಷ್ಟ್ರಪತಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಪದ್ಮಶ್ರೀ ಸ್ವೀಕರಿಸಿದ 125 ವರ್ಷದ ಯೋಗ ಗುರು!

ಯಾರು ಸ್ಪರ್ಧಿಸಬಹುದು?: ಭಾರತದ ನಾಗರಿಕರಾಗಿದ್ದು, 35 ವರ್ಷ ಅಥವಾ ಅದಕ್ಕಿಂತ ಮೇಲಿನವರು ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಬಹುದು. ಕೇಂದ್ರ ಅಥವಾ ರಾಜ್ಯ ಸರ್ಕಾರಗಳಲ್ಲಿ ಲಾಭದಾಯಕ ಹುದ್ದೆ ಹೊಂದಿರಬಾರದು. ಆದರೆ ಹಾಲಿ ರಾಷ್ಟ್ರಪತಿ, ರಾಜ್ಯಪಾಲ, ಪ್ರಧಾನಿ ಸೇರಿ ಕೇಂದ್ರ ಸಚಿವರು, ಮುಖ್ಯಮಂತ್ರಿ ಸೇರಿ ರಾಜ್ಯ ಸಚಿವರಿಗೆ ಇದು ಅನ್ವಯವಾಗದು. ಈ ವ್ಯಕ್ತಿಗಳು ಚುನಾವಣೆಗೆ ಸ್ಪರ್ಧಿಸಿ ಆಯ್ಕೆಯಾಗಿ ರಾಷ್ಟ್ರಪತಿಯಾಗುವ ಮುನ್ನ ತಮ್ಮ ಹಿಂದಿನ ಹುದ್ದೆಗೆ ರಾಜೀನಾಮೆ ನೀಡಬೇಕು. ನಾಮಪತ್ರ ಸಲ್ಲಿಸಲು 50 ರಾಷ್ಟ್ರಪತಿ ಚುನಾವಣೆಯ ಮತದಾರರು ಸೂಚಕರಾಗಿರಬೇಕು, 50 ಮತದಾರರು ಅನುಮೋದಕರಾಗಿರಬೇಕು. ಇಲ್ಲದಿದ್ದರೆ ಮತಪತ್ರದಲ್ಲಿ ಹೆಸರು ಇರುವುದಿಲ್ಲ. ನಾಮಪತ್ರ ಸಲ್ಲಿಕೆ ವೇಳೆ 15 ಸಾವಿರ ರು.ಗಳನ್ನು ಭದ್ರತಾ ಠೇವಣಿಯಾಗಿ ಕಟ್ಟಬೇಕು.

Follow Us:
Download App:
  • android
  • ios