ನಮ್ಮಪಾಲು ನಮ್ಗೆ ಕೊಡಿ, ನಮ್ಮ ಭಾಷೆ ನಮ್ಗೆ ಬಿಡಿ: ಸಮ್ಮೇಳನಾಧ್ಯಕ್ಷ ಗೊರುಚ ಗರ್ಜನೆ

ಭಾರತದ ಜನರೆಲ್ಲರೂ ಸಂವಹನ ನಡೆಸಲು ಹಿಂದಿ ಭಾಷೆಯನ್ನು ಕಲಿತು ಬಳಸಬೇಕು. ಅದೇ ನಮ್ಮ ರಾಷ್ಟ್ರ ಭಾಷೆ" ಎಂಬುದನ್ನು ಲಿಖಿತವಾಗಿ ಮತ್ತು ಅಲಿಖಿತವಾಗಿ, ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಹೇರುವ ಹುನ್ನಾರವನ್ನು ಹಿಂದಿನ ಮತ್ತು ಇಂದಿನ ಕೇಂದ್ರ ಸರ್ಕಾರಗಳು ಮಾಡುತ್ತಲೇ ಬಂದಿವೆ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಗೊ.ರು. ಚನ್ನಬಸಪ್ಪ 
 

President of Akhila Bharata Kannada Sahitya Sammelana Go Ru Channabasappa Talks Over Kannada grg

ಜೋಗಿ 

ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಧಾನ ವೇದಿಕೆ(ಮಂಡ್ಯ)(ಡಿ.21):  ಕನ್ನಡಕ್ಕೆ ಸೇರಬೇಕಾದ ತೆರಿಗೆಯ ಪಾಲು ಸರಿಯಾಗಿ ಹಂಚಿಕೆ ಆಗುತ್ತಿಲ್ಲ. ಕನ್ನಡಿಗರ ಮೇಲೆ ಹಿಂದಿ ಭಾಷೆಯ ಹೇರಿಕೆ ನಡೆಯುತ್ತಿದೆ. ಕನ್ನಡದಲ್ಲಿ ಶಿಕ್ಷಣ ದೊರೆಯುತ್ತಿಲ್ಲ. ಕನ್ನಡಿಗರು ಸತತವಾಗಿ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಗೊ.ರು. ಚನ್ನಬಸಪ್ಪ ಆಕ್ರೋಶ ವ್ಯಕ್ತಪಡಿಸಿದರು. 

ಒಕ್ಕೂಟ ಸರ್ಕಾರವು ಹಣಕಾಸು ಆಯೋಗಗಳ ಶಿಫಾರಸ್ಸುಗಳಿಗೆ ಅನುಗುಣವಾಗಿ ಕರ್ನಾಟಕಕ್ಕೆ ಬರಬೇಕಾದ ತೆರಿಗೆ ಪಾಲನ್ನು ವರ್ಗಾಯಿಸುತ್ತಿಲ್ಲ. 'ಒಕ್ಕೂಟ-ಹಣಕಾಸು ವ್ಯವಸ್ಥೆ" ಯನ್ನು ಒಕ್ಕೂಟ ಸರ್ಕಾರವು ಸಂವಿಧಾನಾತ್ಮಕವಾಗಿ ನಿರ್ವಹಿಸುವುದರಲ್ಲಿ ವಿಫಲವಾಗಿದೆ. ನಬಾರ್ಡ್ (ನ್ಯಾಷನಲ್ ಬ್ಯಾಂಕ್ ಫಾರ್‌ ಆಗಿ, ಕಲ್ಬರ್‌ಆಂಡ್ ರೂರಲ್ ಡೆವಲಪ್ ಮೆಂಟ್) ವಾರ್ಷಿಕವಾಗಿ ಕರ್ನಾಟಕಕ್ಕೆ ನೀಡುತ್ತಿದ್ದ ಮರುಹಣಕಾಸು ಸಾಲವನ್ನು 2024-25ರಲ್ಲಿ ಶೇ. 58ರಷ್ಟು ಕಡಿತಮಾಡಿದೆ. ಇದು ಕನ್ನಡಿಗರ ಬದುಕು ಮತ್ತು ಭವಿಷ್ಯದ ಪ್ರಶ್ನೆ ಎಂದು ಶುಕ್ರವಾರ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಭಾಷದಲ್ಲಿ ಕೇಂದ್ರ ಸರ್ಕಾರವನ್ನು ಗೊರುಚ ತರಾಟೆಗೆ ತೆಗೆದುಕೊಂಡರು. 

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಮಂಡ್ಯದ ಹಿರಿಮೆ ಹೆಚ್ಚಿಸಿದ ಸಾಹಿತ್ಯ ರತ್ನಗಳು!

ಸಿಎಂ ಹೇಳಿದ್ದು ನಿಜ: 

ತೆರಿಗೆ ಪಾಲಿನ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಹೇಳುವುದರಲ್ಲಿ ಸತ್ಯಾಂಶವಿದೆ. ಈ ಮಾತುಗಳನ್ನು ರಾಜಕೀಯ ಬಣ್ಣದ ಮೂಲಕ ನೋಡಬಾರದು. ರಾಜ್ಯಗಳು ಆರ್ಥಿಕವಾಗಿ ಬೆಳೆದರೆ ಮಾತ್ರ ಭಾರತ ಬೆಳೆಯಲು ಸಾಧ್ಯ. ಕೇಂದ್ರ-ರಾಜ್ಯಗಳ ಹಣಕಾಸು ಸಂಬಂಧ ಕುರಿತಂತೆ ಕೇಂದ್ರ ಸರ್ಕಾರವು ಸಂವಿಧಾನ ಮತ್ತು ಹಣಕಾಸು ತಜ್ಞರ ಒಂದು ವಿಶೇಷ ಆಯೋಗ ರಚಿಸಬೇಕು ಎಂದು ಗೊರುಚ ಒತ್ತಾಯಿಸಿದರು. 

ರಾಜ್ಯಗಳ ಮೇಲೆ ಹಿಂದಿ ಹೇರಿಕೆ: 

''ಭಾರತದ ಜನರೆಲ್ಲರೂ ಸಂವಹನ ನಡೆಸಲು ಹಿಂದಿ ಭಾಷೆಯನ್ನು ಕಲಿತು ಬಳಸಬೇಕು. ಅದೇ ನಮ್ಮ ರಾಷ್ಟ್ರ ಭಾಷೆ" ಎಂಬುದನ್ನು ಲಿಖಿತವಾಗಿ ಮತ್ತು ಅಲಿಖಿತವಾಗಿ, ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಹೇರುವ ಹುನ್ನಾರವನ್ನು ಹಿಂದಿನ ಮತ್ತು ಇಂದಿನ ಕೇಂದ್ರ ಸರ್ಕಾರಗಳು ಮಾಡುತ್ತಲೇ ಬಂದಿವೆ. ಕೇಂದ್ರ ಸರ್ಕಾರಕ್ಕೆ ಒಳಪಟ್ಟ ಇಲಾಖೆಗಳು, ನಿಗಮ-ಮಂಡಲಿಗಳು, ಸಂಸ್ಥೆಗಳು, ಬ್ಯಾಂಕುಗಳಲ್ಲಿ ಕನ್ನಡದ ಸೊಲ್ಲು ಸಾಧ್ಯವಾದಷ್ಟೂ ಇರದಂತೆ ನೋಡಿಕೊಳ್ಳಲಾಗುತ್ತದೆ. ನಿಜವಾಗಿ ಹೇಳುವುದಾದರೆ, ಒಕ್ಕೂಟ ಸರ್ಕಾರವೇ ಸರಿಯಾದ ಸ್ವರೂಪವಾಗಿದ್ದು ರಾಜ್ಯ ಸರ್ಕಾರಗಳಿಗೆ ಭಾಷೆಯೂ ಸೇರಿ ಅನೇಕ ವಿಷಯಗಳಲ್ಲಿ ಆಯ್ಕೆಯ ಸ್ವಾತಂತ್ರ್ಯ ಇದ್ದೇ ಇರುತ್ತದೆ. ಇತರ ರಾಜ್ಯಗಳಿಗೂ ಇರುವಂತೆ, ನಮಗೂ ಇರುವ ಸಂವಿಧಾನದ 345ನೇ ವಿಧಿಯ ಪ್ರಕಾರ ಕನ್ನಡವೇ ನಮ್ಮ ರಾಜ್ಯದ ಅಧಿಕೃತ ಭಾಷೆ ಆಗಿದೆ. ಎಲ್ಲ ರಾಜ್ಯ ಗಳಿಗೂ ಒಂದೇ ಭಾಷೆ ಹೇರುವುದು ಸಮರ್ಥನೀಯ ವಲ್ಲ ಎಂದು ಗೊರುಚ ಅಸಮಾಧಾನಪಟ್ಟರು. ಅನೇಕ ಬ್ಯಾಂಕ್‌ಗಳ ಚಲನ್‌ಗಳಲ್ಲಿ ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿ ಮಾತ್ರ ವಿವರಗಳನ್ನು ತುಂಬುವ ಅವಕಾಶವಿರುವುದು ಗ್ರಾಹಕರಿಗೆ ಸದ್ದಿಲ್ಲದೆ ನೀಡುವ ಕಿರುಕುಳ, ಸಂವಿಧಾನದ 351ನೇ ವಿಧಿಯ ಅನ್ವಯ ಹಿಂದಿ ಭಾಷೆಗೆ ಆದ್ಯತೆ ನೀಡುವ ಅವಕಾಶವಿದ್ದರೂ ಅದು ಹೇರಿಕೆ ಮತ್ತು ದಬ್ಬಾಳಿಕೆ ರೂಪದಲ್ಲಿ ಜಾರಿಗೆ ಬರಬಾರದು. ಕನ್ನಡನಾಡಿನಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಎನ್ನುವುದು ನಿರ್ವಿವಾದ. ಇದನ್ನು ನಮ್ಮ ರಾಜ್ಯ ಸರ್ಕಾರ ಸರ್ವರೀತಿಯಲ್ಲೂ ಕೇಂದ್ರ ಸರ್ಕಾರಕ್ಕೆ ಮನಗಾಣಿಸಬೇಕು ಎಂದು ಗೊರುಚ ಹೇಳಿದರು.

ಶಿಕ್ಷಣದಲ್ಲಿ ಕನ್ನಡ: 

ನಮ್ಮ ಕನ್ನಡ ಭಾಷೆ: ಸಮೃದ್ಧವಾಗಿ ಬೆಳೆಯುತ್ತಿದೆ. ಆದರೆ ಅದಕ್ಕೆತಕ್ಕಂತೆಬಳಕೆಯಾಗುತ್ತಿಲ್ಲ. ಕನ್ನಡನಾಡಿನಲ್ಲಿ ಹುಟ್ಟುವ ಮಕ್ಕಳು ಪಡೆಯುವ ಶಿಕ್ಷಣದಭಾಷೆಮತ್ತು ಮಾಧ್ಯಮಯಾವುದಾಗಿರಬೇಕು ಎನ್ನುವ ಚರ್ಚೆ ಇನ್ನೂ ನಿರ್ಧಾರವಾಗದ ಸಂಕೀರ್ಣ ಸ್ವರೂಪದಲ್ಲೇ ಇದೆ. ಕರ್ನಾಟಕ ರಾಜ್ಯದಲ್ಲಿ ಸರ್ಕಾರಗಳು ಬದಲಾದಂತೆ ಸರ್ಕಾರಿ-ಸಾರ್ವಜನಿಕ ಶಾಲಾಶಿಕ್ಷಣದಲ್ಲಿ ಪ್ರಥಮ, ದ್ವಿತೀಯ, ತೃತೀಯ ಭಾಷೆ ಎಂದು ಕನ್ನಡದ ಸ್ಥಾನಮಾನ ಬದಲಾಗುವುದು, ಖಾಸಗಿ ಶಾಲೆಗಳು ಅದರಲ್ಲೂ ಕೇಂದ್ರೀಯ ಪಠ್ಯಕ್ರಮ ಮತ್ತು ಪರೀಕ್ಷಾ ಕ್ರಮವನ್ನು ಅನುಸರಿಸುವ ಶಾಲೆಗಳು ವಿಭಿನ್ನ ನೀತಿಗೆ ಪಟ್ಟು ಹಿಡಿಯುವುದು, ಸರ್ಕಾರವೇ ಪಬ್ಲಿಕ್ ಶಾಲೆಗಳನ್ನು ತೆರೆದಿರುವುದು ಅನೇಕರಿಗೆ ಗೊಂದಲ ಹುಟ್ಟಿಸಿವೆ ಎಂದು ಗೊರುಚ ಬೇಸರಪಟ್ಟರು. 

ಮಂಡ್ಯದಲ್ಲಿ ನಡೆದ ಎರಡು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪು!

ಗ್ರಾಮೀಣ ಪ್ರದೇಶದಲ್ಲಿ ಸಾವಿರಾರು ಸರ್ಕಾರಿ ಶಾಲೆಗಳು ಸೂರು, ಗೋಡೆ ಉರುಳುವ ಸ್ಥಿತಿಯಲ್ಲಿವೆ. ಅವುಗಳನ್ನು ಸರಿಪಡಿಸಿ, ಮಕ್ಕಳಿಗೆ ಮತ್ತು ಪೋಷಕರಿಗೆ ಅವು ಆಕರ್ಷಕವಾಗುವಂತೆ ಉನ್ನತೀಕರಿಸಬೇಕು. ಮಕ್ಕಳು ಮತ್ತು ಶಿಕ್ಷಕರ ಕೊರತೆಯಿಂದ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ ಪ್ರಕ್ರಿಯೆ ನಡೆಯು ತ್ತಿದೆ. ಇದು ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳಿಸದಂತೆ ಹಿರಿಯರನ್ನು ಪ್ರೇರೇಪಿಸುತ್ತಿದೆ. ಆದ್ದರಿಂದ ಸರ್ಕಾರ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಹಿರಿಯ ಪ್ರಾಥ ಮಿಕ ಮತ್ತು ಪ್ರೌಢಶಾಲೆ ಎಂಬ ಗುಚ್ಛವ್ಯವಸ್ಥೆಯನ್ನು ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತೆರೆಯಬೇಕು ಎನ್ನುವ ಸಲಹೆಯನ್ನು ಸರ್ಕಾರ ಪರಿಶೀಲಿಸುವುದು ಅಗತ್ಯ ಎಂದು ಗೊರುಚ ಪ್ರತಿಪಾದಿಸಿದರು. 

ಕನ್ನಡವೇ ಶಿಕ್ಷಣದ ಭಾಷೆಯಾಗಿ, ಇಂಗ್ಲಿಷ್ ಭಾಷೆ ಪಠ್ಯಕ್ರಮದಲ್ಲಿ ಒಂದು ಭಾಷೆ/ವಿಷಯವಾಗಿ ಮಾತ್ರ ಇರುವಂತೆ ಮಾಡಬಹುದು. ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮದ ಶಾಲೆಯಲ್ಲಿ, ಅದರಲ್ಲೂ ಖಾಸಗಿ ಶಾಲೆ ಯಲ್ಲಿ ಓದಿಸಿದರೆ ಮಾತ್ರ ಅವರಿಗೆ ಸರಿಯಾದ ಶಿಕ್ಷಣ ಸಿಗುತ್ತದೆ ಮತ್ತು ಮುಂದೆ ಉದ್ಯೋಗಾವಕಾಶಕ್ಕೆ ಅನು ಕೂಲವಾಗುತ್ತದೆ ಎಂಬ ಭ್ರಮೆಯಲ್ಲಿರುವ ತಂದೆ- ತಾಯಿಗಳ ಬುದ್ದಿ, ಆಲೋಚನೆಗಳಿಗೆ ಕನ್ನಡದ ಬಗೆಗೆ ಮನವರಿಕೆ ಮಾಡಿಕೊಡುವುದು ಬಹಳ ದೊಡ್ಡ ಸವಾ ಲಾಗಿದೆ. ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಕೈಂಕರ್ಯದಲ್ಲಿ ಖಾಸಗಿ ಉದ್ಯಮಿಗಳು, ಶ್ರೀಮಂತ ವ್ಯಾಪಾರಿಗಳು, ವಿದೇಶಗಳಲ್ಲಿರುವ ಕನ್ನಡಿಗರು ಮತ್ತು ಸ್ವಯಂ ಸೇವಾ ಸಂಸ್ಥೆಗಳು ಹೆಚ್ಚು ಹೆಚ್ಚಾಗಿ ನೆರವು ನೀಡಿ ಕೈಜೋಡಿಸಬೇಕು ಎಂದು ಗೊರುಚ ಹೇಳಿದರು.

Latest Videos
Follow Us:
Download App:
  • android
  • ios