ಮಂಡ್ಯದಲ್ಲಿ ನಡೆದ ಎರಡು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪು!
48ನೇ ಸಾಹಿತ್ಯ ಸಮ್ಮೇಳನದಲ್ಲಿ ಪ್ರಥಮ ಬಾರಿಗೆ ಮಹಿಳೆಯೊಬ್ಬರನ್ನು ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ ಹೆಗ್ಗಳಿಕೆ ಮಂಡ್ಯಕ್ಕೆ ದೊರಕಿತ್ತು. ಜಯದೇವಿ ತಾಯಿ ಲಿಗಾಡೆ ಸಾಹಿತ್ಯ ಸಮ್ಮೇಳನದ ಮೊದಲ ಮಹಿಳಾ ಸರ್ವಾಧ್ಯಕ್ಷರು ಎಂಬ ಕೀರ್ತಿಗೆ ಪಾತ್ರರಾಗಿದ್ದರು. ಅಂದು ಧ್ವಜಾರೋಹಣವನ್ನು ಸ್ವಾಗತ ಸಮಿತಿ ಅಧ್ಯಕ್ಷರಾಗಿದ್ದ ಎಂ.ಲಿಂಗಯ್ಯ ನೆರವೇರಿಸಿದ್ದರು. ಸಿಎಂ ಡಿ.ದೇವರಾಜ ಅರಸು ಸಾಹಿತ್ಯ ಸಮ್ಮೇಳನದ ಉದ್ಘಾಟನೆ ನೆರವೇರಿಸಿದ್ದರು.
ಮಂಡ್ಯ ಮಂಜುನಾಥ
ಮಂಡ್ಯ(ಡಿ.20): ರಾಜ್ಯದಲ್ಲೇ ಅತಿ ಹೆಚ್ಚು ಕನ್ನಡ ಮಾತನಾಡುವ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಂಡ್ಯ ಜಿಲ್ಲೆಯಲ್ಲಿ ಮೊದಲ ಬಾರಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೊಂಡಿದ್ದು 1974ನೇ ಇಸವಿ ಮೇ 31ರಂದು. ಅಂದು ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಿರ್ಮಿಸಿದ್ದ ಚಿಕ್ಕದೇವರಾಜ ಮಂಟಪದಲ್ಲಿ ಮೂರು ದಿನಗಳ ಕಾಲ ಯಶಸ್ವಿಯಾಗಿ ಸಾಹಿತ್ಯ ಸಮ್ಮೇಳನ ನಡೆದಿತ್ತು. ಅದುವರೆಗೆ ನಡೆದಿದ್ದ 47 ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳಲ್ಲಿ ಪುರುಷರೇ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ ಅಲಂಕರಿಸಿದ್ದರು.
48ನೇ ಸಾಹಿತ್ಯ ಸಮ್ಮೇಳನದಲ್ಲಿ ಪ್ರಥಮ ಬಾರಿಗೆ ಮಹಿಳೆಯೊಬ್ಬರನ್ನು ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ ಹೆಗ್ಗಳಿಕೆ ಮಂಡ್ಯಕ್ಕೆ ದೊರಕಿತ್ತು. ಜಯದೇವಿ ತಾಯಿ ಲಿಗಾಡೆ ಸಾಹಿತ್ಯ ಸಮ್ಮೇಳನದ ಮೊದಲ ಮಹಿಳಾ ಸರ್ವಾಧ್ಯಕ್ಷರು ಎಂಬ ಕೀರ್ತಿಗೆ ಪಾತ್ರರಾಗಿದ್ದರು. ಅಂದು ಧ್ವಜಾರೋಹಣವನ್ನು ಸ್ವಾಗತ ಸಮಿತಿ ಅಧ್ಯಕ್ಷರಾಗಿದ್ದ ಎಂ.ಲಿಂಗಯ್ಯ ನೆರವೇರಿಸಿದ್ದರು. ಮುಖ್ಯಮಂತ್ರಿ ಡಿ.ದೇವರಾಜ ಅರಸು ಸಾಹಿತ್ಯ ಸಮ್ಮೇಳನದ ಉದ್ಘಾಟನೆ ನೆರವೇರಿಸಿದ್ದರು. ಕೈಗಾರಿಕಾ ಸಚಿವ ಎಸ್.ಎಂ.ಕೃಷ್ಣ ಪುಸ್ತಕ ಪ್ರದರ್ಶನ ಉದ್ಘಾಟಿಸಿದ್ದರೆ, ಶಿಕ್ಷಣ ಸಚಿವ ಎಂ.ಮಲ್ಲಿಕಾರ್ಜುನ ಸ್ವಾಮಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದ್ದರು.
ಈ ಬಾರಿಯ ಸಮ್ಮೇಳನಕ್ಕೆ ಐತಿಹಾಸಿಕ ಮಹತ್ವವಿದೆ: ಡಾ ಮಹೇಶ್ ಜೋಶಿ
ಆಂಗ್ಲಭಾಷೆಯ ಪಾರಪತ್ಯವಿಲ್ಲದ ಕಾಲಘಟ್ಟದಲ್ಲಿ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ವಿಶಿಷ್ಟ ಹಾಗೂ ವಿಶೇಷವಾದ ವಿಷಯಗಳನ್ನು ಗೋಷ್ಠಿಗಳಿಗೆ ಆಯ್ಕೆ ಮಾಡಲಾಗಿತ್ತು. ಸಾಹಿತ್ಯದ ಸ್ಥಿತಿಗತಿ ಗೋಷ್ಠಿಯಲ್ಲಿ ವಿಮರ್ಶಕರ ಸಮಸ್ಯೆಗಳು, ಸಾಹಿತ್ಯ ಹಾಗೂ ಜನಜೀವನ, ಲೇಖಕರ ಸಮಸ್ಯೆಗಳು - ಗದ್ಯ ಸಾಹಿತ್ಯ, ಕಾವ್ಯ, ನಾಟಕ, ಸಾಹಿತ್ಯ ಮತ್ತು ಪತ್ರಿಕೆಗಳು ಕುರಿತು ಶಂಕರ ಮೊಕಾಶಿ ಪುಣೇಕರ್, ತ.ರಾ.ಸು, ಶಾಂತಿನಾಥ ದೇಸಾಯಿ, ಜಿ.ಎಸ್.ಸಿದ್ದಲಿಂಗಯ್ಯ, ಡಾ ಹೆಚ್ ಕೆ ರಂಗನಾಥ್, ರಾವ್ ಬಹದ್ದೂರ್ ವಿಚಾರ ಮಂಡಿಸಿದ್ದರು.
ಅಂದು ರಾತ್ರಿ ಜಾನಪದ ಕಲಾ ಪ್ರದರ್ಶನ ಮತ್ತು ಕೆ.ವಿ.ಶಂಕರಗೌಡ ಮತ್ತು ಮಿತ್ರರಿಂದ ಪಾದುಕಾ ಕಿರೀಟಿ ನಾಟಕ ಪ್ರದರ್ಶನ ನಡೆದಿತ್ತು. ಸಾಹಿತ್ಯ ಶಾಸ್ತ್ರ ಗೋಷ್ಠಿಯಲ್ಲಿ ವ್ಯಾಕರಣ ಕ್ಷೇತ್ರದ ಸಾಧನೆ, ಭಾಷಾ ವಿಜ್ಞಾನ ಕ್ಷೇತ್ರದ ಸಾಧನೆ, ಕಾವ್ಯಮೀಮಾಂಸೆ ಕ್ಷೇತ್ರದ ಸಾಧನೆ, ಕನ್ನಡ ಗ್ರಂಥ ಸಂಪಾದನಾ ಕ್ಷೇತ್ರದ ಸಾಧನೆ, ಸಾಹಿತ್ಯ ಚರಿತ್ರೆ ಕ್ಷೇತ್ರದ ಸಾಧನೆ, ಛಂದಶಾಸ್ತ್ರ ಕ್ಷೇತ್ರದ ಸಾಧನೆ ಕುರಿತು ವಿಚಾರ ಮಂಡನೆಯಾಗಿದ್ದವು. ವಿಜ್ಞಾನ, ತತ್ವಶಾಸ್ತ್ರ, ಲಲಿತಕಲೆ, ಮನಃಶಾಸ್ತ್ರದ ಬಗ್ಗೆಯೂ ಗೋಷ್ಠಿಗಳಿಗೆ ವಿಷಯಗಳನ್ನು ಆಯ್ಕೆ ಮಾಡಿಕೊಂಡು ವಿಚಾರ ಮಂಡನೆಗೆ ಅವಕಾಶ ಕಲ್ಪಿಸಲಾಗಿತ್ತು. ವಿಜ್ಞಾನ ಮತ್ತು ಮಾನವಿಕ ಸಾಹಿತ್ಯ ಗೋಷ್ಠಿಯಲ್ಲಿ ಭೌತ ವಿಜ್ಞಾನ (ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ ಶಾಸ್ತ್ರ), ಜೀವವಿಜ್ಞಾನ (ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ, ಜೀವಶಾಸ್ತ್ರ, ಜೀವರಸಾಯನಶಾಸ್ತ್ರ), ತಾಂತ್ರಿಕ ಮತ್ತು ವೃತ್ತಿ (ಕೃಷಿ, ವೈದ್ಯ ಮತ್ತು ಶಿಲ್ಪ) ಸಮಾಜ ವಿಜ್ಞಾನ (ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜವಿಜ್ಞಾನ, ಇತಿಹಾಸ) ಮಾನವಿಕಗಳು (ತತ್ವಶಾಸ್ತ್ರ, ಲಲಿತಕಲೆಗಳು, ಮನಃಶಾಸ್ತ್ರ), ಶಿಕ್ಷಣ ವಿಷಯಗಳು ಚರ್ಚೆಯಾಗಿದ್ದವು. ಪತ್ರಿಕಾ ಪ್ರದರ್ಶನದ ಉದ್ಘಾಟನೆಯನ್ನು ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಮತ್ತು ನಾಗರಿಕ ವಿಮಾನಯಾನ ರಾಜ್ಯ ಸಚಿವೆ ಡಾ.ಸರೋಜಿನಿ ಮಹಿಷಿ ನೆರವೇರಿಸಿದ್ದರು. ಅಧ್ಯಕ್ಷತೆಯನ್ನು ಸಾಹಿತಿ ಡಾ.ಹಾ.ಮಾ ನಾಯಕ ವಹಿಸಿದ್ದರು. ಜಾನಪದ ಗೋಷ್ಠಿಯಲ್ಲಿ ಜಾನಪದ ಕ್ಷೇತ್ರದಲ್ಲಿ ಇತ್ತೀಚಿನ ಸಾಧನೆ, ಜನಪದ ಕಲೆಗಳ ಸಂವರ್ಧನೆಯ ಹಾದಿ, ಜನಪದ ಭಾಷೆಯ ಸ್ವರೂಪ-ಇತಿ-ಮಿತಿ, ಜಾನಪದ ಮತ್ತು ಇತರೆ ಶಾಸ್ತ್ರಗಳು, ಗಮಕ ಮತ್ತು ಕೀರ್ತನೆ ಕುರಿತ ವಿಷಯಗಳು ಚರ್ಚಿತವಾಗಿದ್ದವು. ಮಹಿಳಾ ಗೋಷ್ಠಿಯಲ್ಲಿ ಆಧುನಿಕ ಕನ್ನಡ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ, ಇಂದಿನ ಲೇಖಕಿಯರ ಸಮಸ್ಯೆಗಳು, ಮಹಿಳೆ ಮತ್ತು ಇಂದಿನ ಶಿಕ್ಷಣ ವ್ಯವಸ್ಥೆ, ಮಹಿಳೆಯರ ಸಾಹಿತ್ಯ: ಅದರ ಇತಿ-ಮಿತಿ ಕುರಿತ ವಿಷಯಗಳು ಮಂಡನೆಯಾಗಿದ್ದು ವಿಶೇಷವೆನಿಸಿತ್ತು.
‘ಶಿಕ್ಷಣ ಮತ್ತು ಆಡಳಿತದಲ್ಲಿ ಕನ್ನಡ’ ಗೋಷ್ಠಿಯಲ್ಲಿ ‘ಶಿಕ್ಷಣ-ಸ್ನಾತಕೋತ್ತರ’, ‘ಶಿಕ್ಷಣ-ಶಾಲಾ ಕಾಲೇಜು’, ‘ನ್ಯಾಯಾಂಗದಲ್ಲಿ ಕನ್ನಡ ಆಡಳಿತ ಭಾಷೆ’ ವಿಷಯಗಳು ಮಂಡನೆಯಾಗಿದ್ದವು. ಅಂದಿನ ಸಮ್ಮೇಳನದಲ್ಲಿ ನಡೆದ ಕವಿಗೋಷ್ಠಿಯಲ್ಲಿ ಕೆ ಎಸ್ ನಿಸಾರ್‌ಅಹಮದ್, ಬನ್ನಂಜೆ ಗೋವಿಂದಾಚಾರ್ಯ, ದೊಡ್ಡರಂಗೇಗೌಡ, ಸುಜನಾ, ಎಸ್.ಆರ್ ಎಕ್ಕುಂಡಿ, ಜಯಂತ್ ಕಾಯ್ಕಿಣಿ ಅವರಂತಹ ಪ್ರಖ್ಯಾತರು ಭಾಗವಹಿಸಿದ್ದರು. ನಲವತ್ತೆಂಟನೇ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿನ ಸಂಚಿಕೆಯಾಗಿ ‘ಇಕ್ಷು ಕಾವೇರಿ’ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಗಿತ್ತು. ಕೆ.ಟಿ.ವೀರಪ್ಪ ಮತ್ತು ಸಿ.ಪಿ ಕೃಷ್ಣಕುಮಾರ್ ನೆನಪಿನ ಸಂಚಿಕೆಯ ಸಂಪಾದಕರಾಗಿದ್ದರು.
63ನೇ ಕನ್ನಡ ಸಾಹಿತ್ಯ ಸಮ್ಮೇಳನ
1994 ಫೆಬ್ರವರಿ 11, 12, 13ರಂದು ಮಂಡ್ಯದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ 63ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೊಂಡಿತ್ತು. ಮಹಾಕವಿ ಕುವೆಂಪು ಮಂಟಪದಲ್ಲಿ ನಡೆದ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ ಚದುರಂಗ ಆಯ್ಕೆಯಾಗಿದ್ದರು. ವೇದಿಕೆಗೆ ಕೆ ವಿ ಶಂಕರಗೌಡ, ಹಾಗೂ ಮಹಾದ್ವಾರಕ್ಕೆ ಶ್ರೀಕಂಠೇಶ ಗೌಡರ ಹೆಸರಿಡಲಾಗಿತ್ತು. ಉಳಿದ ದ್ವಾರಗಳಿಗೆ ಷಡಕ್ಷರಿ, ತ್ರಿವೇಣಿ, ಸಂಚಿ ಹೊನ್ನಮ್ಮ, ಎಂ.ಆರ್.ಶ್ರೀ, ಬಿ ವೆಂಕಟಾಚಾರ್ಯ, ಹೆಚ್.ಕೆ ವೀರಣ್ಣಗೌಡರ ಹೆಸರಿಡಲಾಗಿತ್ತು. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾಗಿದ್ದ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಧ್ವಜಾರೋಹಣ ನೆರವೇರಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಗೊ.ರು.ಚನ್ನಬಸಪ್ಪ ಪರಿಷತ್ ಧ್ವಜ ಹಾರಿಸಿದ್ದರು. ಅಂದು ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಂದಾ ಚಿತ್ರಮಂದಿರದ ಮುಂಭಾಗದಿಂದ ಆರಂಭವಾಗಿ ವಿ.ವಿ.ರಸ್ತೆ, ಕೆ.ಆರ್.ರಸ್ತೆ, ರಾಜೇಂದ್ರಪ್ರಸಾದ್ ರಸ್ತೆ ಮಾರ್ಗವಾಗಿ ಸಮ್ಮೇಳನದ ಮಂಟಪವನ್ನು ಸೇರಿತ್ತು. ಸಮ್ಮೇಳನದ ಉದ್ಘಾಟನೆಯನ್ನು ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ನೆರವೇರಿಸಿದ್ದರು. ‘ಸಿರಿಯೊಡಲು’ ಸ್ಮರಣ ಸಂಚಿಕೆಯನ್ನು ಉಪಮುಖ್ಯಮಂತ್ರಿ ಎಸ್.ಎಂ ಕೃಷ್ಣ ಬಿಡುಗಡೆಗೊಳಿಸಿದ್ದರು. ‘ಮಂಡ್ಯ ದರ್ಶನ’ ಕೃತಿಯನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಹೆಚ್ ವಿಶ್ವನಾಥ್ ಲೋಕಾರ್ಪಣೆ ಮಾಡಿದ್ದರು. ಇದೇ ವೇಳೆ ಸುವರ್ಣ ಮಂಡ್ಯ ಎಂಬ ಸಂಪುಟವೂ ಬಿಡುಗಡೆಗೊಂಡಿತ್ತು.
ನಾವು ಬಂದೇವ, ಸಮ್ಮೇಳನ ನೋಡಲಿಕ್ಕ: ನಾಡಿನ ಬರಹಗಾರರ ಸಂತಸದ ನುಡಿಗಳು!
ಗೋಷ್ಠಿಯಲ್ಲಿ ‘ಮಂಡ್ಯಪ್ರವೇಶ- ನೆಲದ ಸಿರಿ’ ವಿಷಯದಡಿ ಕೃಷಿ, ಕೈಗಾರಿಕೆ, ಜಾನಪದ ಸಂಪತ್ತು, ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಪತ್ತು, ‘ಕನ್ನಡ ನಾಡು- ಗಂಭೀರ ಸಮಸ್ಯೆಗಳು’ ಶೀರ್ಷಿಕೆಯಡಿ ಪ್ರಾಕೃತಿಕ ಸಂಪತ್ತು, ಕೈಗಾರಿಕೋದ್ಯಮ, ವಾಣಿಜ್ಯೋದ್ಯಮ, ಸಾಹಿತ್ಯ ಸಂವಾದ: ಜನಪ್ರಿಯ ಸಾಹಿತ್ಯ, ಸಾಹಿತ್ಯ ವಿಮರ್ಶೆಯ ಇತಿಮಿತಿಗಳ ಕುರಿತು ಚರ್ಚೆಗಳಾಗಿದ್ದವು. ಎರಡನೇ ದಿನದ ಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ-ಮುನ್ನೋಟ, ಜಾನಪದ-ಮುನ್ನೋಟ, ಕನ್ನಡ ಮಾಧ್ಯಮ-ತಾಂತ್ರಿಕ ಶಿಕ್ಷಣ, ವಿಷಯಗಳು ಮಂಡನೆಯಾಗಿದ್ದವು. ಮೂರನೇ ದಿನದ ಕವಿಗೋಷ್ಠಿಯಲ್ಲಿ ಹೊಸ ಶೋಧಗಳು ಶೀರ್ಷಿಕೆಯಲ್ಲಿ ‘ಕನಕದಾಸರು: ಹೊಸ ಚಾರಿತ್ರಿಕ ಸಂಗತಿಗಳು‘, ‘ಜೋಗುಳಗಳ ವೈಜ್ಞಾನಿಕ ಆಯಾಮಗಳು’, ‘ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯ ಪರಿಷತ್ತು’, ‘ಹಲ್ಮಿಡಿ ಶಾಸನದಲ್ಲಿ ಜ್ಯೋತಿ ಸಂಕೇತ ಶೋಧನೆ’, ‘ಅಲಕ್ಷಿತ ಕನ್ನಡ ಸಾಹಿತ್ಯ ವಿಷಯಗಳು’ ಚರ್ಚೆಯಾಗಿದ್ದವು. ಅಂದಿನ ಸಾಹಿತ್ಯ ಸಮ್ಮೇಳನದಲ್ಲಿ ಡಾ.ಪುಟ್ಟರಾಜ ಗವಾಯಿ, ಡಾ.ಡಿ.ಎಂ.ನಂಜುಂಡಪ್ಪ, ಹರಿಕೃಷ್ಣ ಪುನರೂರು, ಎಂ.ಬಿ.ಸಾಮಗ, ಸೀತಾಸುತ, ತ.ಮ.ವಿಜಯಭಾಸ್ಕರ್, ಜಿ.ಎಸ್.ದೀಕ್ಷಿತ್ ಸೇರಿದಂತೆ ಹಲವು ಗಣ್ಯರನ್ನು ಸನ್ಮಾನಿಸಲಾಗಿತ್ತು. ಕೊನೆಯ ದಿನದ ಗೀತ ಸಂಗೀತ ಕಾರ್ಯಕ್ರಮದಲ್ಲಿ ಕೆ.ಎಸ್.ನಿಸಾರ್ ಅಹಮದ್, ಸಾ.ಶಿ.ಮರುಳಯ್ಯ, ಸಿ.ಪಿ.ಕೃಷ್ಣಕುಮಾರ್, ಡಾ.ಚನ್ನಣ್ಣ ವಾಲೀಕಾರ, ಕಯ್ಯಾರ ಕಿಞ್ಞಣ್ಣ ರೈ, ದೊಡ್ಡರಂಗೇಗೌಡ, ಯಶವಂತ ಹಳಬಂಡಿ, ಮೈಸೂರು ಅನಂತಸ್ವಾಮಿ, ಸಿ.ಅಶ್ವಥ್, ಶಿವಮೊಗ್ಗ ಸುಬ್ಬಣ್ಣ, ಜಿ.ವಿ.ಅತ್ರಿ, ವೈ.ಕೆ ಮುದ್ದುಕೃಷ್ಣ, ಕಸ್ತೂರಿ ಶಂಕರ್, ಮಂಜುಳಾ ಗುರುರಾಜ್, ಬಿ.ಕೆ ಸುಮಿತ್ರಾ, ರತ್ನಮಾಲಾ ಪ್ರಕಾಶ್ ಅವರಿಂದ ಗೀತ-ಸಂಗೀತ ಏರ್ಪಡಿಸಲಾಗಿತ್ತು.
20 ಲಕ್ಷ ರು. ಉಳಿತಾಯ
63ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ 7 ರಿಂದ 8 ಲಕ್ಷ ರು. ಹಣವನ್ನು ಮಾತ್ರ ನೀಡಿತ್ತು. ಆ ಹಣದಲ್ಲಿ ಸಮ್ಮೇಳನ ನಡೆಸುವುದು ಕಷ್ಟಸಾಧ್ಯವಾಗಿತ್ತು. ಸಮ್ಮೇಳನಕ್ಕೆ ಸ್ವಾಗತ ಸಮಿತಿ ಅಧ್ಯಕ್ಷರಾಗಿದ್ದ ಜಿ ಮಾದೇಗೌಡರು ಮತ್ತು ಪ್ರಧಾನ ಪೋಷಕರಾಗಿದ್ದ ಎಸ್.ಎಂ.ಕೃಷ್ಣ ಅವರು 42 ಲಕ್ಷ ರು.ಗಳನ್ನು ಸಂಗ್ರಹಿಸಿ ಕೊಟ್ಟಿದ್ದರು. ಸಮ್ಮೇಳನಕ್ಕೆ 22.60 ಲಕ್ಷ ರು. ಮಾತ್ರ ಖರ್ಚಾಗಿತ್ತು. ಉಳಿದ 20 ಲಕ್ಷ ರು. ಹಣದಲ್ಲಿ ಅರ್ಧಕ್ಕೆ ನಿಂತಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರ ನಿರ್ಮಾಣಕ್ಕೆ 8.50 ಲಕ್ಷ ರು., ಕುವೆಂಪು ಪ್ರತಿಮೆಗೆ 4 ಲಕ್ಷ ರು., ಕರ್ನಾಟಕ ಜಾನಪದ ಲೋಕಕ್ಕೆ 1 ಲಕ್ಷ ರು., ಉಳಿದ 6.50 ಲಕ್ಷ ರು. ವೆಚ್ಚದಲ್ಲಿ ಕನ್ನಡ ಭವನ ನಿರ್ಮಿಸಲಾಗಿತ್ತು. ಇದೀಗ ಮೂರನೇ ಬಾರಿಗೆ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಕ್ಕರೆ ನಗರಿಯಲ್ಲಿ ಆಯೋಜನೆಗೊಂಡಿದೆ. ಕೆಲವೇ ಲಕ್ಷಗಳಲ್ಲಿ ಮುಗಿಯುತ್ತಿದ್ದ ಸಾಹಿತ್ಯ ಸಮ್ಮೇಳನಕ್ಕೆ ಈಗ ಕೋಟಿಗಟ್ಟಲೆ ಹಣ ಖರ್ಚು ಮಾಡಲಾಗುತ್ತಿದೆ. ಸಮ್ಮೇಳನಗಳು ನಿರಂತರವಾಗಿ ನಡೆದರೂ ಪ್ರಸ್ತುತ ಕಾಲಘಟ್ಟದಲ್ಲಿ ಕನ್ನಡದ ಉಳಿವಿನ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ.