Asianet Suvarna News Asianet Suvarna News

ಕರ್ನಾಟಕ ಬಜೆಟ್‌ಗೆ ಭರದ ಸಿದ್ಧತೆ ಆರಂಭ

ಜ.23ರಿಂದ 25ರವರೆಗೆ ಇಲಾಖಾವಾರು ಬಜೆಟ್‌ ಪೂರ್ವಭಾವಿ ಚರ್ಚೆ, ಹಣಕಾಸು ಇಲಾಖೆ ಎಸಿಎಸ್‌ ನೇತೃತ್ವದಲ್ಲಿ ಸಭೆ; ನಂತರ ಸಿಎಂ ಸಭೆ. 

Preparation for the Karnataka Budget grg
Author
First Published Jan 20, 2023, 1:30 AM IST

ಬೆಂಗಳೂರು(ಜ.20): ರಾಜ್ಯ ವಿಧಾನಸಭಾ ಚುನಾವಣಾ ಸಿದ್ಧತೆಯ ನಡುವೆಯೇ 2023-24ನೇ ಸಾಲಿನ ರಾಜ್ಯ ಬಜೆಟ್‌ ಮಂಡನೆಗೂ ಸರ್ಕಾರ ಸಿದ್ಧತೆ ಆರಂಭಿಸಿದೆ. ಜ.23ರಿಂದ 25ರವರೆಗೆ ದಿನವಿಡೀ ಇಲಾಖಾವಾರು ಬಜೆಟ್‌ ಪೂರ್ವಭಾವಿ ಚರ್ಚೆ ನಡೆಸಲು ವೇಳಾಪಟ್ಟಿ ನಿಗದಿಪಡಿಸಲಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಸದ್ಯದಲ್ಲೇ ಇಲಾಖಾವಾರು ಬಜೆಟ್‌ ಪೂರ್ವಭಾವಿ ಸಭೆ ನಿಗದಿಯಾಗಲಿದೆ. ಈ ಸಭೆಯಲ್ಲಿ ಇಲಾಖೆಗಳು ಗಮನಹರಿಸಬೇಕಾದ ಅಂಶಗಳ ಬಗ್ಗೆ ಪೂರ್ವಭಾವಿ ಚರ್ಚೆ ಹಾಗೂ ಅಗತ್ಯ ಸಿದ್ಧತೆ ಕೈಗೊಳ್ಳಲು ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಐಎನ್‌ಎಸ್‌ ಪ್ರಸಾದ್‌ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಪೂರ್ವಭಾವಿ ಚರ್ಚೆಗೆ ಜ.23ರಿಂದ 25ರವರೆಗೆ ಸಮಯ ನಿಗದಿಪಡಿಸಲಾಗಿದೆ. ನಿತ್ಯ ಬೆಳಗ್ಗೆ 10.30ರಿಂದ ಸಂಜೆ 6 ಗಂಟೆವರೆಗೂ ಸಭೆಗಳು ನಡೆಯಲಿವೆ. ಸಭೆಗೆ ನಿಗದಿತ ದಿನ ಹಾಗೂ ಸಮಯದಲ್ಲಿ ಆಯಾ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳು ಅವಶ್ಯಕ ಮಾಹಿತಿಗಳು ಹಾಗೂ ಪ್ರಾತ್ಯಕ್ಷಿಕೆಯೊಂದಿಗೆ ಹಾಜರಾಗಲು ಆರ್ಥಿಕ ಇಲಾಖೆ ಸೂಚಿಸಿದೆ.

ಬಜೆಟ್‌ ಅಧಿವೇಶನ: ನೂತನ ಸಂಸತ್ತಲ್ಲಿ ರಾಷ್ಟ್ರಪತಿ ಭಾಷಣ..?

ವೇಳಾಪಟ್ಟಿ ಪ್ರಕಾರ, ಜ.23ರಂದು ಲೋಕೋಪಯೋಗಿ, ಕೌಶಲ್ಯಾಭಿವೃದ್ಧಿ, ಜಲಸಂಪನ್ಮೂಲ, ನಗರಾಭಿವೃದ್ಧಿ, ಸಣ್ಣ ನೀರಾವರಿ, ಸಹಕಾರ, ವಸತಿ, ಒಳಾಡಳಿತ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಗಳ ಅಧಿಕಾರಿಗಳೊಂದಿಗೆ ಬಜೆಟ್‌ ಪೂರ್ವಭಾವಿ ಚರ್ಚೆ ನಡೆಯಲಿದೆ.

ಜ.24ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಮುಜರಾಯಿ, ವೈದ್ಯಕೀಯ ಶಿಕ್ಷಣ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ, ಇಂಧನ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತ ಕಲ್ಯಾಣ, ಸಮಾಜ ಕಲ್ಯಾಣ, ವಾಣಿಜ್ಯ ಮತ್ತು ಕೈಗಾರಿಕೆ, ಮಾಹಿತಿ ತಂತ್ರಜ್ಞಾನ, ಅರಣ್ಯ, ಕಾನೂನು ಮತ್ತು ಸಂಸದೀಯ ವ್ಯವಹಾರ ಇಲಾಖೆಗಳು, ಜ.25ರಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ, ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ, ಪಶುಸಂಗೋಪನೆ ಮತ್ತು ಮೀನುಗಾರಿಕೆ, ಯೋಜನೆ, ಕಾರ್ಯಕ್ರಮ ಮತ್ತು ಸಾಂಖ್ಯಿಕ, ಯುವ ಸಬಲೀಕರಣ ಮತ್ತು ಕ್ರೀಡಾ, ಸಾರಿಗೆ, ಕಾರ್ಮಿಕ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಆಹಾರ ಮತ್ತು ನಾಗರಿಕ ಸರಬರಾಜು, ಕಂದಾಯ, ಮೂಲಭೂತ ಸೌಲಭ್ಯ ಮತ್ತು ಬಂದರು, ಒಳನಾಡು ಜಲಸಾರಿಗೆ ಇಲಾಖೆಗಳೊಂದಿಗೆ ಹಣಕಾಸು ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಅವರು ಪೂರ್ವಭಾವಿ ಚರ್ಚೆ ನಡೆಸಲಿದ್ದಾರೆ.

Follow Us:
Download App:
  • android
  • ios