ನವದೆಹಲಿ (ಜ. 03): ಮುಂಗಾರು ಮಳೆ ಅಂತ್ಯದ ನಂತರ ಅಕ್ಟೋಬರ್‌ನಿಂದ ಡಿಸೆಂಬರ್‌ ಅಂತ್ಯದವರೆಗೆ ಸುರಿಯುವ ಹಿಂಗಾರು ಹಂಗಾಮು ಅಂತ್ಯಗೊಂಡಿದೆ. ಮುಂಗಾರಿನಂತೆ, ಹಿಂಗಾರು ಕೂಡಾ ಉತ್ತಮವಾಗಿದ್ದು, ಶೇ.30 ರಷ್ಟುಹೆಚ್ಚು ಮಳೆ ಸುರಿಸಿದೆ.

ಹಿಂಗಾರು ಮಳೆಯ ಮೇಲೆಯೇ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕದ ಕೆಲವು ಭಾಗಗಗಳು ಅವಲಂಬಿತವಾಗಿವೆ. ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ ಹಾಗೂ ಈಶಾನ್ಯದ ಕೆಲವು ರಾಜ್ಯಗಳಲ್ಲಿ ಈ ವೇಳೆ ಹಿಮಪಾತ ಉಂಟಾಗುತ್ತದೆ.

ಗೋವಾಕ್ಕೆ ಹೊರಟಿದ್ದ ವಿಮಾನ ಬೆಂಗ್ಳೂರಲ್ಲಿ ತುರ್ತು ಭೂಸ್ಪರ್ಶ

ಹಿಂಗಾರು ಮಳೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಸುರಿದಿದ್ದು ಲಕ್ಷದ್ವೀಪದಲ್ಲಿ. ಶೇ.172ರಷ್ಟುಪ್ರಮಾಣದಲ್ಲಿ ಇಲ್ಲಿ ಹಿಂಗಾರು ಮಳೆ ಸುರಿದಿದೆ. ಕರ್ನಾಟಕದಲ್ಲಿ ಕೂಡ ಶೇ.70ರಷ್ಟುಅಧಿಕ ಮಳೆ ಬಿದ್ದಿದೆ. ಕೇರಳ ಹಾಗೂ ಮಾಹೆಯಲ್ಲಿ ಡಿಸೆಂಬರ್‌ ಅಂತ್ಯದ ತನಕ ಶೇ.27ರಷ್ಟುಅಧಿಕ ಮಳೆ ಬಿದ್ದಿದೆ.

ತಮಿಳುನಾಡು ಶೇ.1ರಷ್ಟುಅಧಿಕ ಮಳೆ ಪಡೆದಿದ್ದರೆ, ಪುದುಚೇರಿ (-17%), ತೆಲಂಗಾಣ ಹಾಗೂ ಆಂಧ್ರಪ್ರದೇಶ (-8%) ಕಡಿಮೆ ಮಳೆ ಅನುಭವಿಸಿವೆ. ಅಲ್ಲದೆ, ಈ ಅವಧಿಯಲ್ಲಿ ಪ್ರಮುಖ 36 ಜಲಾಶಯಗಳು ಶೇ.76ರಷ್ಟುತುಂಬಿಕೊಂಡಿವೆ. ಇದೂ ಕೂಡ ಸಮಾಧಾನ ತರುವ ಅಂಶವಾಗಿದೆ.

ಜೂನ್‌ 1ರಿಂದ ಆರಂಭವಾಗಿ ಸೆ.30ರವರೆಗೆ ಸುರಿಯುವ ಮುಂಗಾರು, ಈ ಅವಧಿಯಲ್ಲಿ ಈ ವರ್ಷ ಸಾಮಾನ್ಯ ಸರಾಸರಿಗಿಂತ ಶೇ.9ರಷ್ಟುಹೆಚ್ಚು ಮಳೆ ಸುರಿಸಿದೆ.