ಪ್ರಯಾಗ್‌ರಾಜ್‌ನ ಮಹಾಕುಂಭ ಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಬೆಳಗಾವಿಯ ತಾಯಿ-ಮಗಳು ಸಾವನ್ನಪ್ಪಿದ್ದಾರೆ. ಸಾಯಿರಥ ಟ್ರಾವೆಲ್ ಏಜೆನ್ಸಿ ಮೂಲಕ ಕುಂಭಮೇಳಕ್ಕೆ ತೆರಳಿದ್ದ ಇವರು, ಸ್ನಾನಕ್ಕೆ ಹೋಗಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಬೆಳಗಾವಿ (ಜ.29): ಪ್ರಯಾಗ್‌ರಾಜ್‌ನ ಮಹಾಕುಂಭ ಮೇಳದಲ್ಲಿ ಸಂಭವಿಸಿದ ಇಂದು ಬೆಳಗ್ಗಿನ ಜಾವ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ಸುಮಾರು 10 ಜನರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಮೃತರ ಸಂಬಂಧಿಕರು ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ಮಾತನಾಡಿ ಖಚಿತಪಡಿಸಿದ್ದಾರೆ.
ಕುಂಭಮೇಳದಲ್ಲಿ ಕಾಲ್ತುಳಿತ ಪ್ರಕರಣದಲ್ಲಿ ಬೆಳಗಾವಿಯ ತಾಯಿ-ಮಗಳು ದುರಂತ ಸಾವಿಗೀಡಾಗಿದ್ದಾರೆ. ಈ ಘಟನೆ ಬಳಿಕ ಇಂದು ಬೆಳಗ್ಗೆ ಪ್ರಯಾಗ್‌ರಾಜ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಇವರನ್ನು ರವಾನಿಸಲಾಗಿದೆ. ಆದರೆ, ಇಬ್ಬರೂ ಚಿಕಿತ್ಸೆ ಫಲಕಾರಿ ಆಗದೇ ಮೃತಪಟ್ಟಿದ್ದಾರೆ. ಬೆಳಗಾವಿಯ ವಡಗಾವಿ ನಿವಾಸಿ ಜ್ಯೋತಿ ಹತ್ತರವಾಠ (50) ಹಾಗೂ ಅವರ ಮಗಳು ಮೇಘಾ ಹತ್ತರವಾಠ್ ಮೃತಪಟ್ಟಿದ್ದಾರೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಜ್ಯೋತಿ ಸಹೋದರ ಗುರುರಾಜ್ ಹುದ್ಧಾರ ಮಾಹಿತಿ ನೀಡಿದ್ದಾರೆ.
ಸಾಯಿರಥ ಟ್ರಾವೆಲ್ ಏಜೆನ್ಸಿ ಮೂಲಕ ಮಹಾ ಕುಂಭಮೇಳಕ್ಕೆ ಹೋಗಿದ್ದ ತಾಯಿ ಜ್ಯೋತಿ ಮತ್ತು ಮಗಳು ಮೇಘಾ ಒಬ್ಬರೂ ಇಂದು ಬೆಳಗ್ಗೆ ಸ್ನಾನಕ್ಕೆ ಹೋಗಿದ್ದಾರೆ. ಸುದ್ದಿ ವಾಹಿನಿಗಳಲ್ಲಿ ಮಹಾ ಕುಂಭಮೇಳದಲ್ಲಿ ಕಾಲ್ತುಳಿತ ಉಂಟಾಗಿ 10 ಜನರು ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಪ್ರಸಾರ ಆಗುತ್ತಿದ್ದಂತೆಯೇ ಬೆಳಗ್ಗೆಯಿಂದಲೂ ಈ ಇಬ್ಬರಿಗೂ ಬೆಳಗಾವಿಯಲ್ಲಿದ್ದ ಅವರ ಮನೆಯವರು ಕರೆ ಮಾಡಿದ್ದಾರೆ. ಆದರೆ, ಇವರ ಮೊಬೈಲ್ ಫೋನ್ ರಿಂಗ್ ಆಗುತ್ತಿದ್ದರೂ ರಿಸೀವ್ ಮಾಡಿರಲಿಲ್ಲ. ಇದರಿಂದ ಅವರ ಕುಟುಂಬ ಸದಸ್ಯರು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಆದರೆ, ಇದೀಗ ಟ್ರಾವೆಲ್ ಏಜೆನ್ಸಿ ಸಿಬ್ಬಂದಿಯಿಂದ ತಾಯಿ-ಮಗಳು ಇಬ್ಬರೂ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕಾಲ್ತುಳಿತ ನಂತರ ಮಹಾಕುಂಭ ಮೇಳದಲ್ಲಿ ಬಾಲಿವುಡ್ ನಟಿ ಹೇಮಾ ಮಾಲಿನಿ ಸ್ನಾನ
ಸಾಯಿರಥ ಟ್ರಾವೆಲ್ ಏಜೆನ್ಸಿ ವತಿಯಿಂದ ಪ್ರಯಾಗರಾಜ್‌ಗೆ ತೆರಳಿದ್ದ 13 ಜನರು ಕೂಡ ಬೆಳಗ್ಗೆ ಸ್ನಾನ ಮಾಡಲು ಹೊರಟಿದ್ದರು. ಆದರೆ, ಹೆಚ್ಚಿನ ಜನಸಂದಣಿ ಆಗುತ್ತಿದ್ದಂತೆ ಗುಂಪಾಗಿದ್ದ ಎಲ್ಲರೂ ಚದುರಿ ಹೋಗಿದ್ದಾರೆ. ಇನ್ನು ಕರೆ ಮಾಡಿದರೂ ಒಬ್ಬರಿಗೊಬ್ಬರು ಸಂಪರ್ಕ ಮಾಡಲು ಸಾಧ್ಯವಾಗಿಲ್ಲ. ಆದರೆ, ಜ್ಯೋತಿ ಮತ್ತು ಮೇಘಾ ಅವರಿದ್ದ ಸ್ಥಳದಲ್ಲಿ ಕಾಲ್ತುಳಿತ ಸಂಭವಿಸಿದೆ. ಕೂಡಲೇ ಮೃತರನ್ನು ಮತ್ತು 50ಕ್ಕೂ ಅಧಿಕ ಗಾಯಾಳುಗಳನ್ನು ಹತ್ತಿರದ ಮೂರ್ನಾಲ್ಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾರು ಯಾವ ಆಸ್ಪತ್ರೆಯಲ್ಲಿದ್ದಾರೆ ಎಂಬುದೇ ತಿಳಿದುಬಂದಿಲ್ಲ. ಮಧ್ಯಾಹ್ನದ ವೇಳೆಗೆ ಟ್ರಾವೆಲ್ ಏಜೆನ್ಸಿ ಸಿಬ್ಬಂದಿ 3ನೇ ಆಸ್ಪತ್ರೆಗೆ ಹೋಗಿ ಹುಡುಕಿದಾಗ ಅಲ್ಲಿ ಜ್ಯೋತಿ ಮತ್ತು ಅವರ ಮಗಳು ಮೇಘಾ ಮೃತಪಟ್ಟಿರುವುದನ್ನು ತಿಳಿದುಕೊಂಡಿದ್ದಾರೆ. ನಂತರ ಅವರ ಕುಟುಂಬ ಸದಸ್ಯರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
