ಕನ್ನಡ ಭಾಷೆಯ ಮೂಲದ ಬಗ್ಗೆ ಕಮಲ್ ಹಾಸನ್ ನೀಡಿರುವ ಹೇಳಿಕೆಯನ್ನು ಮಾಜಿ ಸಂಸದ ಪ್ರತಾಪ್ ಸಿಂಹ ಟೀಕಿಸಿದ್ದಾರೆ. ಕನ್ನಡ ನಮ್ಮ ಅಸ್ಮಿತೆ, ಸಂಸ್ಕೃತಿ ಎಂದಿರುವ ಅವರು, ಕಮಲ್ ಹಾಸನ್ ಅವರನ್ನು ತಿರುಬೋಕಿ ಎಂದು ಕರೆದಿದ್ದಾರೆ. ಹಿಂದೂ ಮುಖಂಡರ ವಿರುದ್ಧದ ಕ್ರಮವನ್ನೂ ಪ್ರಶ್ನಿಸಿದ್ದಾರೆ.
ಬೆಂಗಳೂರು (ಜೂ.02): ಕನ್ನಡ ಭಾಷೆ ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ ನಟ ಕಮಲ್ ಹಾಸನ್ ಒಬ್ಬ ತಿರುಬೋಕಿ. ಅವನ ಹೇಳಿರುವ ಹೇಳಿಕೆಯನ್ನು ಬೆಂಬಲಿಸುವ ಇಲ್ಲಿನ ಕೆಲವರಿಗೆ ನಾಚಿಕೆ ಆಗಬೇಕು ಎಂದು ಮಾಜಿ ಸಂಸದ ಪ್ರತಾಪ ಸಿಂಹ ಟೀಕೆ ಮಾಡಿದ್ದಾರೆ.
ಕನ್ನಡ ಭಾಷೆ ಕುರಿತಾಗಿ ತಮಿಳು ನಟ ಕಮಲ್ ಹಾಸನ್ ನೀಡಿದ ವಿವಾದಾತ್ಮಕ ಹೇಳಿಕೆಯ ವಿರುದ್ಧ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ, ಕನ್ನಡ ಕೇವಲ ಭಾಷೆ ಅಲ್ಲ. ಅದು ನಮ್ಮ ಸಂಸ್ಕೃತಿ, ನಮ್ಮ ಸ್ವಂತಿಕೆ, ನಮ್ಮ ಅಸ್ಮಿತೆ. ಕನ್ನಡ ನೆಲದ ಭಾಷೆ, ಇದು ಮಣ್ಣಿನ ಭಾಷೆ. ಎಲ್ಲಿಂದಲ್ಲೋ ಬಂದ ಭಾಷೆ ಅಲ್ಲ. ಸಂಸ್ಕೃತ, ಮರಾಠಿ ಪದಗಳು ಕನ್ನಡದೊಳಗೆ ಸೇರಿಕೊಂಡಿವೆ. ಹಾಗಂತ ಇದು ಯಾವುದು ಭಾಷೆಯಿಂದ ಹುಟ್ಟಿದ ಭಾಷೆ ಅಲ್ಲ. ಕನ್ನಡಕ್ಕೆ ಅಪ್ಪ ಅಮ್ಮನನ್ನು ಹುಡುಕ ಬೇಡಿ. ತಮಿಳುನಾಡಿನಲ್ಲಿ ತಿರಸ್ಕೃತನಾಗಿರುವ ತಿರುಬೋಕಿ ಕಮಲ್ ಹಾಸನ್ ಕನ್ನಡದ ಬಗ್ಗೆ ಬಾಯಿಬಿಟ್ಟಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
ತಮಿಳುನಾಡಿನಲ್ಲಿ ತಿರಸ್ಕೃತ:
ತಮಿಳುನಾಡಿನಲ್ಲಿ ಕಮಲ್ ಹಾಸನ್ ನನ್ನು ವಿಂತಂಡವಾದಿ ಎಂದು ತಿರಸ್ಕಾರ ಮಾಡಿದ್ದಾರೆ. ಕಮಲ್ ಹಾಸನ್‌ನನ್ನು ತಮಿಳು ನಾಡಿನಲ್ಲಿ ತಿಪ್ಪೆಗೆ ಎಸೆದಿದ್ದಾರೆ. ಅವರ ಹೇಳಿಕೆಗಳಿಗೆ ಇಡೀ ತಮಿಳುನಾಡು ರಾಜ್ಯವೇ ತಲೆ ತಗ್ಗಿಸುತ್ತಿದೆ. ಆದರೆ, ಅವರ ಮಾತನ್ನು ವಿರೋಧಿಸಬೇಕಾದ ನಮ್ಮ ರಾಜ್ಯದಲ್ಲಿ ಕೆಲವು ಮಂದಿ ಅವರ ಮಾತುಗಳಿಗೆ ಬೆಂಬಲಿಸುತ್ತಿದ್ದಾರೆ. ಇದು ಅತ್ಯಂತ ಬೇಸರದ ವಿಷಯ' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರು ಸಂಸ್ಥಾನ ಕುರಿತು ಪ್ರತಿಕ್ರಿಯೆ:
ಕರವೇ ನಾಯಕ ನಾರಾಯಣ ಗೌಡ ಅವರು ಸಂಸದ ಯದುವೀರ್ ಅವರನ್ನು ‘ಸಂಸ್ಥಾನವಿಲ್ಲದ ರಾಜ’ ಎಂದು ಟೀಕಿಸಿದ್ದರ ಕುರಿತು ಪ್ರತಾಪ್ ಸಿಂಹ ಪ್ರತಿಕ್ರಿಯಿಸಿ, 'ಯದುವೀರ್ ಅವರ ರಾಜಕೀಯ ವಿಚಾರವಾಗಿ ಟೀಕೆ ಮಾಡಬಹುದು. ಆದರೆ ಅದಕ್ಕೆ ಮೈಸೂರು ಸಂಸ್ಥಾನವನ್ನು ಎಳೆದು ತರಬೇಡಿ. ಮೈಸೂರು ಸಂಸ್ಥಾನ ಕನ್ನಡ ಭಾಷೆ, ಸಂಸ್ಕೃತಿಗೆ ನೀಡಿರುವ ಕೊಡುಗೆ ಅಪಾರ. ನಾಲ್ವಡಿ ಕೃಷ್ಣರಾಜ ಒಡೆಯರ್‌ಗಳು ಕನ್ನಡದ ಭವಿಷ್ಯ ನಿರ್ಮಿಸಿದ ಮಹಾನ್ ದಾರ್ಶನಿಕರಾಗಿದ್ದಾರೆ. ಅವರ ವೈಭವವನ್ನು ಟೀಕೆಗೆ ಬಳಸಬೇಡಿ' ಎಂದು ಮನವಿ ಮಾಡಿದರು.
ಹಿಂದೂ ಮುಖಂಡರ ವಿರುದ್ಧ ಕ್ರಮ - ತೀವ್ರ ವಿರೋಧ:
ಮತ್ತೊಂದೆಡೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಮುಖಂಡ ಅರುಣ್ ಪುತ್ತಿಲ್ ಹಾಗೂ ಕಲಡ್ಕ ಪ್ರಭಾಕರ್ ವಿರುದ್ಧ ಎಫ್‌ಐಆರ್ ಹಾಗೂ ನೋಟೀಸ್ ವಿಚಾರದಲ್ಲೂ ಕಿಡಿಕಾರಿದರು. 'ದಕ್ಷಿಣ ಕನ್ನಡದಲ್ಲಿ ಹಿಂದೂಗಳಲ್ಲಿ ಭಯ ಮತ್ತು ಆತಂಕವಿದೆ. ಹಿಂದೂ ಮುಖಂಡರ ವಿರುದ್ಧ ಕ್ರಮ ತೆಗೆದುಕೊಳ್ಳುವ ಬದಲು, ಅವರನ್ನು ರಕ್ಷಿಸಬೇಕು. ನೋಟಿಸ್ ನೀಡಿರುವುದು ತಾಲಿಬಾನಿ ನಡೆ. ಪ್ರವೀಣ್ ನೆಟ್ಟರ್ ಹತ್ಯೆ ನಂತರ ಸರಿಯಾದ ಪಾಠ ಕಲಿಸುತ್ತಿದ್ದರೆ ಇವತ್ತು ಹಿಂದೂ ನಾಯಕರು ಹತ್ಯೆಗೀಡಾಗುತ್ತಿರಲಿಲ್ಲ. ಪಿಎಫ್‌ಐ, ಕೆಎಫ್‌ಡಿಗೆ ಬಿಗಿಯಾದ ಕ್ರಮಕೊಳ್ಳಬೇಕಾದ ಸಮಯದಲ್ಲಿ ಹಿಂದೂ ಸಂಘಟನೆಯ ಮುಖಂಡರಿಗೆ ದಂಡವಿಧಿ ಕ್ರಮ ತೆಗೆದುಕೊಳ್ಳುವುದು ಅಸಹ್ಯ' ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.


