ಪ್ರಜ್ವಲ್‌ ರೇವಣ್ಣ ಅವರು ಸಲ್ಲಿಸಿದ್ದ ಪ್ರತ್ಯೇಕ ಎರಡು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ. ಅರುಣ್ ಅವರ ಪೀಠ ಈ ಆದೇಶ ಮಾಡಿದೆ. ತಮ್ಮ ವಿರುದ್ಧದ ಪ್ರಕರಣ ಬಗ್ಗೆ 82ನೇ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ಪಕ್ಷಪಾತ ಮತ್ತು ಪೂರ್ವಾಗ್ರಹಪೀಡಿತ ಧೋರಣೆ ಹೊಂದಿದೆ.

ಬೆಂಗಳೂರು (ಸೆ.25): ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಹಾಗೂ ಮನೆಕೆಲಸದಾಕೆ ಮೇಲಿನ ಅ*ಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಂಬಂಧ ತಮ್ಮ ವಿರುದ್ಧ ಬೆಂಗಳೂರಿನ ಸಿಐಡಿ ಪೊಲೀಸ್‌ ಠಾಣೆ ಮತ್ತು ಹಾಸನದ ಹೊಳೆನರಸೀಪುರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಪ್ರತ್ಯೇಕ ಎರಡು ಪ್ರಕರಣಗಳ ವಿಚಾರಣೆಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಸೆಷನ್ಸ್ ನ್ಯಾಯಾಲಯದಿಂದ (82ನೇ ಹೆಚ್ಚುವರಿ ಸಿಟಿ ಸಿವಿಲ್‌ ಸೆಷನ್ಸ್‌ ಮತ್ತು ಸೆಷನ್ಸ್‌ ಕೋರ್ಟ್‌) ಬೇರೊಂದು ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾಯಿಸಲು ಕೋರಿ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ.

ಈ ಕುರಿತು ಪ್ರಜ್ವಲ್‌ ರೇವಣ್ಣ ಅವರು ಸಲ್ಲಿಸಿದ್ದ ಪ್ರತ್ಯೇಕ ಎರಡು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ. ಅರುಣ್ ಅವರ ಪೀಠ ಈ ಆದೇಶ ಮಾಡಿದೆ. ತಮ್ಮ ವಿರುದ್ಧದ ಪ್ರಕರಣ ಬಗ್ಗೆ 82ನೇ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ (ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್‌) ಪಕ್ಷಪಾತ ಮತ್ತು ಪೂರ್ವಾಗ್ರಹಪೀಡಿತ ಧೋರಣೆ ಹೊಂದಿದೆ. ನ್ಯಾಯಸಮ್ಮತವಾಗಿ ವಿಚಾರಣೆ ನಡೆಸುತ್ತಿಲ್ಲ. ಇದರಿಂದ ಬೇರೊಂದು ಸೆಷನ್ಸ್‌ ನ್ಯಾಯಾಲಯಕ್ಕೆ ವಿಚಾರಣೆಯನ್ನು ವರ್ಗಾಯಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿ ಬೆಂಗಳೂರು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯಕ್ಕೆ ಸೆ.20ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಪ್ರಜ್ವಲ್‌ ಹೈಕೋರ್ಟ್‌ ಮೊರೆ ಹೋಗಿದ್ದರು.

ದಿನನಿತ್ಯದ ಆಧಾರದಲ್ಲಿ ವಿಚಾರಣೆ

ಈ ಅರ್ಜಿಗಳನ್ನು ಬುಧವಾರ ವಿಚಾರಣೆ ನಡೆಸಿದ ಹೈಕೋರ್ಟ್‌, ವಿಚಾರಣಾ‌ ನ್ಯಾಯಾಲಯವು ದಿನನಿತ್ಯದ ಆಧಾರದಲ್ಲಿ ವಿಚಾರಣೆ ನಡೆಸಲು ಉದ್ದೇಶಿಸಿದಂತಿದೆ. ಈ ಪ್ರಕ್ರಿಯೆಯಲ್ಲಿ ಅರ್ಜಿದಾರರು ವಿಚಾರಣೆ ಮುಂದೂಡುವಂತೆ ಮಾಡಿರುವ ಮನವಿಗಳನ್ನು ತಿರಸ್ಕರಿಸಿರಬಹುದು. ತೀರ್ಪಿನಲ್ಲಿನ ಕೆಲವು ಅವಲೋಕನಗಳು ಕಠಿಣವೆಂದು ಅನಿಸಿದರೂ, ಅದನ್ನು ನ್ಯಾಯಾಧೀಶರ ಪಕ್ಷಪಾತ ನಡೆ ಎಂದು ಅರ್ಥೈಸಲಾಗದು. ಅರ್ಜಿದಾರರು ಪ್ರಕರಣದ ವಿಚಾರಣೆ ವಿಳಂಬ ಮಾಡಲು ಯತ್ನಿಸಿದ್ದು, ಇದನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿದೆ. ಇದನ್ನೇ ವರ್ಗಾವಣೆಗೆ ಆಧಾರವೆನ್ನುವುದಾದರೆ, ಬಹುತೇಕ ಎಲ್ಲ ಕ್ರಿಮಿನಲ್ ಪ್ರಕರಣಗಳಲ್ಲಿ ಇಂತಹ ಅರ್ಜಿಗಳು ಇರುತ್ತವೆ. ಇದನ್ನು‌ ನ್ಯಾಯಾಲಯ ಅನುಮತಿಸಲಾಗುವುದಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿದೆ.