Bengaluru potholes : ಮಳೆ, ಕಾಮಗಾರಿಗೆ ಗುಂಡಿ ಬೀಳುತ್ತಿವೆ ರಸ್ತೆಗಳು!
- ಮಳೆ, ಕಾಮಗಾರಿಗೆ ಗುಂಡಿ ಬೀಳುತ್ತಿವೆ ರಸ್ತೆಗಳು!
- -ನಗರದಲ್ಲಿ ಇತ್ತೀಚೆಗಷ್ಟೇ 11 ಸಾವಿರ ಗುಂಡಿ ಮುಚ್ಚಿದ್ದ ಬಿಬಿಎಂಪಿ
- ಮತ್ತೆ 4545 ರಸ್ತೆ ಗುಂಡಿ ಪತ್ತೆ
- ಗುಂಡಿ ಮುಚ್ಚುವ ತಲೆ ಬಿಸಿ
ಬೆಂಗಳೂರು (ಆ.23) : ರಾಜಧಾನಿ ಬೆಂಗಳೂರನ್ನು ರಸ್ತೆ ಗುಂಡಿಗಳಿಂದ ಮುಕ್ತಿ ಮಾಡಲು ಬಿಬಿಎಂಪಿ ಶತಾಯಗತಾಯ ಪ್ರಯತ್ನಿಸುತ್ತಿದ್ದರೂ ಸದ್ಯಕ್ಕೆ ಸಾಧ್ಯವಾಗುತ್ತಿಲ್ಲ. ಜೂನ್ ತಿಂಗಳವರೆಗೆ ಸುಮಾರು 11 ಸಾವಿರಕ್ಕೂ ಹೆಚ್ಚು ರಸ್ತೆ ಗುಂಡಿಗಳನ್ನು ಪಾಲಿಕೆ ಮುಚ್ಚಲಾಗಿತ್ತು. ಆದರೆ, ಮಳೆಯಿಂದಾಗಿ ಮತ್ತೆ ರಸ್ತೆ ಗುಂಡಿಗಳಾಗಿದ್ದು, ಹೊಸದಾಗಿ 4545 ರಸ್ತೆ ಗುಂಡಿಗಳನ್ನು ಪತ್ತೆ ಮಾಡಲಾಗಿದೆ. ಬೆಸ್ಕಾಂ(BESCOM), ಬೆಂಗಳೂರು ಜಲಮಂಡಳಿ(Bangalore Water Board)ಯ ವಿವಿಧ ಕಾಮಗಾರಿಗಾಗಿ ರಸ್ತೆ ಅಗೆಯುತ್ತಿರುವುದು ಮತ್ತು ರಸ್ತೆ ಗುಂಡಿಗಳಿಗೆ ತೇಪೆ ಹಾಕುತ್ತಿರುವುದು ಮತ್ತೆ ಮತ್ತೆ ರಸ್ತೆ ಗುಂಡಿಗಳಾಗಲು ಕಾರಣವಾಗಿದೆ. ಜೊತೆಗೆ ಮಳೆಯು ನಿರಂತರವಾಗಿ ಬರುತ್ತಿರುವುದರಿಂದ ರಸ್ತೆಗಳಲ್ಲಿ ಗುಂಡಿಗಳಾಗುತ್ತಿವೆ. ಈ ರಸ್ತೆ ಗುಂಡಿಗಳಿಂದಾಗಿ ವಾಹನ ಸವಾರರು ನಿತ್ಯವೂ ನರಕಯಾತನೆ ಅನುಭವಿಸುವುದು ತಪ್ಪುತ್ತಿಲ್ಲ. ಇದರಿಂದ ಅಪಘಾತಗಳು ಸಂಭವಿಸುತ್ತಿದ್ದು, ಅನೇಕ ಸಾವು, ನೋವಿಗೆ ಕಾರಣವಾಗುತ್ತಿದೆ.
ಏಕಾಂಗಿ ಹೋರಾಟಕ್ಕೆ ಮಣಿದ ಸರ್ಕಾರ: ರಸ್ತೆ ಗುಂಡಿ ಮುಚ್ಚುವ ಕೆಲಸ ಆರಂಭ
ಬೆಂಗಳೂರು ಸಂಚಾರಿ ಪೊಲೀಸರು ಜಿಯೋ ಮ್ಯಾಪ್ ಹಾಗೂ ಫಿಕ್ಸ್‌ಮೈ ಸ್ಟ್ರೀಟ್ ಮೂಲಕ ನಡೆಸಿರುವ ಸಮೀಕ್ಷೆಯಲ್ಲಿ ಬಿಬಿಎಂಪಿ ವ್ಯಾಪ್ತಿಯ ಎಲ್ಲ ವಲಯಗಳಲ್ಲಿ ಬರೋಬ್ಬರಿ 4545 ರಸ್ತೆ ಗುಂಡಿಗಳನ್ನು ಪತ್ತೆ ಮಾಡಿದ್ದಾರೆ. ಫಿಕ್ಸ್‌ಮೈ ಸ್ಟ್ರೀಟ್ ಆ್ಯಪ್‌ಗೆ ಜನರು ಕಳುಹಿಸಿಕೊಟ್ಟಿರುವ ರಸ್ತೆ ಗುಂಡಿಗಳ ಲೆಕ್ಕ ನೋಡಿ ಬಿಬಿಎಂಪಿ ಅಧಿಕಾರಿಗಳ ತಲೆ ಬಿಸಿಯಾಗಿದೆ. ರಸ್ತೆಗುಂಡಿ ಮುಕ್ತವಾಗಿ ಮಾಡುವುದು ಹೇಗೆಂಬುದು ಗೊತ್ತಾಗುತ್ತಿಲ್ಲ. ಮಳೆಯಿಂದ ರಸ್ತೆ ಗುಂಡಿಗಳಾಗುತ್ತಿವೆ. ಜೊತೆಗೆ ವಾಹನಗಳ ನಿರಂತರ ಸಂಚಾರದಿಂದ ಈಗಾಗಲೇ ಮುಚ್ಚಲಾದ ರಸ್ತೆ ಗುಂಡಿಗಳು ಪುನಃ ಬಾಯ್ತೆರೆದುಕೊಂಡಿವೆ. ಸದ್ಯ ಮಳೆ ನಿಲ್ಲದೇ ರಸ್ತೆ ಗುಂಡಿ ಮುಚ್ಚುವುದು ಕಷ್ಟಎನ್ನುತ್ತಿದ್ದಾರೆ ಅಧಿಕಾರಿಗಳು.
ಬಿಬಿಎಂಪಿ ವ್ಯಾಪ್ತಿಯಲ್ಲಿ 1090 ರಸ್ತೆ ಗುಂಡಿಗಳನ್ನು ಪತ್ತೆ ಮಾಡಿದ್ದು, ಈ ಪೈಕಿ 643 ಗುಂಡಿಗಳನ್ನು ಮುಚ್ಚಲಾಗಿದೆ. 447 ರಸ್ತೆ ಗುಂಡಿಗಳು ಮುಚ್ಚಲು ಬಾಕಿ ಇವೆ. ರಸ್ತೆ ಮೂಲಸೌಕರ್ಯದ ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ಈವರೆಗೆ 335 ರಸ್ತೆ ಗುಂಡಿಗಳಾಗಿದ್ದು, 306 ಗುಂಡಿಗಳನ್ನು ಮುಚ್ಚಲಾಗಿದೆ. 29 ಗುಂಡಿಗಳು ಮುಚ್ಚಬೇಕಿದೆ. ಎಂಟು ವಲಯಗಳ ವಿವಿಧ ವಾರ್ಡ್‌ಗಳಲ್ಲಿ 547 ರಸ್ತೆ ಗುಂಡಿಗಳ ಪೈಕಿ 210 ಮುಚ್ಚಿದ್ದು, 337 ರಸ್ತೆ ಗುಂಡಿಗಳು ಮುಚ್ಚಲು ಬಾಕಿ ಇವೆ.
ಬಿಎಂಆರ್‌ಸಿಎಲ್ ಕಾಮಗಾರಿ ನಡೆಯುತ್ತಿರುವ ಕಡೆಗಳಲ್ಲಿ 51 ರಸ್ತೆ ಗುಂಡಿಗಳನ್ನು ಪತ್ತೆ ಮಾಡಿದ್ದು, ಈ ಪೈಕಿ 46 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದ್ದು 4 ಕಡೆಗಳಲ್ಲಿ ಬಾಕಿ ಇದೆ.
ಆಗಸ್ಟ್ 20ರವರೆಗೆ 4545 ರಸ್ತೆ ಗುಂಡಿಗಳ ಪೈಕಿ ಈವರೆಗೆ ಒಟ್ಟು 3905 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. ಬಿಬಿಎಂಪಿ ಹೊರ ವಲಯದ 193 ಮತ್ತು ಮುಚ್ಚಬೇಕಿರುವ 447 ಸೇರಿದಂತೆ 640 ರಸ್ತೆ ಗುಂಡಿಗಳು ಮುಚ್ಚಲು ಬಾಕಿ ಉಳಿದಿವೆ ಎಂದು ಬಿಬಿಎಂಪಿ ರಸ್ತೆ ಮತ್ತು ಮೂಲ ಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್ ಪ್ರಹ್ಲಾದ್ ಅವರು ‘ಕನ್ನಡ ಪ್ರಭ’ಕ್ಕೆ ತಿಳಿಸಿದರು.
ಭಾರೀ ಮಳೆ: ಬೆಂಗ್ಳೂರಲ್ಲಿ ಮತ್ತೆ ರಸ್ತೆ ಗುಂಡಿ ಹೆಚ್ಚಳ
ಆರ್‌ಆರ್ ನಗರದಲ್ಲಿ ಹೆಚ್ಚು ಗುಂಡಿ: ಆರ್‌ಆರ್ ನಗರ(RR Nagar) 1068, ಬೊಮ್ಮನಹಳ್ಳಿ(Bommanahalli) ವಲಯ 1076, ದಾಸರಹಳ್ಳಿ(Dasarahalli)867, ಪೂರ್ವ 566, ದಕ್ಷಿಣ 414, ಮಹದೇವಪುರ 329, ಪಶ್ಚಿಮದಲ್ಲಿ 225 ರಸ್ತೆ ಗುಂಡಿಗಳು ಇವೆ. ಬೆಂಗಳೂರಿನ 5 ವಿಧಾನಸಭಾ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಯನ್ನು ಮುಚ್ಚಲು ಗುತ್ತಿಗೆದಾರರಿಗೆ ಕಾರ್ಯಾದೇಶವನ್ನು ನೀಡಲಾಗಿದೆ. ಉಳಿದ 22 ಕಡೆ ಪಾಲಿಕೆಯಿಂದಲೇ ರಸ್ತೆ ಗುಂಡಿಗಳನ್ನು ಮುಚ್ಚಲು ತೀರ್ಮಾನ ಮಾಡಲಾಗಿದೆ ಎಂದು ಪ್ರಹ್ಲಾದ್ ತಿಳಿಸಿದ್ದಾರೆ.