ಏಕಾಂಗಿ ಹೋರಾಟಕ್ಕೆ ಮಣಿದ ಸರ್ಕಾರ: ರಸ್ತೆ ಗುಂಡಿ ಮುಚ್ಚುವ ಕೆಲಸ ಆರಂಭ
- ಏಕಾಂಗಿ ಹೋರಾಟಕ್ಕೆ ಮಣಿದ ಸರ್ಕಾರ: ರಸ್ತೆ ಗುಂಡಿ ಮುಚ್ಚುವ ಕೆಲಸ ಆರಂಭ
- ಸ್ನೇಹಿತನ ಸಾವಿನ ನ್ಯಾಯಕ್ಕೆ ಆಗ್ರಹಿಸಿ ಹೋರಾಟ ಆರಂಭಿಸಿದ್ದ ಲಿಖಿತ್ ರೈ
(ಮಂಗಳೂರು ಆ.14) ರಸ್ತೆ ಗುಂಡಿಗಳ ಕಾರಣ ಆಗಿರುವ ತನ್ನ ಸ್ನೇಹಿತನ ಸಾವಿಗೆ ನ್ಯಾಯ ಕೋರಿ ಯುವಕ ಲಿಖಿತ್ ರೈ ಅವರು ಮಹಾನಗರ ಪಾಲಿಕೆ ಎದುರು ನಡೆಸಿದ ಏಕಾಂಗಿ ಹೋರಾಟ ಆಡಳಿತಕ್ಕೆ ಬಿಸಿ ಮುಟ್ಟಿಸಿದ್ದು, ಕೊನೆಗೂ ಹೋರಾಟ ಫಲನೀಡಿದೆ. ಶುಕ್ರವಾರ ಸಂಜೆಯಿಂದಲೇ ಹೆದ್ದಾರಿ ಗುಂಡಿ ಮುಚ್ಚುವ ಕಾಮಗಾರಿ ಆರಂಭವಾಗಿದೆ. ರಾಷ್ಟ್ರೀಯ ಹೆದ್ದಾರಿ 73ರ ಬಿಕರ್ನಕಟ್ಟೆಸಮೀಪದ ಕಂಡೆಟ್ಟು ಕ್ರಾಸ್ ಬಳಿ ಆ.5ರಂದು ನಡೆದ ರಸ್ತೆ ಅಪಘಾತದಲ್ಲಿ ಲಿಖಿತ್ ಅವರ ಗೆಳೆಯ ಆತೀಷ್ ಸಾವಿಗೀಡಾಗಿದ್ದರು. ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದ ಆತೀಷ್, ಮಳೆನೀರು ತುಂಬಿದ್ದ ಹೊಂಡವನ್ನು ಗಮನಿಸದೆ, ಕೊನೆ ಕ್ಷಣದಲ್ಲಿ ಹೊಂಡ ತಪ್ಪಿಸಲು ಹೋಗಿ ಸ್ಕೂಟರ್ ಡಿವೈಡರ್‌ಗೆ ಡಿಕ್ಕಿಯಾಗಿ ದಾರುಣವಾಗಿ ಸಾವಿಗೀಡಾಗಿದ್ದರು.
ಈ ಅಪಘಾತಕ್ಕೆ ಹೆದ್ದಾರಿಯ ಗುಂಡಿಗಳೇ ಕಾರಣ ಎಂದು ಆರೋಪಿಸಿದ್ದ ಲಿಖಿತ್ ರೈ (Likhith rai)ಅವರು ಮಂಗಳೂರು ಮಹಾನಗರ ಪಾಲಿಕೆ(MYSURU CITY CORPORATION) ಕಚೇರಿ ಎದುರು ಏಕಾಂಗಿಯಾಗಿ ಪ್ಲೆಕಾರ್ಡ್(Placard) ಹಿಡಿದು ಪ್ರತಿಭಟಿಸಿ(Protest) ಆಕ್ರೋಶ ವ್ಯಕ್ತಪಡಿಸಿದ್ದರು. ಗುರುವಾರ ಮಾತ್ರವಲ್ಲದೆ, ಶುಕ್ರವಾರವೂ ಪ್ರತಿಭಟನೆ ನಡೆಸಿ ಜನರ ಗಮನ ಸೆಳೆದಿದ್ದರು. ಇದರೊಂದಿಗೆ ‘ಸುಗಮ ಸಂಚಾರಕ್ಕಾಗಿ ಉತ್ತಮ ರಸ್ತೆ ನಿರ್ಮಿಸಿ’ ಎಂಬ ಆಗ್ರಹದೊಂದಿಗೆ ನಾಗರಿಕರ ಸಹಕಾರದೊಂದಿಗೆ ‘ಪಾಥ್ ಹೋಲ್ಸ್ ಆಜಾದಿ’ ಎಂಬ ಅಭಿಯಾನವನ್ನು ಆರಂಭಿಸಿದ್ದ ಲಿಖಿತ್ ರೈ, ಬಂಟ್ವಾಳದಿಂದ ಸುರತ್ಕಲ್ ಎನ್‌ಐಟಿಕೆ ಟೋಲ್‌ಗೇಟ್‌ವರೆಗಿನ ಹೆದ್ದಾರಿ ಮಾತ್ರವಲ್ಲದೆ, ಪ್ರಮುಖ ರಸ್ತೆಗಳ ಗುಂಡಿಗಳನ್ನು ಮುಚ್ಚಿಸಲು ಜನಪ್ರತಿನಿಧಿಗಳು, ಅಧಿಕಾರಿಗಳು ಮುಂದಾಗಬೇಕು ಎಂದು ಒತ್ತಾಯಿಸಿದ್ದರು. ಈ ಹೋರಾಟದಿಂದ ಸಾಮಾಜಿಕ ಜಾಲತಾಣದಲ್ಲಿ ಜಿಲ್ಲೆಯ ರಸ್ತೆ ಪರಿಸ್ಥಿತಿಯ ಬಗ್ಗೆ ಆಕ್ರೋಶಗಳ ಮಹಾಪೂರವೇ ಹರಿದುಬಂದಿತ್ತು.
ಈ ಹೋರಾಟದ ಬಿಸಿ ಆಡಳಿತಕ್ಕೆ ತಲುಪಿದ್ದು, ಕೊನೆಗೂ ಹೆದ್ದಾರಿ ಇಲಾಖೆ ರಸ್ತೆ ಗುಂಡಿ ಮುಚ್ಚುವ ಕೆಲಸ ಆರಂಭಿಸಿದೆ. ಕೆಪಿಟಿ- ಪದುವಾ ಹೈಸ್ಕೂಲ್ ರಸ್ತೆಯಲ್ಲಿ ಒಂದು ಮಗ್ಗುಲಲ್ಲಿ ರಸ್ತೆ ಗುಂಡಿಗೆ ಡಾಮರಿಕರಣ ಪ್ರಗತಿಯಲ್ಲಿದೆ.