Asianet Suvarna News Asianet Suvarna News

ದತ್ತಪೀಠದ ರಸ್ತೆ ಗುಂಡಿಮಯ; ಗುದ್ದಲಿ, ಪಿಕಾಸಿ ಹಿಡಿದು ರಸ್ತೆ ರಿಪೇರಿಗೆ ನಿಂತ ಖಾಕಿ!

:ಹದಗೆಟ್ಟ ರಸ್ತೆಯಿಂದಾಗಿ ಪ್ರವಾಸಿಗರು ಅನುಭವಿಸುತ್ತಿದ್ದ ತೊಂದರೆಯನ್ನು ಗಮನಸಿದ ಪೊಲೀಸ್ ಸಿಬ್ಬಂದಿ ಹಾರೆ, ಪಿಕಾಸಿ ಹಿಡಿದು ರಸ್ತೆ ದುರಸ್ಥಿಗೆ ಮುಂದಾದ ಪ್ರಸಂಗ ಚಿಕ್ಕಮಗಳೂರು ಜಿಲ್ಲೆಯ  ದತ್ತಪೀಠದ ಪರಿಸರದಲ್ಲಿ ನಡೆದಿದೆ.

Potholes on Dattapeeth Road police repaired the road at chikkamagaluru viral news rav
Author
First Published Aug 13, 2023, 7:05 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು (ಆ.13) :ಹದಗೆಟ್ಟ ರಸ್ತೆಯಿಂದಾಗಿ ಪ್ರವಾಸಿಗರು ಅನುಭವಿಸುತ್ತಿದ್ದ ತೊಂದರೆಯನ್ನು ಗಮನಸಿದ ಪೊಲೀಸ್ ಸಿಬ್ಬಂದಿ ಹಾರೆ, ಪಿಕಾಸಿ ಹಿಡಿದು ರಸ್ತೆ ದುರಸ್ಥಿಗೆ ಮುಂದಾದ ಪ್ರಸಂಗ ಚಿಕ್ಕಮಗಳೂರು ಜಿಲ್ಲೆಯ  ದತ್ತಪೀಠದ ಪರಿಸರದಲ್ಲಿ ನಡೆದಿದೆ.

ದತ್ತಪೀಠದಿಂದ ಮಾಣಿಕ್ಯಾಧಾರಕ್ಕೆ ತೆರಳುವ ರಸ್ತೆ ತಗ್ಗು ಗುಂಡಿಗಳಿಂದ ಕೂಡಿದ್ದು, ವಾಹನ ಸಂಚಾರಕ್ಕೆ ತೀವ್ರ ತೊಡಕಾಗುತ್ತಿದೆ. ಇದರಿಂದ ಪದೇಪದೆ ಟ್ರಾಫಿಕ್ ಜಾಮ್(Traffic jam) ಉಂಟಾಗಿ ಪ್ರವಾಸಿಗರು ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ.ಇಂದು ವೀಕೆಂಡ್(Weekend) ಕಾರಣಕ್ಕೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು(Tourists) ಗಿರಿ ತಪ್ಪಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದಾರೆ. ಈ ಪೈಕಿ ದತ್ತಪೀಠದಿಂದ ಮಾಣಿಕ್ಯಾಧಾರಕ್ಕೂ ದೊಡ್ಡ ಸಂಖ್ಯೆಯಲ್ಲಿ ವಾಹನಗಳು ಆಗಮಿಸಿವೆ. ಆದರೆ ಈ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಆಳುದ್ದದ ಗುಂಡಿಗಳು ನಿರ್ಮಾಣವಾಗಿರುವುದರಿಂದ. ವಾಹನಗಳನ್ನು ಚಲಾಯಿಸುವುದೇ ಸವಾಲಿನ ಕೆಲಸವಾಗಿತ್ತು. ಇದನ್ನು ಗಮನಿಸಿದ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲಿಸ್ ಸಿಬ್ಬಂದಿ ಸ್ವತಃ ತಾವೇ ಹಾರೆ, ಗುದ್ದಲಿ ಹಿಡಿದು ರಸ್ತೆ ದುರಸ್ತಿಗೆ ನಿಂತರು.

ಕಾರು-ಕೆಎಸ್‌ಆರ್‌ಟಿಸಿ ಬಸ್ ನಡುವೆ ಭೀಕರ ಅಪಘಾತ: ತಾಯಿ ಮಗ ಸ್ಥಳದಲ್ಲೇ ಸಾವು!

ಪ್ರವಾಸಿಗರಿಂದ ಮೆಚ್ಚುಗೆ : 

ಪೊಲೀಸರ ಈ ಸ್ಪಂದನೆಯನ್ನು ಗಮನಿಸಿ ಪ್ರೇರೇಪಿತರಾದ ಇತರೆ ಕೆಲವು ಪ್ರವಾಸಿಗರು ಮತ್ತು ಟ್ಯಾಕ್ಸಿ ಚಾಲಕರು ಅವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಲ್ಲೆ ಅವರೊಂದಿಗೆ ತಾವೂ ಕೈಜೋಡಿಸಿದರು. ಹಲವು ಪ್ರವಾಸಿಗರು ಈ ದೃಶ್ಯವನ್ನು ಮೊಬೈಲ್‌ಗಳಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣ(Social media)ಗಳಲ್ಲಿ ಹಂಚಿಕೊಂಡರು. 

ಖಾಸಗಿಯವರ ಲಾಬಿ

ಈ ರಸ್ತೆ ಹದಗೆಟ್ಟು ವರ್ಷಗಳೇ ಕಳೆದರೂ ಸಂಬಂಧ ಪಟ್ಟವರು ದುರಸ್ತಿಗೆ ಮುಂದಾಗುತ್ತಿಲ್ಲ. ಇದರಿಂದ ಕಾರುಗಳಲ್ಲಿ ಬರುವ ಪ್ರವಾಸಿಗರು ಸುಲಲಿತವಾಗಿ ಮಾಣಿಕ್ಯಾಧಾರಕ್ಕೆ ಪ್ರಯಾಣಿಸುವುದು ದುಸ್ತರವಾಗಿದೆ. ಇದನ್ನೇ ದುರುಪಯೋಗಪಡಿಸಿಕೊಳ್ಳುವ ಸ್ಥಳೀಯ ಖಾಸಗಿ ಜೀಪುಗಳ ಚಾಲಕರು ಕೇವಲ ನಾಲ್ಕೈದು ಕಿ.ಮೀ.ದೂರದ ಪ್ರಯಾಣಕ್ಕೆ ನೂರಾರು ರೂ.ಗಳನ್ನು ಪ್ರವಾಸಿಗರಿಂದ ಪೀಕುತ್ತಿದ್ದಾರೆ.ದೂರದಿಂದ ಬಂದ ಪ್ರವಾಸಿಗರು ವಿಧಿಯಿಲ್ಲದೆ, ತಮ್ಮ ವಾಹನವನ್ನು ದತ್ತಪೀಠದ ಆವರಣದಲ್ಲಿ ನಿಲ್ಲಿಸಿ ಖಾಸಗಿ ವಾಹನಗಳನ್ನು ಅವಲಂಬಿಸಬೇಕಾಗಿದೆ. ಈ ವಿಚಾರವನ್ನು ಹಲವು ಬಾರಿ ಜಿಲ್ಲಾಡಳಿತದ ಗಮನಕ್ಕೆ ತಂದರೂ ರಸ್ತೆ ದುರಸ್ತಿಗೆ ಕ್ರಮ ಕೈಗೊಂಡಿಲ್ಲ. ಖಾಸಗಿ ಜೀಪುಗಳ ಮಾಲೀಕರು, ಚಾಲಕರ ಲಾಬಿಯೇ ಇದಕ್ಕೆ ಕಾರಣ ಎನ್ನುವ ಆರೋಪಗಳು ಇವೆ. 

Chikkamagaluru: ವಾಹನ ಸವಾರರಿಗೆ ಕಂಟಕವಾದ ಕಡೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ!

ಸಾಕಷ್ಟು ಮಂದಿ ರಸ್ತೆ ದುಸ್ಥಿತಿ ಕಾರಣಕ್ಕೆ ದತ್ತಪೀಠದಲ್ಲೇ ತಮ್ಮ ಪ್ರವಾಸ ಮೊಟಕುಗೊಳಿಸಿ ಹಿಂತಿರುಗುತ್ತಿದ್ದಾರೆ. ದುಬಾರಿ ಶುಲ್ಕ ವಸೂಲಿ ಮಾಡುವ ಖಾಸಗಿ ವಾಹನಗಳ ಮಾಲೀಕರ ಜೊತೆ ಆಗಾಗ ಪ್ರವಾಸಿಗರು ಮಾತಿನ ಚಕಮಕಿ ನಡೆಸುವುದು ಮಾಮೂಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ(Karnataka tourism department) ಕೂಡಲೇ ಗಮನ ಹರಿಸಿ ರಸ್ತೆ ದುರಸ್ಥಿಗೆ ಕ್ರಮ ಕೈಗೊಳ್ಳಬೇಕು ಎನ್ನುವ ಒತ್ತಾಯ ಕೇಳಿಬಂದಿದೆ.

Follow Us:
Download App:
  • android
  • ios