ಈ ಬಾರಿ ಕರ್ನಾಟಕದಲ್ಲಿ ಕಡಿಮೆ ಹಿಂಗಾರು ಮಳೆ?
ಮುಂಗಾರು ಮಳೆ ಜಾಸ್ತಿಯಾಗಿದ್ದರಿಂದ ಹಿಂಗಾರು ಮಾರುತ ದುರ್ಬಲ| 2019ನ್ನು ಹೊರತು ಪಡಿಸಿದರೆ ಕಳೆದ ನಾಲ್ಕು ವರ್ಷದಲ್ಲಿ ರಾಜ್ಯಕ್ಕೆ ಹಿಂಗಾರಿನ ಕೊರತೆ|
ಬೆಂಗಳೂರು(ನ.06): ಹವಾಮಾನ ಬದಲಾವಣೆಯಿಂದ ಈ ಭಾರಿ ರಾಜ್ಯದಲ್ಲಿ ಹಿಂಗಾರು ಮಳೆ ವಾಡಿಕೆಗಿಂತ ಕಡಿಮೆ ಬೀಳುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಪೆಸಿಫಿಕ್ ಮಹಾಸಾಗರದಲ್ಲಿ ನೀರಿನ ಮೇಲ್ಮೈ ತಾಪಮಾನ ಕಡಿಮೆ ಇರುವುದು ಮುಂಗಾರಿಗೆ ವರವಾಗಿದ್ದರಿಂದ ಈ ಬಾರಿ ರಾಜ್ಯದೆಲ್ಲೆಡೆ ಮುಂಗಾರು ಹೆಚ್ಚು ಸುರಿದಿದೆ. ಇದರ ಪರಿಣಾಮ ರಾಜ್ಯದಲ್ಲಿ ಹಿಂಗಾರು ಮಾರುತಗಳು ದುರ್ಬಲವಾಗಿರಲಿವೆ.
ಹಿಂಗಾರು ಉತ್ತರ ಒಳನಾಡು ಹಾಗೂ ಕರಾವಳಿ ಭಾಗದಲ್ಲಿ ಸಾಧಾರಣವಾಗಿ ಸುರಿದರೆ, ದಕ್ಷಿಣ ಒಳನಾಡಿನ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ವಾಡಿಕೆಯಷ್ಟು ಸುರಿಯಬೇಕು. 2019ನ್ನು ಹೊರತು ಪಡಿಸಿದರೆ ಕಳೆದ ನಾಲ್ಕು ವರ್ಷದಲ್ಲಿ ರಾಜ್ಯಕ್ಕೆ ಹಿಂಗಾರಿನ ಕೊರತೆ ಉಂಟಾಗಿದೆ. ವಾಡಿಕೆ ಮಳೆ 188 ಮಿ.ಮೀ ಸುರಿಯುತ್ತದೆ, ಆದರೆ 2019ರಲ್ಲಿ 288 ಮಿ.ಮೀ ಮಳೆ (ಶೇ. 53 ರಷ್ಟುಹೆಚ್ಚು) ಆಗಿತ್ತು. ಆದರೆ 2018ರಲ್ಲಿ (96ಮಿ.ಮೀ) ಶೇ.49, 2017ರಲ್ಲಿ (163ಮಿ.ಮೀ.) ಶೇ.13 ಹಾಗೂ 2016ರಲ್ಲಿ (54ಮಿ.ಮೀ.) ಶೇ.71 ರಷ್ಟು ಮಳೆ ಕೊರತೆ ಎದುರಾಗಿತ್ತು.
ರಾಜ್ಯದಲ್ಲಿ ಅ.28ರ ನಂತರ ಹಿಂಗಾರು ಪ್ರವೇಶ? ಭಾರೀ ಮಳೆ..?
ಹಿಂಗಾರು ಕೃಷಿ ಹೆಚ್ಚು ನಡೆಯುವ ಬೆಂಗಳೂರು ಗ್ರಾಮಾಂತರ ಮತ್ತು ನಗರ ಜಿಲ್ಲೆ, ತುಮಕೂರು, ಶಿವಮೊಗ್ಗ, ರಾಮನಗರ, ಮಂಡ್ಯ, ಕೋಲಾರ, ಕೊಡಗು, ಹಾಸನ, ದಾವಣಗೆರೆ, ಚಿಕ್ಕಮಗಳೂರು, ಚಾಮರಾಜನಗರ, ಬಳ್ಳಾರಿಯ ರೈತರಿಗೆ ಮಳೆ ಕೈಕೊಡುವ ಸಾಧ್ಯತೆ ಇದೆ.
ಈಗಾಗಲೇ ಕೃಷಿ ಇಲಾಖೆ ಹಿಂಗಾರು ಹಂಗಾಮಿನಲ್ಲಿ ಏಕದಳ ಮತ್ತು ದ್ವಿದಳ ಧಾನ್ಯಗಳು, ಎಣ್ಣೆ ಕಾಳುಗಳು, ವಾಣಿಜ್ಯ ಬೆಳೆಗಳು, ಹತ್ತಿ ಮತ್ತು ಕಬ್ಬು ಬೆಳೆಗಳನ್ನು ಒಟ್ಟು 32 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುವ ಗುರಿ ಹೊಂದಿದ್ದು, ಇದರಲ್ಲಿ 11.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬೆಳೆಯಲಾಗಿದೆ. ಉಳಿದ ಉದ್ದೇಶಿತ ಪ್ರದೇಶದಲ್ಲಿ ಬಿತ್ತನೆಗೆ ಹಿಂಗಾರು ಮಳೆ ಅತ್ಯವಶ್ಯವಾಗಿದೆ.