ಶ್ರೀಕಾಂತ್‌ ಎನ್‌. ಗೌಡಸಂದ್ರ

ಬೆಂಗಳೂರು(ಜೂ.09): ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ 4-5 ಜಿಲ್ಲೆಗಳಲ್ಲಿ ಮಾತ್ರ ಕೊರೋನಾ ಪಾಸಿಟಿವಿಟಿ ದರ ಕಡಿಮೆಯಾಗಿದೆ. ಉಳಿದಂತೆ 19 ಜಿಲ್ಲೆಗಳು ಇನ್ನೂ ಅಪಾಯದ ಸ್ಥಿತಿಯಲ್ಲೇ ಇವೆ. ಹೀಗಾಗಿ ಸರ್ಕಾರ ಹಾಗೂ ಸಾರ್ವಜನಿಕರು ಕೊರೋನಾ ಸೋಂಕಿನ ಬಗ್ಗೆ ಮೈ ಮರೆಯುವಂತಿಲ್ಲ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ರಾಜ್ಯದಲ್ಲಿ 25 ಜಿಲ್ಲೆಗಳಲ್ಲಿ ಇನ್ನೂ ಶೇ.5ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ ವರದಿಯಾಗುತ್ತಿದೆ. 19 ಜಿಲ್ಲೆಗಳಲ್ಲಿ ರಾಜ್ಯದ ಸರಾಸರಿ ಪಾಸಿಟಿವಿಟಿ ದರಕ್ಕಿಂತ (ಶೇ.9.23) ಹೆಚ್ಚು ಸೋಂಕು ವರದಿಯಾಗುತ್ತಿದೆ. 16 ಜಿಲ್ಲೆಗಳಲ್ಲಿ ಶೇ.10ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ ಇದೆ. ಹೀಗಾಗಿ ಬೆಂಗಳೂರು ನಗರದ ಸೋಂಕು ಗಮನದಲ್ಲಿಟ್ಟುಕೊಂಡು ಎಚ್ಚರ ತಪ್ಪುವಂತಿಲ್ಲ. ಮೊದಲ, ಎರಡನೇ ಅಲೆಯ ಭೀಕರತೆ ನೋಡಿಯೂ ಜನರು ನಿರ್ಲಕ್ಷ್ಯ ವಹಿಸಿದರೆ ಅಪರಾಧ ಎಂದು ಕೊರೋನಾ ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ.ಸಿ.ಎನ್‌. ಮಂಜುನಾಥ್‌ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾವಾರು ಲಾಕ್ಡೌನ್‌ ಸಡಿಲಿಸಿ:

ಅಲ್ಲದೆ, ಜೂ.14ರ ಬಳಿಕ ಪ್ರತಿ ಜಿಲ್ಲೆಗೂ ಪ್ರತ್ಯೇಕ ಲಾಕ್ಡೌನ್‌ ಸಡಿಲಿಕೆ ಮಾರ್ಗಸೂಚಿ ಸಿದ್ಧಪಡಿಸಬೇಕು. ಪಾಸಿಟಿವಿಟಿ ದರ ಶೇ.10ಕ್ಕಿಂತ ಹೆಚ್ಚಿರುವ 16 ಜಿಲ್ಲೆಗಳಲ್ಲಿ ಜೂ.14ರ ಬಳಿಕವೂ ಒಂದು ವಾರ ಲಾಕ್‌ಡೌನ್‌ ವಿಸ್ತರಿಸಬೇಕು. ಸೋಂಕು ಹೆಚ್ಚಿರುವ ಜಿಲ್ಲೆಗಳಿಂದ ಬೇರೆ ಜಿಲ್ಲೆಗಳಿಗೆ ಸಂಚಾರ ನಿರ್ಬಂಧಿಸಬೇಕು ಎಂದು ಸಲಹೆ ನೀಡಿದರು.

ಪ್ರಸ್ತುತ ಬೆಂಗಳೂರು ನಗರ, ಬೀದರ್‌, ಕಲಬುರಗಿ, ಹಾವೇರಿ ಜಿಲ್ಲೆಗಳಲ್ಲಿ ಮಾತ್ರ ಶೇ.5ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ವರದಿಯಾಗಿದೆ. ಲಾಕ್ಡೌನ್‌ ಸಡಿಲಿಕೆಗೆ ಒಂದು ದಿನದ ಪಾಸಿಟಿವಿಟಿ ದರದ ಬದಲು ಕಳೆದ ಒಂದು ವಾರದ ಸರಾಸರಿ ಪಾಸಿಟಿವಿಟಿ ದರ ಪರಿಗಣಿಸಬೇಕು. ಅದರ ಆಧಾರದ ಮೇಲೆ ಇನ್ನೂ 19 ಜಿಲ್ಲೆಗಳು ಅಪಾಯದ ಸ್ಥಿತಿಯಲ್ಲೇ ಇವೆ. ಈ ಪೈಕಿ 16 ಜಿಲ್ಲೆಗಳಲ್ಲಿ ಶೇ.10ಕ್ಕಿಂತ ಹೆಚ್ಚು ಪಾಸಿಟಿವಿಟಿ ದರದಲ್ಲಿ ಸೋಂಕು ವರದಿಯಾಗುತ್ತಿದೆ ಎಂದರು.

ಡಿಸೆಂಬರ್‌ವರೆಗೂ ಕಾರ್ಯಕ್ರಮ ನಿರ್ಬಂಧಿಸಿ:

ಸರ್ಕಾರವು ಲಾಕ್ಡೌನ್‌ ಸಡಿಲಿಕೆ ಬಳಿಕ ಎಲ್ಲ ಚಟುವಟಿಕೆಗೂ ಅವಕಾಶ ನೀಡುವಂತಿಲ್ಲ. ಮದುವೆ, ಜನ್ಮದಿನ ಆಚರಣೆ, ಅಂತ್ಯಸಂಸ್ಕಾರದಂತಹ ಕಾರ್ಯಕ್ರಮಗಳ ನಿರ್ಬಂಧವನ್ನು ಡಿಸೆಂಬರ್‌ವರೆಗೂ ಮುಂದುವರೆಸಬೇಕು. ಎರಡನೇ ಅಲೆ ಸಂಪೂರ್ಣ ಇಳಿಕೆಯಾಗಿಲ್ಲ. ಇದರ ಬೆನ್ನಲ್ಲೇ ಮೂರನೇ ಅಲೆ ಎದುರಾಗಲಿದೆ. ಹೀಗಾಗಿ ಡಿಸೆಂಬರ್‌ವರೆಗೂ ನಿರ್ಬಂಧಗಳು ಮುಂದುವರೆಯಬೇಕು.

ಇನ್ನು ಊರ ಹಬ್ಬ, ಜಾತ್ರೆ, ಉತ್ಸವಗಳು, ರಾಜಕೀಯ ಕಾರ್ಯಕ್ರಮ, ರಾರ‍ಯಲಿಗಳಿಗೆ ಡಿಸೆಂಬರ್‌ವರೆಗೂ ಸಂಪೂರ್ಣ ನಿಷೇಧ ಮಾಡಬೇಕು ಎಂದು ಡಾ.ಸಿ.ಎನ್‌. ಮಂಜುನಾಥ್‌ ಹೇಳಿದರು.

5 ಜಿಲ್ಲೆಗಳಷ್ಟೇ ಸೇಫ್‌:

ಪ್ರಸ್ತುತ ಬೀದರ್‌ನಲ್ಲಿ ಶೇ.0.65, ಕಲಬುರಗಿ ಶೇ.2.70, ಹಾವೇರಿ ಶೇ.3.32, ಬೆಂಗೂರು ನಗರ ಶೇ.4.79 ನಷ್ಟುಪಾಸಿಟಿವಿಟಿ ದರ ವರದಿಯಾಗಿದೆ. ಈ ಜಿಲ್ಲೆಗಳಲ್ಲಿ ಮಾತ್ರ ಸದ್ಯಕ್ಕೆ ಸೋಂಕು ಇಳಿಮುಖವಾಗುತ್ತಿದೆ ಎಂದು ಹೇಳಬಹುದು. ಇದರಲ್ಲೂ ಬೆಂಗಳೂರಿನಲ್ಲಿ ಸಾವಿನ ದರ ಶೇ.7.8 ರಷ್ಟಿದೆ. ಹೀಗಾಗಿ ಸಾವಿನ ದರ ಶೇ.1ಕ್ಕಿಂತ ಕಡಿಮೆಯಾಗುವವರೆಗೂ ಎಚ್ಚರ ವಹಿಸಬೇಕು ಎಂದು ತಾಂತ್ರಿಕ ಸಲಹಾ ಸಮಿತಿ ಸದಸ್ಯರೊಬ್ಬರು ತಿಳಿಸಿದ್ದಾರೆ.

19 ಜಿಲ್ಲೆಗಳು ಇನ್ನೂ ರೆಡ್‌ ಜೋನ್‌

ಜೂ.6ರ ವೇಳೆಗೆ ಹಿಂದಿನ ಒಂದು ವಾರದ ಪಾಸಿಟಿವಿಟಿ ಆಧಾರದ ಮೇಲೆ ರಾಜ್ಯದ ಸರಾಸರಿ ಪಾಸಿಟಿವಿಟಿ ದರಕ್ಕಿಂತ ಹೆಚ್ಚು ಸೋಂಕು ಹೊಂದಿರುವ ಜಿಲ್ಲೆಗಳನ್ನು ಆರೋಗ್ಯ ಇಲಾಖೆ ಕೆಂಪು ಪಟ್ಟಿಮಾಡಿ ಗುರುತಿಸಿದೆ.

ಈ ಪೈಕಿ ಮೈಸೂರು ಶೇ.23.75, ಚಿಕ್ಕಮಗಳೂರು ಶೇ.23.70, ದಾವಣಗೆರೆ ಶೇ.19.09, ದಕ್ಷಿಣ ಕನ್ನಡ ಶೇ.17, ಚಾಮರಾಜನಗರ ಶೇ.16.88, ಕೊಡಗು ಶೇ.16.65, ಉಡುಪಿ ಶೇ.15.04, ಬೆಂಗಳೂರು ಗ್ರಾಮಾಂತರ ಶೇ.14.92, ಮಂಡ್ಯ ಶೇ.14.88, ಚಿತ್ರದುರ್ಗ ಶೇ.14.02, ಉತ್ತರ ಕನ್ನಡ ಶೇ.13.87, ತುಮಕೂರು ಶೇ.13.87, ತುಮಕೂರು ಶೇ.13.81, ಹಾಸನ ಶೇ.13.67, ಕೊಪ್ಪಳ ಶೇ.12.89, ಕೋಲಾರ ಶೇ.12.43, ಬಳ್ಳಾರಿ ಶೇ.12.40, ಬೆಳಗಾವಿ ಶೇ.10.44, ಚಿಕ್ಕಬಳ್ಳಾಪುರ ಶೇ.9.38, ಶಿವಮೊಗ್ಗ ಶೇ.9.23, ವಿಜಯಪುರ ಜಿಲ್ಲೆಗಳಲ್ಲಿ (ಶೇ.9.23) ರಾಜ್ಯದ ಸರಾಸರಿಗಿಂತ ಸೋಂಕು ಹೆಚ್ಚಿದೆ.

ತಜ್ಞರ ಸಲಹೆಗಳು

- ಜೂ.14ರ ಬಳಿಕ ಪ್ರತಿ ಜಿಲ್ಲೆಗೂ ಪ್ರತ್ಯೇಕ ಮಾರ್ಗಸೂಚಿ ತಯಾರಿಸಿ

- ಸೋಂಕು ಹೆಚ್ಚಿರುವ ಜಿಲ್ಲೆಗಳಿಂದ ಇತರೆಡೆಗೆ ಸಂಚಾರ ನಿರ್ಬಂಧಿಸಿ

- ಡಿಸೆಂಬರ್‌ವರೆಗೂ ರಾಜ್ಯಾದ್ಯಂತ ಸಾಮಾಜಿಕ ಕಾರ‍್ಯಕ್ರಮ ನಿಷೇಧಿಸಿ