Asianet Suvarna News Asianet Suvarna News

ಎಲ್ಲ ಜಿಲ್ಲೆಗಳ ಪಾಸಿಟಿವಿಟಿ ದರ 2%ಗಿಂತ ಕೆಳಕ್ಕೆ

  • ಕೊರೋನಾ ಸೋಂಕು ಹೆಚ್ಚಿರುವ ಕೇರಳದೊಂದಿಗೆ ಗಡಿ ಹಂಚಿಕೊಂಡಿರುವ ದಕ್ಷಿಣ ಕನ್ನಡ ಶೇ. 1.99 ಪಾಸಿಟಿವಿಟಿ ದರ
  • ಕೊಡಗು ಜಿಲ್ಲೆಯಲ್ಲಿ ಶೇ. 1.95 ಕೊರೋನಾ ಪಾಸಿಟಿವಿಟಿ ದರ
positivity rate decline in karnataka  Districts snr
Author
Bengaluru, First Published Sep 7, 2021, 7:58 AM IST

 ಬೆಂಗಳೂರು (ಸೆ.07): ಕೊರೋನಾ ಸೋಂಕು ಹೆಚ್ಚಿರುವ ಕೇರಳದೊಂದಿಗೆ ಗಡಿ ಹಂಚಿಕೊಂಡಿರುವ ದಕ್ಷಿಣ ಕನ್ನಡ ಶೇ. 1.99 ಮತ್ತು ಕೊಡಗು ಜಿಲ್ಲೆಯಲ್ಲಿ ಶೇ. 1.95 ಕೊರೋನಾ ಪಾಸಿಟಿವಿಟಿ ದರ ದಾಖಲಾಗುವುದರೊಂದಿಗೆ ರಾಜ್ಯದ ಎಲ್ಲ ಜಿಲ್ಲೆಗಳ ಪಾಸಿಟಿವಿಟಿ ದರ ಶೇ.2ಕ್ಕಿಂತ ಕಡಿಮೆಯಾಗಿದೆ.

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕೊರೋನಾ ಸೋಂಕಿನ ಪಾಸಿಟಿವಿಟಿ ದರ ಗಣನೀಯವಾಗಿ ಕಡಿಮೆಯಾಗಿದ್ದರೂ ಸಹ ದಕ್ಷಿಣ ಕನ್ನಡ ಮತ್ತು ಕೊಡಗು, ಉಡುಪಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚು ಕಂಡು ಬಂದ ಹಿನ್ನೆಲೆಯಲ್ಲಿ ಸರ್ಕಾರ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಈಗ ಪಾಸಿಟಿವಿಟಿ ದರ ಇಳಿಕೆಯಾಗಿದೆ. ಹೀಗಾಗಿ ಜನರಲ್ಲಿ ಆತಂಕವನ್ನು ಸ್ವಲ್ಪ ಕಡಿಮೆ ಮಾಡಿದೆ.

ಕರ್ನಾಟಕದಲ್ಲಿ ಕೊರೋನಾ ಏರಿಳಿತ, ಇಂದು (ಸೆ.7) ಭಾರೀ ಇಳಿಕೆ

ದಕ್ಷಿಣ ಕನ್ನಡ, ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲೆಯಲ್ಲಿ ಹೆಚ್ಚಿನ ಸೋಂಕಿತರು ಪತ್ತೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಪಾಸಿಟಿವಿಟಿ ದರ ದಾಖಲಾಗುತ್ತಿತ್ತು. ಆಗಸ್ಟ್‌ ಕೊನೆಯ ವಾರದ ಹೊತ್ತಿಗೆ ದಕ್ಷಿಣ ಕನ್ನಡ ಮತ್ತು ಕೊಡಗು ಹೊರತು ಪಡಿಸಿ ಉಳಿದ ಜಿಲ್ಲೆಗಳ ಪಾಸಿಟಿವಿಟಿ ದರ ಶೇ.2ಕ್ಕಿಂತ ಕಡಿಮೆ ಆಗಿತ್ತು. ಆದರೆ ಕೇರಳದೊಂದಿಗೆ ಹೆಚ್ಚು ನಂಟು ಹೊಂದಿರುವ ಗಡಿ ಜಿಲ್ಲೆಗಳಾದ ಕೊಡಗು ಮತ್ತು ದಕ್ಷಿಣ ಕನ್ನಡದಲ್ಲಿ ಪಾಸಿಟಿವಿಟಿ ದರ ನಿರೀಕ್ಷಿತ ಪ್ರಮಾಣದಲ್ಲಿ ಇಳಿಯುತ್ತಿರಲಿಲ್ಲ. ಆದರೆ ಈಗ ಸೆಪ್ಟೆಂಬರ್‌4ರ ಆರೋಗ್ಯ ಇಲಾಖೆ ನೀಡಿರುವ ವರದಿಯಲ್ಲಿ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇ.2ಕ್ಕಿಂತ ಕಡಿಮೆಯಾಗಿದೆ ಎಂದು ತಿಳಿಸಿದೆ.

ರಾಜ್ಯ ಸರ್ಕಾರ ಕಫä್ರ್ಯ ವಿನಾಯಿತಿ, ಶಾಲೆ ಆರಂಭ, ಗಣೇಶೋತ್ಸವ ಆಚರಣೆ ಮುಂತಾದ ಚಟುವಟಿಕೆಗಳ ನೀತಿ ನಿಯಮ ರೂಪಿಸುವಾಗ ಶೇ.2ಕ್ಕಿಂತ ಹೆಚ್ಚು ಪಾಸಿಟಿವಿಟಿ ದರವನ್ನು ಪರಿಗಣಿಸುತ್ತಿತ್ತು. ಹೀಗಾಗಿ ಮುಂದಿನ ದಿನಗಳಲ್ಲಿ ಈ ಸಂಬಂಧ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಸದ್ಯ ಉಡುಪಿ (ಶೇ. 1.31), ಹಾಸನ (ಶೇ.1.21), ಮೈಸೂರು (ಶೇ.1.13), ಕೋಲಾರ (ಶೇ.1.11), ಶಿವಮೊಗ್ಗ (ಶೇ. 0.92), ಚಿಕ್ಕಮಗಳೂರು (ಶೇ.0.89), ಉತ್ತರ ಕನ್ನಡ (ಶೇ.0.73) ಜಿಲ್ಲೆಯಲ್ಲಿ ಪಾಸಿಟಿವಿಟಿ ದರವಿದ್ದು, ರಾಜ್ಯದ ಪಾಸಿಟಿವಿಟಿ ದರ ಶೇ.0.71ಕ್ಕಿಂತ ಹೆಚ್ಚು ಸೋಂಕಿನ ದರ ಹೊಂದಿದೆ.

11 ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಏರಿಕೆ:

ಈ ಮಧ್ಯ ಕಡಿಮೆ ಕೊರೋನಾ ಪ್ರಕರಣ ದಾಖಲಾಗುತ್ತಿದ್ದ ಜಿಲ್ಲೆಗಳಲ್ಲಿ ಸೆ.4ರ ಬಳಿಕ ಸೋಂಕಿನ ಪ್ರಕರಣದಲ್ಲಿ ಏರಿಕೆಯಾಗುತ್ತಿರುವುದು ಕೊಂಚ ಆತಂಕಕ್ಕೆ ಕಾರಣವಾಗಿದೆ. ವಿಶೇಷವಾಗಿ ಕೋಲಾರ, ಧಾರವಾಡ, ಗದಗ, ರಾಮನಗರ, ಕೊಡಗು, ಬಳ್ಳಾರಿ, ಚಿಕ್ಕಬಳ್ಳಾಪುರ, ಚಾಮರಾಜನಗರ, ವಿಜಯಪುರ, ಕೊಪ್ಪಳ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ.

ಉಳಿದಂತೆ ರಾಜ್ಯದಲ್ಲಿ ಪ್ರತಿದಿನ ಹೆಚ್ಚು ಪ್ರಕರಣ ವರದಿಯಾಗುವ ದಕ್ಷಿಣ ಕನ್ನಡ, ಉಡುಪಿ, ಹಾಸನ, ಮಂಡ್ಯ, ಚಿಕ್ಕಮಗಳೂರು, ತುಮಕೂರು, ಶಿವಮೊಗ್ಗ, ಮೈಸೂರು, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಕುಸಿತ ದಾಖಲಾಗಿದೆ. 18 ಜಿಲ್ಲೆಯಲ್ಲಿ ಕಡಿಮೆ ಪ್ರಕರಣ ಬಂದಿದೆ. ಹಾವೇರಿಯಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಸ್ಥಿರವಾಗಿದೆ.

Follow Us:
Download App:
  • android
  • ios