ಬಳ್ಳಾರಿಯಲ್ಲಿ, ಕಲುಷಿತ ನೀರನ್ನು ನಾಲೆಗೆ ಹರಿಸುತ್ತಿದ್ದ ಕಾರಣ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು 36 ಜೀನ್ಸ್‌ ವಾಷಿಂಗ್‌ ಯೂನಿಟ್‌ಗಳನ್ನು ಮುಚ್ಚಲು ಆದೇಶಿಸಿದೆ. ಈ ಕ್ರಮದಿಂದಾಗಿ, ನಗರದ ಜೀನ್ಸ್ ಉದ್ಯಮವು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಒಂದು ಲಕ್ಷಕ್ಕೂ ಅಧಿಕ ಜನರ ಉದ್ಯೋಗಕ್ಕೆ ಕುತ್ತು ಬಂದಿದೆ.

ಬಳ್ಳಾರಿ (ನ.19) ಜೀನ್ಸ್‌ ವಾಷಿಂಗ್‌ ಯೂನಿಟ್‌ಗಳ ಕಲುಷಿತ ನೀರನ್ನು ನಾಲೆಗೆ ಹರಿಸುವ ಹಿನ್ನೆಲೆಯಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನಗರದ 36 ವಾಷಿಂಗ್ ಯೂನಿಟ್‌ಗಳ ಬಂದ್‌ಗೆ ನೋಟಿಸ್‌ ನೀಡಿದ್ದು, ಎಲ್ಲ ಜೀನ್ಸ್‌ ಯೂನಿಟ್‌ಗಳನ್ನು ಸ್ಥಗಿತಗೊಳಿಸಲಾಗಿದೆ. ಕೆಮಿಕಲ್‌ಯುಕ್ತ ನೀರನ್ನು ಸಂಸ್ಕರಿಸದೆ ನಾಲೆಗೆ ಬಿಡುವ ಕಾರಣ ನೋಟಿಸ್‌ ನೀಡಲಾಗಿದೆ.

ನಗರದ ಹೊರವಲಯದ ಮುಂಡ್ರಿಗಿ ಪ್ರದೇಶದಲ್ಲಿ ಕೊರೋನಾ ಮುನ್ನ 83 ಜೀನ್ಸ್‌ ವಾಷಿಂಗ್‌ ಘಟಕಗಳು ಚಾಲ್ತಿಯಲ್ಲಿದ್ದವು. ನಂತರ ಕೊರೋನಾ ಹೊಡೆತಕ್ಕೆ, ನಾನಾ ಸಮಸ್ಯೆಗಳಿಂದ ಏಕಾಏಕಿ 30 ಘಟಕಗಳು ಬಂದ್‌ ಆಗಿವೆ. ಸದ್ಯ ಸುಮಾರು 50 ವಾಷಿಂಗ್‌ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಇಲ್ಲಿ 500ಕ್ಕೂ ಅಧಿಕ ಜೀನ್ಸ್‌ ಸಿದ್ಧ ಉಡುಪು ತಯಾರಿಕಾ ಘಟಕಗಳಿದ್ದು, ಪ್ರತ್ಯಕ್ಷ, ಪರೋಕ್ಷವಾಗಿ ಒಂದು ಲಕ್ಷಕ್ಕೂ ಅಧಿಕ ಜನ ಜೀನ್ಸ್‌ ಉಡುಪು ತಯಾರಿಕಾ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ.

ವಾಷಿಂಗ್ ಘಟಕ ಸಂಪೂರ್ಣ ಬಂದ್:

ಇಲ್ಲಿನ ಜೀನ್ಸ್‌ ಉದ್ಯಮವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಉದ್ದೇಶದೊಂದಿಗೆ ಘೋಷಿಸಿರುವ ‘ಜೀನ್ಸ್‌ ಅಪರಲ್‌ ಪಾರ್ಕ್‌’ ಸ್ಥಾಪನೆಗೆ ಎದುರು ನೋಡುತ್ತಿರುವ ಹೊತ್ತಿನಲ್ಲಿಯೇ ಈಗ ಉದ್ಯಮಕ್ಕೆ ಜೀವಾಳವಾಗಿರುವ ವಾಷಿಂಗ್‌ ಯೂನಿಟ್‌ಗಳ ಸಂಪೂರ್ಣ ಬಂದ್‌ಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮುಂದಾಗಿರುವುದು ಜೀನ್ಸ್‌ ಉದ್ಯಮಕ್ಕೆ ಮತ್ತಷ್ಟು ಆಘಾತ ನೀಡಿದೆ. ಇದೇ ಹಿನ್ನೆಲೆಯಲ್ಲಿ ಜೆಸ್ಕಾಂನಿಂದಲೂ ವಿದ್ಯುತ್‌ ಸರಬರಾಜು ನಿಲ್ಲಿಸಲಾಗಿದೆ.

ಒಂದು ಲಕ್ಷ ಜನ ಉದ್ಯೋಗಕ್ಕೂ ಕುತ್ತು?

ಇಲ್ಲಿ 500ಕ್ಕೂ ಅಧಿಕ ಜೀನ್ಸ್‌ ಸಿದ್ಧ ಉಡುಪು ತಯಾರಿಕಾ ಘಟಕಗಳಿದ್ದು, ಪ್ರತ್ಯಕ್ಷ, ಪರೋಕ್ಷವಾಗಿ ಒಂದು ಲಕ್ಷಕ್ಕೂ ಅಧಿಕ ಜನ ಜೀನ್ಸ್‌ ಉಡುಪು ತಯಾರಿಕಾ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ. ಇಲ್ಲಿ ತಯಾರಾಗುವ ಜೀನ್ಸ್‌ ಉಡುಪುಗಳು ರಾಜ್ಯ ಸೇರಿ ದೇಶ, ವಿದೇಶಗಳಲ್ಲೂ ಗಮನ ಸೆಳೆದಿವೆ. ಕೋಟ್ಯಂತರ ರುಪಾಯಿ ವ್ಯಾಪಾರ ವಹಿವಾಟು ನಡೆಸಲಾಗುತ್ತಿದೆ. ಪ್ರತಿನಿತ್ಯ 50 ಸಾವಿರಕ್ಕೂ ಅಧಿಕ ಉಡುಪುಗಳು ತಯಾರಾಗುತ್ತಿದ್ದು, ಹಬ್ಬಗಳ ಸಂದರ್ಭದಲ್ಲಿ ಉತ್ಪಾದನೆ ದ್ವಿಗುಣವಾಗಲಿದೆ.

ವಿದ್ಯುತ್‌ ಸಮಸ್ಯೆ, ನೀರಿನ ಕೊರತೆ, ಕಾರ್ಮಿಕರ ಅಭಾವ, ಉದ್ಯಮಕ್ಕೆ ಪ್ರೋತ್ಸಾಹ ಸಮಸ್ಯೆ ಸೇರಿ ನಾನಾ ಸವಾಲುಗಳ ನಡುವೆಯೇ ಸಾಗುತ್ತಿರುವ ಉದ್ಯಮಕ್ಕೆ ಈಗ ಜೀನ್ಸ್‌ ಉದ್ಯಮಕ್ಕೆ ಜೀವಾಳವಾಗಿರುವ ಜೀನ್ಸ್‌ ವಾಷಿಂಗ್‌ ಯುನಿಟ್‌ಗಳ ಬಂದ್‌ಗೆ ಮುಂದಾಗಿರುವುದು ಜೀನ್ಸ್‌ ಉದ್ಯಮ ಸಂಪೂರ್ಣವಾಗಿ ನೆಲಕಚ್ಚುವ ಭೀತಿ ಎದುರಾಗಿದೆ.

ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್‌ ನೀಡಿದ ಹಿನ್ನೆಲೆಯಲ್ಲಿ ಜೀನ್ಸ್ ವಾಷಿಂಗ್‌ ಘಟಕಗಳು ಬಂದ್ ಆಗಿವೆ. ಮಂಡಳಿ ಈ ರೀತಿಯ ಕ್ರಮ ಕೈಗೊಂಡಿರುವುದು ತೀವ್ರ ಆತಂಕ ಮೂಡಿಸಿದೆ. ಸರ್ಕಾರ ಒಂದಿಷ್ಟು ಸಮಯಾವಕಾಶ ನೀಡಬೇಕು. ನಿಯಮ ಅಳವಡಿಸಿಕೊಂಡ ಘಟಕಗಳಿಗೆ ಮತ್ತೆ ಕಾರ್ಯಾರಂಭಕ್ಕೆ ಕ್ರಮ ವಹಿಸಬೇಕು.

- ಪೋಲ್ಯಾಕ್ಸ್ ಮಲ್ಲಿಕಾರ್ಜುನ, ಜೀನ್ಸ್ ಉದ್ಯಮಿ, ಬಳ್ಳಾರಿ .