ಬೆಂಗಳೂರು(ಆ.22): ಕಾವಲ್‌ ಭೈರಸಂದ್ರದ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆ ಪ್ರಕರಣದಲ್ಲಿ ಕಿಡಿಗೇಡಿಗಳು ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳನ್ನು ಗೋದಾಮುವೊಂದರಲ್ಲಿ ಎಸೆದಿದ್ದ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ.

"

ಆ.11ರಂದು ಕಿಡಿಗೇಡಿಗಳು ಶಾಸಕ ಅಖಂಡ ಶ್ರೀನಿವಾಸ್‌ ಅವರ ಬಳಿ ಬಂದು ಗಲಾಟೆ ಮಾಡಿದ ಬಳಿಕ ಇಡೀ ಪ್ರದೇಶದಲ್ಲಿ ಪೂರ್ವ ನಿಯೋಜಿತದಂತೆ ಮಾರಕಾಸ್ತ್ರಗಳನ್ನು ಹಿಡಿದು ದಾಂಧಲೆ ನಡೆಸಿದ್ದರು. ಕೆಲವರ ಬಂಧನದ ಬಳಿಕ ಆರೋಪಿಗಳು ಮಾರಕಾಸ್ತ್ರವನ್ನು ಕಾವಲ್‌ಭೈರಸಂದ್ರದಲ್ಲಿರುವ ಗೋದಾಮಿನಲ್ಲಿ ಎಸೆದಿರುವ ಬಗ್ಗೆ ಬಾಯ್ಬಿಟ್ಟಿದ್ದರು. ಶುಕ್ರವಾರ ಆರೋಪಿಗಳನ್ನು ಗೋದಾಮಿನ ಬಳಿ ಕರೆ ತಂದ ಸಿಸಿಬಿ ಪೊಲೀಸರು ಸ್ಥಳವನ್ನು ಮಹಜರ್‌ ನಡೆಸಿದ್ದಾರೆ. ಗೋದಾಮಿನಲ್ಲಿದ್ದ ಮಾರಕಾಸ್ತ್ರಗಳನ್ನು ಆರೋಪಿಗಳೇ ಹುಡುಕಾಡಿ ಪೊಲೀಸರಿಗೆ ಒಪ್ಪಿಸಿದರು ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದರು.

ಬೆಂಗಳೂರು ಗಲಭೆ: ಸಂಪತ್‌ ರಾಜ್‌ ಆಪ್ತ ಅರುಣ್‌ ಸಂಬಂಧಿಕರಿಂದ ಹೈಡ್ರಾಮಾ

ಇನ್ನು ಇಸ್ಲಾಂ ಧರ್ಮ ಗುರು ಮಹಮ್ಮದ್‌ ಪೈಗಂಬರ್‌ ಬಗ್ಗೆ ಅವಹೇಳನಕಾರಿ ಪೋಸ್ಟ್‌ ಹಾಕಿ ದಾಂಧಲೆಗೆ ಕಾರಣವಾಗಿರುವ ಆರೋಪಕ್ಕೆ ಗುರಿಯಾಗಿರುವ ನವೀನ್‌ ಹಾಗೂ ಶಾಸಕ ಅಖಂಡ ಶ್ರೀನಿವಾಸ್‌ ಮೂರ್ತಿ ಮನೆ ಬಳಿಯೇ ಈ ಗೋದಾಮು ಇದೆ. ಗೋದಾಮು ಬಳಿ ಮಹಜರ್‌ ನಡೆಸಿದ ಬಳಿಕ ಆರೋಪಿಗಳನ್ನು ಪೊಲೀಸರು ಶಾಸಕರ ಮನೆ ಹಾಗೂ ನವೀನ್‌ ಮನೆಗೂ ಕರೆದೊಯ್ದು ಪರಿಶೀಲನೆ ನಡೆಸಿದರು.

ಇನ್ನು ಗಲಭೆ ಪ್ರಕರಣದಲ್ಲಿ ಪಾಲಿಕೆ ಸದಸ್ಯ ಜಾಕೀರ್‌ ಹೇಳಿಕೆಯಲ್ಲಿ ಗೊಂದಲ ಇದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಕೆಲವೊಂದು ತಾಂತ್ರಿಕ ವಿಷಯಗಳನ್ನು ಸೂಕ್ಷ್ಮವಾಗಿ ತನಿಖೆ ನಡೆಸಲಾಗುತ್ತಿದೆ. ಜಾಕಿರ್‌ ಅವರ ಮೊಬೈಲನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ. ಜಾಕಿರ್‌ ಮೊಬೈಲ್‌ ಕರೆಗಳ ಬಗ್ಗೆ ಪರಿಶೀಲನೆ ನಡೆದಿದೆ ಎಂದು ಪೊಲೀಸರು ತಿಳಿಸಿದರು.

ಮತ್ತೊಬ್ಬ ಆರೋಪಿ ಬಂಧನ

ಪುಲಿಕೇಶಿನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಹಾಗೂ ನವೀನ್‌ ಮನೆಗೆ ಬೆಂಕಿ ಹಚ್ಚಿದ್ದ ಪ್ರಕರಣದ ಪ್ರಮುಖ ಆರೋಪಿ ಡಿ.ಜೆ.ಹಳ್ಳಿಯ ಯೂಸುಫ್‌ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಫೇಸ್‌ಬುಕ್‌ ಪೋಸ್ಟ್‌ ವಿಚಾರಕ್ಕಾಗಿ ಯೂಸುಫ್‌, ಕೆಲ ಯುವಕರ ಗುಂಪು ಸೇರಿಸಿಕೊಂಡು ನವೀನ್‌ ಹಾಗೂ ಶಾಸಕರ ಮನೆ ಬಳಿ ಹೋಗಿದ್ದ. ಮನೆಗೆ ಹಚ್ಚಿ ಜಾತಿ ನಿಂದನೆ ಸಹ ಮಾಡಿದ್ದ. ಈ ಸಂಬಂಧ ನವೀನ್‌ ಸಂಬಂಧಿಕರೇ ದೂರು ನೀಡಿದ್ದರು. ತಲೆಮರೆಸಿಕೊಂಡಿದ್ದ ಯೂಸುಫ್‌ ಶುಕ್ರವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.