ಬೆಂಗಳೂರು(ಆ.14): ಕೆ.ಜಿ.ಹಳ್ಳಿ ಹಾಗೂ ಡಿ.ಜೆ.ಹಳ್ಳಿ ಗಲಭೆಗೆ ಮುನ್ನ ಮೂರು ಬಾರಿ ನಗರದಲ್ಲಿ ದೊಂಬಿ ಸೃಷ್ಟಿಸಲು ಎಸ್‌ಡಿಪಿಐ ಮುಖಂಡರ ಸಂಚು ರೂಪಿಸಿದ್ದರು ಎಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

"

ಪೌರತ್ವ ತಿದ್ದುಪಡಿ ಕಾಯ್ದೆ, ಅಯೋಧ್ಯ ರಾಮಜನ್ಮಭೂಮಿ ವಿವಾದ ಕುರಿತು ನ್ಯಾಯಾಲಯದ ತೀರ್ಪು ಪ್ರಕಟವಾದ ದಿನ ಹಾಗೂ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮ ವೇಳೆ ನಗರದಲ್ಲಿ ಶಾಂತಿ ಭಂಗಕ್ಕೆ ಎಸ್‌ಡಿಪಿಐ ರೂಪಿಸಿದ್ದ ಸಂಚು ಸಫಲವಾಗಲಿಲ್ಲ. ಈ ಮೂರು ಸಂದರ್ಭದಲ್ಲಿ ಬಿಗಿಯಾದ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಿದ್ದರಿಂದ ಸಂಚು ವಿಫಲವಾಯಿತು ಎಂದು ತಿಳಿದು ಬಂದಿದೆ.

2019ರ ಅಕ್ಟೋಬರ್‌ನಲ್ಲಿ ರಾಮಜನ್ಮಭೂಮಿ ವಿವಾದ ಸಂಬಂಧ ಸುಪ್ರೀಂಕೋರ್ಟ್‌ ತೀರ್ಪು ನೀಡಿತ್ತು. ಆ ವೇಳೆ ಶಾಂತಿ ಭಂಗಕ್ಕೆ ಎಸ್‌ಡಿಪಿಐ ಮುಖಂಡರು ಸಂಚು ರೂಪಿಸಿದ್ದರು. ಆದರೆ ಪೊಲೀಸರ ಕಠಿಣ ಕ್ರಮಗಳ ಪರಿಣಾಮ ಪೂರ್ವ ಯೋಜಿತ ಸಂಚು ಕಾರ್ಯಗತವಾಗಿಲ್ಲ. ಇದಾದ ನಂತರ ಅದೇ ತಂಡ, ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿ ಅಭಿಯಾನ ವಿರೋಧಿ ಹೋರಾಟದ ವೇಳೆ ಗಲಭೆ ನಡೆಸಲು ಮತ್ತೊಂದು ಬಾರಿ ಯತ್ನ ನಡೆದಿತ್ತು.

Exclusive;ಹಠಕ್ಕೆ ಬಿದ್ದ ಉದ್ರಿಕ್ತರಿಂದ ಬೆಂಗಳೂರು ಗಲಭೆ; ನವೀನ್ ಪೋಸ್ಟ್ ನೆಪ ಮಾತ್ರ!

2019ರ ಡಿಸೆಂಬರ್‌ನಲ್ಲಿ ಪುರಸಭೆ ಬಳಿ ಸಿಎಎ ಪರವಾಗಿ ಹಿಂದೂ ಸಂಘಟನೆ ಕಾರ್ಯಕರ್ತರ ಪ್ರತಿಭಟನೆ ವೇಳೆ ಕಲ್ಲು ತೂರಾಟ ನಡೆಸಿ ಆ ಸಂಘಟನೆ ಮುಖಂಡರ ಹತ್ಯೆಗೆ ಎಸ್‌ಡಿಪಿಐ ಸದಸ್ಯರು ಯತ್ನಿಸಿದ್ದರು. ಆಗಲೂ ಸಹ ಪೊಲೀಸರ ಕಣ್ಗಾವಲಿನ ಪರಿಣಾಮ ಸಂಚು ವಿಫಲವಾಯಿತು. ಕೊನೆಗೆ ಹಿಂದೂ ಸಂಘಟನೆ ಕಾರ್ಯಕರ್ತ ವರುಣ್‌ಗೆ ಚಾಕು ಇರಿದು ಪರಾರಿಯಾಗಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

ಇತ್ತೀಚೆಗೆ ಆ.5 ರಂದು ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮ ವಿರೋಧಿಸಿ ಗಲಭೆ ನಡೆಸಲು ತಂಡ ಯೋಜಿಸಿತ್ತು. ಆಗ ಸೂಕ್ಷ್ಮಪ್ರದೇಶವಾದ ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಬಂದೋಬಸ್‌್ತ ಕಲ್ಪಿಸಿದ್ದರು. ಹೀಗಾಗಿ ಮೂರನೇ ಬಾರಿಯೂ ಯೋಜನೆ ವಿಫಲವಾಗಿದ್ದರಿಂದ ಮುಜಾಮಿಲ್‌ ಹಾಗೂ ಅಯಾಜ್‌, ಇಸ್ಲಾಂ ಧರ್ಮಗುರು ಮಹಮ್ಮದ್‌ ಪೈಗಂಬರ್‌ ಕುರಿತು ನವೀನ್‌ ಹಾಕಿದ್ದ ವಿವಾದಾತ್ಮಕ ಪೋಸ್ಟ್‌ ಅನ್ನು ದಾಳವಾಗಿ ಬಳಸಿಕೊಂಡಿದ್ದಾರೆ ಎಂದು ಪೊಲೀಸರು ಸಂಶಯಿಸಿದ್ದಾರೆ.

ರಾಜಕೀಯ ದ್ವೇಷ; ಗಲಭೆಗೆ ಪ್ರಚೋದನೆ?

ಮೊದಲಿನಿಂದಲೂ ರಾಜಕೀಯ ಕಾರಣಗಳಿಗೆ ಪುಲಿಕೇಶಿನಗರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಹಾಗೂ ಎಸ್‌ಡಿಪಿಐ ಮುಖಂಡರಾದ ಮುಜಾಮಿಲ್‌ ಹಾಗೂ ಅಯಾಜ್‌ ಮಧ್ಯೆ ಜಿದ್ದು ನಡೆದಿತ್ತು. ಪುಲಿಕೇಶಿನಗರ ಕ್ಷೇತ್ರ ಮೀಸಲು ಕ್ಷೇತ್ರವಾಗಿದ್ದರಿಂದ ಅಲ್ಪಸಂಖ್ಯಾತ ಸಮುದಾಯ ಬಾಹುಳ್ಯವಿದ್ದರೂ ಆ ವರ್ಗದ ಜನ ವಿಧಾನಸಭೆ ಪ್ರವೇಶ ಸಾಧ್ಯವಿಲ್ಲ. ಹೀಗಾಗಿ ಬಿಬಿಎಂಪಿ ಚುನಾವಣೆಯಲ್ಲಿ ಹಿಡಿತ ಸಾಧಿಸಲು ಸಮುದಾಯ ಶಕ್ತಿ ಕ್ರೋಡೀಕರಣಕ್ಕೆ ಮುಜಾಮಿಲ್‌ ಹಾಗೂ ಅಯಾಜ್‌ ಯತ್ನಿಸಿದ್ದರು. ಇದಕ್ಕೆ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅಡ್ಡಿಯಾಗಿದ್ದರು. ಈ ರಾಜಕೀಯ ದ್ವೇಷ ಮಂಗಳವಾರ ಗಲಭೆಗೆ ಪ್ರಚೋದನೆ ನೀಡಿದೆ ಎಂದು ಪೊಲೀಸರು ಶಂಕಿಸಿದ್ದಾರೆ.