ಬೆಂಗಳೂರು(ಆ.13):  ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ನಡೆದ ಗಲಭೆಯಿಂದ ಹಿಂದೆ ಎಸ್‌ಡಿಪಿಐ ಮುಖಂಡರು ಸೇರಿದಂತೆ ಕೆಲವರ ರಾಜಕೀಯ ಪಿತೂರಿ ನಡೆದಿರಬಹುದು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿವೆ.

ಫೇಸ್‌ಬುಕ್‌ನಲ್ಲಿ ಪುಲಿಕೇಶಿ ನಗರ ಶಾಸಕ ಅಖಂಡ ಶ್ರೀನಿವಾಸ್‌ ಮೂರ್ತಿ ಅವರ ಸೋದರ ಸಂಬಂಧಿ ನವೀನ್‌ ಎಂಬಾತ ಹಾಕಿದ್ದು ಎನ್ನಲಾದ ಇಸ್ಲಾಂ ಧರ್ಮಗುರು ಮಹಮ್ಮದ್‌ ಪೈಗಂಬರ್‌ ಕುರಿತ ವಿವಾದಾತ್ಮಕ ಪೋಸ್ಟ್‌ ಗಲಭೆಗೆ ನೆಪವಾಗಿದೆ. ಆದರೆ ರಾತ್ರಿ ನಡೆದ ಘಟನಾವಳಿ ಅವಲೋಕಿಸಿದರೆ ಶಾಸಕರ ಮೇಲಿನ ಹಗೆತನವನ್ನು ಗಲಭೆ ಮೂಲಕ ವಿರೋಧಿಗಳು ವ್ಯವಸ್ಥಿತ ಸಂಚು ರೂಪಿಸಿ ತೀರಿಸಿಕೊಂಡಿರುವುದಾಗಿ ಶಾಸಕರ ಸಂಬಂಧಿಕರು, ಬೆಂಬಲಿಗರು ಹಾಗೂ ಪೊಲೀಸರು ಎಂದು ಅನುಮಾನಿಸಿದ್ದಾರೆ. ಅಖಂಡ ಶ್ರೀನಿವಾಸ ಮೂರ್ತಿ ರಾಜಕೀಯ ಏಳಿಗೆ ಸಹಿಸದ ಎಸ್‌ಡಿಪಿಐ ಮುಖಂಡ ಮುಜಾಮಿಲ್‌, ವಾಜಿದ್‌ ಸೇರಿದಂತೆ ಕೆಲವರು ದಾಳಿಗೆ ಪ್ರಚೋದಿಸಿರಬಹುದು ಎಂಬ ಆರೋಪ ಕೇಳಿ ಬಂದಿದೆ.

ಬೆಂಗಳೂರು ಗಲಭೆ ಮ್ಯಾಜಿಸ್ಟ್ರೇಟ್ ತನಿಖೆಗೆ, ಗಲಭೆಕೋರರಿಂದಲೇ ನಷ್ಟ ವಸೂಲಿ

ಅನುಮಾನಕ್ಕೆ ಕಾರಣಗಳು ಹೀಗಿವೆ:

* ಫೇಸ್‌ಬುಕ್‌ನಲ್ಲಿ ಪೈಗಂಬರ್‌ ಕುರಿತು ಮಂಗಳವಾರ ಸಂಜೆ 6 ಗಂಟೆ ಸುಮಾರಿಗೆ ನವೀನ್‌ ಪೋಸ್ಟ್‌ ಮಾಡಿದ್ದಾನೆ. ಈ ಬರಹ ಖಂಡಿಸಿ ಡಿ.ಜೆ.ಹಳ್ಳಿ ಠಾಣೆಗೆ ಸಂಜೆ 6.30ರ ವೇಳೆ ಸ್ಥಳೀಯ ಎಸ್‌ಡಿಪಿಐ ಮುಖಂಡ ಮುಜಾಮಿಲ್‌ ಪಾಷ ನೇತೃತ್ವದಲ್ಲಿ ಒಂದು ತಂಡ ದೂರು ನೀಡಲು ತೆರಳಿದೆ. ಅದೇ ಹೊತ್ತಿಗೆ ಕೆ.ಜಿ.ಹಳ್ಳಿ ಠಾಣೆ ಬಳಿ ಮತ್ತೊಂದು ಗುಂಪು ತೆರಳಿದೆ. ದೂರು ಸ್ವೀಕರಿಸಿದ ಪೊಲೀಸರು, 2 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸುವುದಾಗಿ ಹೇಳಿದ್ದರೂ ಸಹ ಠಾಣೆ ಮೇಲೆ ದಾಳಿ ನಡೆದಿದೆ. ಕಿಡಿಗೇಡಿಗಳು ಪೆಟ್ರೋಲ್‌ ಬಾಂಬ್‌ ಹಿಡಿದು ಪೊಲೀಸರ ಮೇಲೆ ಎಸೆದಿದ್ದಾರೆ.

* ತಮ್ಮ ಅಕ್ಕನ ಮಗನ ವಿವಾದಿತ ಪೋಸ್ಟ್‌ ಬಗ್ಗೆ ಮಾಹಿತಿ ತಿಳಿದ ಶಾಸಕ ಅಖಂಡ ಶ್ರೀನಿವಾಸ್‌ ಮೂರ್ತಿ, ತಪ್ಪಿತಸ್ಥರ ಬಂಧನಕ್ಕೆ ಪೊಲೀಸರಿಗೆ ಸೂಚಿಸುವುದಾಗಿ ಹೇಳಿದ್ದಾರೆ. ಹೀಗಿದ್ದರೂ ಅವರ ಮನೆ, ವಿವಾದಿತ ಬರಹ ಹಾಕಿದ್ದ ನವೀನ್‌ ಮನೆ ಹಾಗೂ ಶಾಸಕರ ಆಪ್ತ ಸ್ನೇಹಿತ ಮುನೇಗೌಡ ಅವರ ಮನೆಗಳಿಗೆ ನುಗ್ಗಿ ದಾಂಧೆ ನಡೆಸಿ ಬೆಂಕಿ ಹಚ್ಚಲಾಗಿದೆ.

* ಶಾಸಕರ ಮನೆ ಬಳಿ ರಾತ್ರಿ 7.30ಕ್ಕೆ ದುಷ್ಕರ್ಮಿಗಳು ತೆರಳಿ ಕಲ್ಲು ತೂರಾಟ ನಡೆಸಿ ಪರಾರಿಯಾಗಿದೆ. 8.30ಕ್ಕೆ ಶಾಸಕರ ಮನೆ ಮಾರ್ಗದಲ್ಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಒಡೆದು ಹಾಕಿದ್ದಾರೆ. ನಂತರ 9.40ರ ಸುಮಾರಿಗೆ ಶಾಸಕರ ಮನೆ ಹಾಗೂ ಕಚೇರಿಗಳಿಗೆ ನುಗ್ಗಿ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದಾರೆ. ಹಠಾತ್ತಾಗಿ ನಡೆದ ಘಟನೆಯಾದರೆ ಮೂರು ಹಂತದಲ್ಲೇ ಸಂಭವಿಸಲು ಹೇಗೆ ಸಾಧ್ಯವಾಗುತ್ತದೆ ಎಂದು ಪ್ರಶ್ನೆ ಪೊಲೀಸರು ಹಾಗೂ ಶಾಸಕರ ಬೆಂಬಲಿಗರು ಕೇಳುತ್ತಾರೆ.

* ಶಾಸಕರ ಮನೆ ಸಮೀಪದಲ್ಲೇ ಅವರ ಸೋದರಿ ಜಯಂತಿ (ಆರೋಪಿ ನವೀನ್‌ ತಾಯಿ) ಮನೆ ಇದೆ. ರಾತ್ರಿ 8.30 ರ ಸುಮಾರಿಗೆ ಏಕಾಏಕಿ ದಾಳಿಗಿಳಿದ ದುಷ್ಕರ್ಮಿಗಳು, ಮನೆಯಲ್ಲಿ ದಾಂಧಲೆ ನಡೆಸಿ ಬೆಂಕಿ ಹಚ್ಚಿದ್ದಾರೆ. ಆದರೆ ಅವರ ಮನೆ ಹಾಗೂ ಪಕ್ಕದ ಮನೆಯಲ್ಲಿ .10 ಲಕ್ಷ ನಗದು ಹಾಗೂ ಚಿನ್ನಾಭರಣ ದೋಚಿದ್ದಾರೆ. ನಮ್ಮ ಮನೆಗೆ ನುಗ್ಗಿದವರು ಸ್ಥಳೀಯರಲ್ಲ. ಅಪರಿಚಿತರು ಎಂದು ಜಯಂತಿ ಹೇಳಿದ್ದಾರೆ. ಹೀಗಾಗಿ ಹೊರಗಿನ ಗೂಂಡಾಗಳನ್ನು ದೊಂಬಿಗೆ ಬಳಸಿಕೊಂಡಿರುವ ಶಂಕೆ ಇದೆ.

* ಗಲಭೆಯ ಮಾಸ್ಟರ್‌ ಮೈಂಡ್‌ ಎಂಬ ಆರೋಪ ಕೇಳಿ ಬಂದಿರುವ ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಮುಜಾಮಿಲ್‌ ಪಾಷ, 2019ರ ಮೇ ತಿಂಗಳಲ್ಲಿ ನಡೆದಿದ್ದ ಸಗಾಯಪುರ ವಾರ್ಡ್‌ ಉಪ ಚುನಾವಣೆಯಲ್ಲಿ ಶಾಸಕರ ಬೆಂಬಲಿಗ ಕಾಂಗ್ರೆಸ್‌ ಅಭ್ಯರ್ಥಿ ವಿರುದ್ಧ ಸೋಲುಂಡಿದ್ದ. ಅಲ್ಲದೆ ‘ಲಾಕ್‌ಡೌನ್‌ ವೇಳೆ ಶಾಸಕರು ನಾಪತ್ತೆಯಾಗಿದ್ದಾರೆ’ ಎಂದು ಡಿ.ಜೆ.ಹಳ್ಳಿ ಠಾಣೆಯಲ್ಲಿ ಸ್ಥಳೀಯ ಜೆಡಿಎಸ್‌ ಮುಖಂಡ ವಾಜಿದ್‌ ದೂರು ನೀಡಿದ್ದ. ಆಗ ರಾಜಿ ಸಂಧಾನ ನಡೆದು ಆತ ದೂರು ಹಿಂಪಡೆದಿದ್ದ. ಈಗ ಗಲಾಟೆಯಲ್ಲಿ ಸಹ ಈ ಇಬ್ಬರ ಹೆಸರು ಕೇಳಿ ಬಂದಿದೆ.

* ಅಯೋಧ್ಯೆ ರಾಮಮಂದಿರ ಶಿಲಾನ್ಯಾಸ ಅಂಗವಾಗಿ ಕಾವಲ್‌ಬೈರಸಂದ್ರದಲ್ಲಿ ನವೀನ್‌ ನೇತೃತ್ವದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆದಿತ್ತು. ಇದನ್ನು ಸ್ಥಳೀಯ ಕೆಲವರು ವಿರೋಧಿಸಿದ್ದರು. ಆಗಿನಿಂದ ಫೇಸ್‌ಬುಕ್‌ನಲ್ಲಿ ಎರಡು ಗುಂಪುಗಳ ಮಧ್ಯೆ ಪೋಸ್ಟ್‌ ವಾರ್‌ ನಡೆದಿತ್ತು ಎಂದು ಮೂಲಗಳು ಹೇಳಿವೆ.

* ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಠಾಣೆಗಳ ಮೇಲೆ ದಾಳಿ ನಡೆಸುವ ದಾಷ್ಟ್ರ್ಯತನ ತೋರಿದ್ದು ಏಕೆ? ಡಿ.ಜೆ.ಹಳ್ಳಿ ಠಾಣೆಯ ನೆಲಮಹಡಿಗೆ ಬೆಂಕಿ ಹಚ್ಚಿದ್ದಾರೆ. ಇತ್ತೀಚಿಗೆ ಮಾದಕ ವಸ್ತು ಜಾಲ ಸೇರಿದಂತೆ ಕೆಲವು ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ಬಂಧನವಾಗಿತ್ತು. ಈಗ ಪರಿಸ್ಥಿತಿಯನ್ನು ಕೆಲವರು ಬಳಸಿಕೊಂಡಿರಬಹುದು ಎನ್ನಲಾಗಿದೆ.