ಬೆಂಗಳೂರು[ಜ.08]: ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಎರಡು ದಿನಗಳ ‘ಭಾರತ ಬಂದ್‌’ ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ರಾಜ್ಯಾದ್ಯಂತ ಬಿಗಿ ಪೊಲೀಸ್‌ ಬಂದೋಬಸ್ತ್ ಕಲ್ಪಿಸಲಾಗಿದೆ.

ಈ ಬಂದೋಬಸ್ತ್ ಕಾರ್ಯದಲ್ಲಿ ಮಂಗಳವಾರ ಬೆಳಗ್ಗೆಯಿಂದಲೇ 54 ಸಾವಿರ ಪೊಲೀಸರು ಪಾಲ್ಗೊಳ್ಳಲಿದ್ದಾರೆ. ನಗರ ಪ್ರದೇಶದಲ್ಲಿ ಆಯುಕ್ತರು ಹಾಗೂ ವಲಯಗಳಲ್ಲಿ ಐಜಿಪಿ ಅವರಿಗೆ ಭದ್ರತೆ ಉಸ್ತುವಾರಿ ವಹಿಸಲಾಗಿದೆ. ಅಲ್ಲದೆ ನಗರ, ಜಿಲ್ಲಾ ಮತ್ತು ರಾಜ್ಯ ಸಶಸ್ತ್ರ ಮೀಸಲು ಪಡೆಯ 127 ತುಕಡಿಗಳನ್ನು ಭದ್ರತೆಗೆ ಬಳಸಿಕೊಳ್ಳಲಾಗುತ್ತಿದೆ.

ಈ ಸಂಬಂಧ ಸೋಮವಾರ ಸಂಜೆ ‘ಕನ್ನಡಪ್ರಭ’ ಜತೆ ಮಾತನಾಡಿದ ರಾಜ್ಯ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಕಮಲ್‌ ಪಂತ್‌, ಬಂದ್‌ ವೇಳೆ ಜನರಿಗೆ ತೊಂದರೆ ಉಂಟಾಗದಂತೆ ಮುನ್ನಚ್ಚರಿಕೆ ವಹಿಸಲಾಗಿದೆ ಎಂದರು.

ಬಸ್‌ ಹಾಗೂ ರೈಲು ನಿಲ್ದಾಣಗಳು ಸೇರಿದಂತೆ ಸೂಕ್ಷ್ಮಪ್ರದೇಶಗಳ ಕಡೆ ಹೆಚ್ಚಿನ ನಿಗಾವಹಿಸಲಾಗಿದೆ. ಈಗಾಗಲೇ ಅಧಿಕಾರಿಗಳ ಜತೆ ಸಮಾಲೋಚಿಸಿ ಸೂಕ್ತ ಮಾರ್ಗದರ್ಶ ನೀಡಲಾಗಿದೆ. ಎರಡು ದಿನಗಳ ಬಂದ್‌ ವೇಳೆ ಯಾವುದೇ ಹಂತದಲ್ಲೂ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದರು.

ಮುಷ್ಕರದ ಸಮಯದಲ್ಲಿ ಯಾವುದೇ ರೀತಿಯ ಪ್ರತಿಭಟನೆ, ಸಭೆ ಮತ್ತು ಮೆರವಣಿಗಗಳಿಗೆ ಅವಕಾಶ ಇರುವುದಿಲ್ಲ. ಬಲವಂತವಾಗಿ ಅಗತ್ಯ ಸೇವೆಗಳಿಗೆ ಅಡ್ಡಪಡಿಸಿದರೆ ಅಂತಹವರ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

-ಎಂ.ಬಿ.ಪಾಟೀಲ್‌, ಗೃಹ ಸಚಿವ