ಬೆಂಗಳೂರಿನಲ್ಲಿ ನಾಗರಕಟ್ಟೆಯೊಂದಕ್ಕೆ ಪೂಜೆ ಸಲ್ಲಿಸಲು ಅನುಮತಿ ನಿರಾಕರಿಸಲಾಗಿದೆ ಎಂಬ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ ಗೃಹ ಸಚಿವ ಜಿ. ಪರಮೇಶ್ವರ್
ವಿಧಾನ ಪರಿಷತ್(ಜು.13): ಪೂಜೆ ಮಾಡುವುದಕ್ಕೆ ಯಾವುದೇ ಪೊಲೀಸ್ ಅನುಮತಿ ಬೇಕಿಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ನಾಗರಕಟ್ಟೆಯೊಂದಕ್ಕೆ ಪೂಜೆ ಸಲ್ಲಿಸಲು ಅನುಮತಿ ನಿರಾಕರಿಸಲಾಗಿದೆ ಎಂಬ ಆರೋಪದ ಬಗ್ಗೆ ಅವರು ಈ ಸ್ಪಷ್ಟನೆ ನೀಡಿದ್ದಾರೆ.
ಬುಧವಾರ ಶೂನ್ಯ ವೇಳೆಯಲ್ಲಿ ಬಿಜೆಪಿ ಸದಸ್ಯ ವೈ.ಎ.ನಾರಾಯಸ್ವಾಮಿ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು, ‘ನಾಗರಕಟ್ಟೆಗೆ ಪೂಜೆ ಸಲ್ಲಿಸಲು ಯಾವುದೇ ಅನುಮತಿ ಬೇಕಿಲ್ಲ. ಆದರೆ ಪೂಜೆಗೆ ಕರೆ ನೀಡಿದ್ದ ಹಿಂದೂ ಸಂಘಟನೆ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಕ್ರಿಮಿನಲ್ ಹಿನ್ನೆಲೆವುಳ್ಳ ವ್ಯಕ್ತಿ. ಈತನ ವಿರುದ್ಧ 10 ಪ್ರಕರಣಗಳು ಇವೆ. ಒಂದು ಕೊಲೆ ಪ್ರಕರಣವೂ ಇದ್ದು, ಜಾಮೀನಿನ ಮೇಲೆ ಹೊರಗೆ ಇದ್ದಾನೆ. ಈತನ ಮೇಲೆ ಕ್ರಿಮಿನಲ್ ಕೇಸ್‌ಗಳು ಇರುವುದರಿಂದ ಪೊಲೀಸರು ನೋಟಿಸ್ ನೀಡಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶದಿಂದ ನೋಟಿಸ್ ಇಲ್ಲ. ಪೂಜೆ ಮಾಡುವುದಕ್ಕೆ ಯಾವುದೇ ಪೊಲೀಸ್ ಅನುಮತಿ ಬೇಕಿಲ್ಲ’ ಎಂದರು.
ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ವೇಯಲ್ಲಿ ಅಪಘಾತ ಹೆಚ್ಚಳ: ಸಚಿವ ಪರಮೇಶ್ವರ್ ಕಳವಳ
ಇದಕ್ಕೂ ಮುನ್ನ ಪುನೀತ್ ಕೆರೆಹಳ್ಳಿಗೆ ಬೆಂಗಳೂರಿನ ಉಪ್ಪಾರಪೇಟೆ ಠಾಣೆ ಪೊಲೀಸರು ನೋಟಿಸ್ ನೀಡಿದ್ದ ವಿಚಾರವಾಗಿ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರ ನಡುವೆ ಜಟಾಪಟಿಗೆ ಕಾರಣವಾಯಿತು. ಆರೋಪ-ಪ್ರತ್ಯಾರೋಪದಿಂದ ಗದ್ದಲ ಹೆಚ್ಚಾದ ಹಿನ್ನೆಲೆಯಲ್ಲಿ 10 ನಿಮಿಷಗಳ ಕಾಲ ಕಲಾಪ ಮುಂದೂಡಿದ ಪ್ರಸಂಗವೂ ಜರುಗಿತು.
ಮಾತಿನ ಚಕಮಕಿ:
ವಿಷಯ ಪ್ರಸ್ತಾಪಿಸಿದ ನಾರಾಯಣಸ್ವಾಮಿ, ‘ಬೆಂಗಳೂರಿನ ಮೆಜೆಸ್ಟಿಕ್ ತುಳಸಿವನ ಸಮೀಪದ ಪುರಾತನ ನಾಗರಕಟ್ಟೆಯನ್ನು ಪುನೀತ್ ಕೆರೆಹಳ್ಳಿ ಜೀರ್ಣೋದ್ಧಾರ ಮಾಡಿ ಸಂಕಲ್ಪ ಹಿಂದೂ ರಾಷ್ಟ್ರ ಸಂಘನೆಯಡಿ ಜು.9ರಂದು ನಾಗರಕಟ್ಟೆಪೂಜೆ ಹಮ್ಮಿಕೊಂಡಿದ್ದರು. ಈ ಪೂಜಾ ಕಾರ್ಯಕ್ರಮಕ್ಕೆ ಪ್ರತಿ ಹಿಂದೂ ಕಾರ್ಯಕರ್ತರು ಕುಟುಂಬ ಸಮೇತ ಬರುವಂತೆ ಸಾಮಾಜಿಕ ಜಾಲತಾಣದಲ್ಲಿ ಆಹ್ವಾನಿಸಿದ್ದರು. ಈ ಸಂಬಂಧ ಉಪ್ಪಾರಪೇಟೆ ಇನ್ಸ್‌ಪೆಕ್ಟರ್ ಆಕ್ಷೇಪ ವ್ಯಕ್ತಪಡಿಸಿ, ಪುನೀತ್ ಕೆರೆಹಳ್ಳಿಗೆ ನೋಟಿಸ್ ನೀಡಿದ್ದಾರೆ. ನಾಗರಕಟ್ಟೆಬಳಿ ಪೂಜೆ ಸಂಬಂಧ ಬಿಬಿಎಂಪಿ ಅಧಿಕಾರಿಗಳಿಂದ ಅನುಮತಿ ಪಡೆಯಬೇಕು ಎಂಬ ಇನ್ಸ್‌ಪೆಕ್ಟರ್ ಬೆದರಿಕೆ ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ. ಕೂಡಲೇ ಈ ನೋಟಿಸ್ ಹಿಂಪಡೆಯಬೇಕು. ಆ ಇನ್ಸ್‌ಪೆಕ್ಟರ್ ವಿರುದ್ಧ ಕ್ರಮ ಜರುಗಿಸಬೇಕು. ಈ ಸಂಬಂಧ ಗೃಹ ಸಚಿವರಿಂದ ಈಗಲೇ ಉತ್ತರ ಕೊಡಿಸಬೇಕು’ ಎಂದು ಆಗ್ರಹಿಸಿದರು. ಇದಕ್ಕೆ ಬಿಜೆಪಿಯ ಎಲ್ಲ ಸದಸ್ಯರ ದನಿಗೂಡಿಸಿದರು.
ಈ ಹಂತದಲ್ಲಿ ಸಚಿವ ಕೃಷ್ಣ ಬೈರೇಗೌಡ, ‘ರಾಜ್ಯವನ್ನು ಹಾಳು ಮಾಡಿದವರು ನೀವು. ಲೂಟಿ ಮಾಡಿದವರು ನೀವು’ ಎಂದು ಖಾರವಾಗಿ ಪ್ರತಿಕ್ರಿಯಿಸಿದರು. ಇದರಿಂದ ರೊಚ್ಚಿಗೆದ್ದ ಬಿಜೆಪಿ ಸದಸ್ಯರು, ಸದನದ ಬಾವಿಗೆ ಇಳಿದು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಲು ಆರಂಭಿಸಿದರು. ಸದನದಲ್ಲಿ ಗದ್ದಲ ಹೆಚ್ಚಾದ ಹಿನ್ನೆಲೆಯಲ್ಲಿ ಸಭಾಪತಿ ಹೊರಟ್ಟಿ10 ನಿಮಿಷಗಳ ಕಾಲ ಕಲಾಪ ಮುಂದೂಡಿದರು.
